ಬೆಳಗಾವಿ, ನ.4: ದೇಶದಲ್ಲಿ ಸ್ಮಾರ್ಟ್‌ಫೋನ್, ಹೈ-ಸ್ಪೀಡ್ ಇಂಟರ್ನೆಟ್ ಹಾಗೂ ಸುಸಜ್ಜಿತ ರಸ್ತೆಗಳು ದೈನಂದಿನ ಜೀವನದ ಭಾಗವಾಗಿರುವ ಡಿಜಿಟಲ್ ಯುಗದಲ್ಲೂ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ‘ಗವಳಿವಾಡ’ (Gawali Wada) ಗ್ರಾಮದ ಜನತೆ ಇನ್ನೂ ಮೂಲಭೂತ ಸೌಕರ್ಯಗಳೇ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಸುಮಾರು 8 ದಶಕಗಳು (80 ವರ್ಷಗಳು) ಕಳೆದಿದ್ದರೂ, ಖಾನಾಪುರ ತಾಲೂಕಿನ ಗೊಳ್ಯಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯದಂಚಿನಲ್ಲಿರುವ ಈ ಪುಟ್ಟ ಹಳ್ಳಿಗೆ ಇದುವರೆಗೆ ವಿದ್ಯುತ್ ಸಂಪರ್ಕವೇ ತಲುಪಿಲ್ಲದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಗವಳಿವಾಡದ 20 ಕುಟುಂಬಗಳ ಸುಮಾರು 175 ಜನರು ದೈನಂದಿನ ಅಗತ್ಯಗಳಿಗಾಗಿ ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ವಿದ್ಯುತ್, ಮೊಬೈಲ್ ನೆಟ್‌ವರ್ಕ್, ಟಿವಿ ಸಂಪರ್ಕ ಅಥವಾ ಸಂಚಾರಕ್ಕೆ ಸೂಕ್ತ ರಸ್ತೆಯೂ ಇಲ್ಲ. ದಟ್ಟ ಅರಣ್ಯದ ನಡುವೆ ಇರುವ ಈ ಹಳ್ಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಗಾಢ ಕತ್ತಲು ಆವರಿಸುತ್ತದೆ. ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಂಚರಿಸಲು ತೀವ್ರ ತೊಂದರೆ ಎದುರಿಸುತ್ತಿದ್ದು, ಕಾಡುಪ್ರಾಣಿಗಳು ಗ್ರಾಮಕ್ಕೆ ನುಗ್ಗುವ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ರಸ್ತೆ ಮತ್ತು ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದರಿಂದ ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಕೈಕೊಟ್ಟರೆ ಅಥವಾ ತುರ್ತು ವೈದ್ಯಕೀಯ ನೆರವು ಬೇಕಾದಾಗ ಆಸ್ಪತ್ರೆಗೆ ತಲುಪಿಸುವುದು ಸವಾಲಿನ ಕೆಲಸವಾಗಿದೆ. ಪ್ರತಿ ಚುನಾವಣೆಯ ವೇಳೆಯಲ್ಲೂ ಜನಪ್ರತಿನಿಧಿಗಳು ನೀಡುವ ಭರವಸೆಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!

ಗ್ರಾಮದ ನಿವಾಸಿ ಭಗು ಧಾಕ್ಲು ಧಂಗಾರ್ ಮಾತನಾಡಿ, “ನಾವು ಹಲವು ವರ್ಷಗಳಿಂದ ಎಲ್ಲಾ ಅಧಿಕಾರಿಗಳು ಹಾಗೂ ನಾಯಕರಿಗೆ ಮನವಿ ಸಲ್ಲಿಸಿದ್ದರೂ ಯಾರೊಬ್ಬರೂ ಸ್ಪಂದಿಸಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಗ್ರಾಮಸ್ಥರ ನಿಯೋಗವು ಖಾನಾಪುರ ತಹಶೀಲ್ದಾರ್ ಹಾಗೂ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಮನವಿ ಪತ್ರ ಸಲ್ಲಿಸಿದ್ದು, ತಕ್ಷಣವೇ ವಿದ್ಯುತ್ ಹಾಗೂ ರಸ್ತೆ ಸೌಕರ್ಯ ಒದಗಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ