ಬಾಲಿವುಡ್ ಯುವ ನಟ ಕಾರ್ತಿಕ್ ಆರ್ಯನ್ ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸಿದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ‘ಆಪರೇಷನ್ ಸಿಂಧೂರ್’ ಸಿನಿಮಾಗೆ ಕಾರ್ತಿಕ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ‘ವರೈಟಿ ಇಂಡಿಯಾ’ ವರದಿಯ ಪ್ರಕಾರ ಈ ಬಿಗ್ ಬಜೆಟ್ ಸಿನಿಮಾ ಅಧಿಕೃತವಾಗಿ ಕೈಗೂಡಿದೆ. ಭಾರತೀಯ ಸೇನೆಯ ಸಾಹಸಗಾಥೆಯನ್ನು ಒಳಗೊಂಡಿರುವ ಈ ಚಿತ್ರವು ಈಗಿನಿಂದಲೇ ಬಾಲಿವುಡ್ ಅಂಗಳದಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.

ಈ ಸಿನಿಮಾವನ್ನು ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ‘ಟೈನಿ’ ಧಿಲ್ಲೋನ್ ಬರೆದಿರುವ ಪುಸ್ತಕದ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ. ‘ಆಪರೇಷನ್ ಸಿಂಧೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟ್ರೈಕ್ಸ್ ಇನ್ಸೈಡ್ ಪಾಕಿಸ್ತಾನ್’ ಎನ್ನುವುದು ಈ ಪುಸ್ತಕದ ಹೆಸರು. ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ನಡೆದ ರಹಸ್ಯ ಮಿಲಿಟರಿ ಕಾರ್ಯಾಚರಣೆಯ ನೈಜ ಘಟನೆಗಳನ್ನು ಈ ಸಿನಿಮಾ ಒಳಗೊಂಡಿರಲಿದೆ. ಈ ಚಿತ್ರವು ಭದ್ರತಾ ಚಿತ್ರಣವನ್ನೇ ಬದಲಿಸಿದ ಮಹತ್ವದ ಕಥೆಯನ್ನು ಆಧರಿಸಿದೆ.

ಟಿ-ಸಿರೀಸ್ ಸಂಸ್ಥೆಯ ಭೂಷಣ್ ಕುಮಾರ್ ಹಾಗೂ ವಿವೇಕ್ ಅಗ್ನಿಹೋತ್ರಿ ಅವರ ‘ಐ ಆಮ್ ಬುದ್ಧ ಪ್ರೊಡಕ್ಷನ್ಸ್’ ಬ್ಯಾನರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಕಾರ್ತಿಕ್ ಆರ್ಯನ್ ‘ಕ್ಯಾಪ್ಟನ್ ಇಂಡಿಯಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಯೆಮೆನ್ ದೇಶದಲ್ಲಿ ನಡೆದ ಹೌತಿ ಸಂಘರ್ಷದ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈ ಪ್ರಾಜೆಕ್ಟ್ ಮುಗಿದ ತಕ್ಷಣ ಕಾರ್ತಿಕ್ ‘ಆಪರೇಷನ್ ಸಿಂದೂರ್’ ಸೆಟ್‌ಗೆ ಎಂಟ್ರಿ ಕೊಡಲಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತೀಯ ಸೇನೆ ತೆಗೆದುಕೊಂಡ ನಿರ್ಣಾಯಕ ಕ್ರಮಗಳೇ ಈ ಸಿನಿಮಾಗೆ ಪ್ರಮುಖ ಪ್ರೇರಣೆಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳ ಸಹಯೋಗದೊಂದಿಗೆ ಈ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ. ಕೇವಲ ಶಬ್ದ ಮಾಡುವುದಕ್ಕಾಗಿ ಈ ಸಿನಿಮಾ ಮಾಡುತ್ತಿಲ್ಲ. ನಿಜವಾದ ಸತ್ಯ ಸಂಗತಿಗಳು ಹಾಗೂ ಸ್ಪಷ್ಟತೆಯೊಂದಿಗೆ ಭಾರತೀಯ ಸೇನೆಯ ನೈಜ ಸಾಹಸವನ್ನು ಬೆಳ್ಳಿಪರದೆಯ ಮೇಲೆ ತೋರಿಸುವುದು ನಮ ಉದ್ದೇಶ ಎಂದು ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ತಂದು ಗಣಪತಿ ಪಾದಕ್ಕೆ ಅರ್ಪಿಸಿದ ನಟ ಕಾರ್ತಿಕ್ ಆರ್ಯನ್

ಮತ್ತೊಂದೆಡೆ ಕಾರ್ತಿಕ್ ಆರ್ಯನ್ ನಟನೆಯ ‘ನಾಗ್​ಝಿಲ್ಲಾ’ ಸಿನಿಮಾ 2027ರ ಫೆಬ್ರವರಿ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕರಣ್ ಜೋಹರ್ ಮತ್ತು ಮಹಾವೀರ್ ಜೈನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಫುಕೈ’ ಸಿನಿಮಾ ಖ್ಯಾತಿಯ ಮೃಗ್ದೀಪ್ ಸಿಂಗ್ ಲಂಬಾ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ನಟಿ ಪ್ರೀತಿ ಮುಖುಂದನ್ ಈ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.