ಭಾರತ ಚಿತ್ರರಂಗ ಅಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ತೀವ್ರ ಕುತೂಹಲ ಮೂಡಿಸಿರುವ ‘ರಾಮಾಯಣ‘ ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ. ಟ್ರೇಲರ್ ಬಂದಾಗಿನಿಂದಲೂ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ಗಳ ಸುರಿಮಳೆಯೇ ಆಗುತ್ತಿದೆ. ಈ ಎಲ್ಲ ಟ್ರೋಲ್ ಹಾಗೂ ಮೀಮ್ಸ್ಗಳಿಗೆ ನಟ ರಣಬೀರ್ ಕಪೂರ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.
ಐಐಎಂಯುಎನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ರಣಬೀರ್ ಕಪೂರ್, ‘ಕುಛ್ ತೋ ಲೋಗ್ ಕಹೇಂಗೆ, ಲೋಗೋ ಕಾ ಕಾಮ್ ಹೈ ಕೆಹನಾ’ ಎಂಬ ಹಿಂದಿ ಗೀತೆಯ ಸಾಲನ್ನು ನೆನಪಿಸಿಕೊಂಡಿದ್ದಾರೆ. ‘ಜನರು ಏನಾದರೂ ಹೇಳುತ್ತಲೇ ಇರುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳಬಾರದು ಎನ್ನುವುದು ಜೀವನದ ಉತ್ತಮ ತತ್ವ. ನಿಮ್ಮ ಕೆಲಸ, ನಿಮ್ಮ ಉದ್ದೇಶ ಮತ್ತು ನಿಮ್ಮ ಒಳ್ಳೆತನವನ್ನು ಪ್ರೀತಿಸುವ ಜನರು ಮಾತ್ರ ನಿಮಗೆ ಮುಖ್ಯವಾಗಬೇಕು’ ಎಂದು ರಣಬೀರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ನಿರ್ದೇಶಕ ನಿತೇಶ್ ತಿವಾರಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಪ್ರಯತ್ನ ನೂರು ಪ್ರತಿಶತ ನಿಷ್ಠೆಯಿಂದ ಕೂಡಿದ್ದರೆ ಬೇರೇನೂ ಯೋಚಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಸಹ ಟ್ರೋಲ್ಗಳನ್ನು ತಮಾಷೆಯಾಗಿ ಸ್ವೀಕರಿಸುತ್ತಿರುವುದಾಗಿ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಮೆಂಟ್ಗಳ ಮಧ್ಯೆಯೂ ಚಿತ್ರಕ್ಕೆ ಅದ್ಭುತ ಮೆಚ್ಚುಗೆಯೂ ಸಿಗುತ್ತಿದೆ ಎಂದು ನಮಿತ್ ವಿವರಿಸಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ನಡೆದ ಸಿನಿಮಾದ ಪ್ರೀಮಿಯರ್ ಪ್ರದರ್ಶನದ ನಂತರ ಕೆಲವರು ನೆಗೆಟಿವ್ ಕಮೆಂಟ್ ಮಾಡಿದ್ದರು. ಆದರೆ, ಹ್ಯಾನ್ಸ್ ಝಿಮ್ಮರ್ ಹಾಗೂ ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆಯನ್ನು ‘ಇಂಡಿವೈರ್’ ಸಂಸ್ಥೆ ಮುಕ್ತಕಂಠದಿಂದ ಹೊಗಳಿದೆ. ಕಣ್ಣಿಗೆ ಹಬ್ಬ ತರುವ ದೃಶ್ಯಾವಳಿಗಳು ಹಾಗೂ ಯುದ್ಧದ ಸನ್ನಿವೇಶಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತವೆ ಎಂದು ವಿಮರ್ಶೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ಬಾಲ ನಟಿ ದಿಶಿತಾ ಸೆಹ್ಗಲ್ ನಟನೆ
ಆದರೆ ರಾವಣನ ಪಾತ್ರದಲ್ಲಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯಕ್ಕೆ ಜಾಗತಿಕ ಮಟ್ಟದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನವೆಂಬರ್ 5ರ ದೀಪಾವಳಿ ಹಬ್ಬದ ಪ್ರಯುಕ್ತ ರಿಲೀಸ್ ಆಗುತ್ತಿರುವ ಈ ಸಿನಿಮಾ, ಈಗಾಗಲೇ ಅಡ್ವಾನ್ಸ್ ಬುಕಿಂಗ್ನಲ್ಲೇ 85 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

