‘ಬೇಬಿ ಡಾಲ್’ ಹಾಡಿನ ಮೂಲಕ ಪ್ರಸಿದ್ಧಿಗೆ ಬಂದ ಖ್ಯಾತ ಗಾಯಕಿ ಕನಿಕಾ ಕಪೂರ್ ತಮ್ಮ ಎರಡನೇ ಪತಿ ಗೌತಮ್ ಹತಿರಮಾನಿ ಅವರಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. 2022ರಲ್ಲಿ ಲಂಡನ್ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಈ ಜೋಡಿ, ನಾಲ್ಕು ವರ್ಷಗಳ ವೈವಾಹಿಕ ಜೀವನದ ನಂತರ ಪರಸ್ಪರ ಒಪ್ಪಂದದೊಂದಿಗೆ ಪ್ರತ್ಯೇಕಗೊಳ್ಳಲು ನಿರ್ಧರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಕನಿಕಾ, ಈ ಕಷ್ಟದ ಸಮಯದಲ್ಲಿ ಎಲ್ಲರೂ ತಮ್ಮ ಖಾಸಗೀತನವನ್ನು ಗೌರವಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ನಮ್ಮಿಬ್ಬರ ಹಾದಿಗಳು ಈಗ ಬೇರೆಯಾಗಿವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕನಿಕಾ ಬರೆದುಕೊಂಡಿದ್ದಾರೆ. ‘ನಾವು ಜೊತೆಯಾಗಿ ಕಳೆದ ಕ್ಷಣಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಅವರ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ. ವಿಚ್ಛೇದನಕ್ಕೆ ನಿಖರವಾದ ಕಾರಣವನ್ನು ಅವರು ಬಹಿರಂಗಪಡಿಸಿಲ್ಲ. ಗೌತಮ್ ಅವರನ್ನು ಹಲವು ವರ್ಷಗಳಿಂದ ಬಲ್ಲ ಕನಿಕಾ, 2022ರ ಮೇ 20ರಂದು ಲಂಡನ್ನಲ್ಲಿ ಮದುವೆಯಾಗಿದ್ದರು.
ಇದು ಕನಿಕಾ ಕಪೂರ್ ಅವರ ಎರಡನೇ ಮದುವೆಯಾಗಿದೆ. ಈ ಮೊದಲು ಅವರು ಉದ್ಯಮಿ ರಾಜ್ ಚಂದೋಕ್ ಅವರನ್ನು ಮದುವೆಯಾಗಿದ್ದರು. ಅವರಿಗೆ ಆಯಾನಾ, ಸಮೀರಾ ಮತ್ತು ಯುವರಾಜ್ ಎಂಬ ಮೂವರು ಮಕ್ಕಳಿದ್ದಾರೆ. 2012ರಲ್ಲಿ ಮೊದಲ ಪತಿಯಿಂದ ಬೇರ್ಪಟ್ಟ ನಂತರ ಅವರು ಭಾರತಕ್ಕೆ ಮರಳಿ ಸಂಗೀತ ಲೋಕದಲ್ಲಿ ಸಕ್ರಿಯರಾದರು. ಎರಡನೇ ಮದುವೆಯ ಪ್ರತಿಯೊಂದು ಶಾಸ್ತ್ರಗಳಲ್ಲೂ ಅವರ ಮೂವರು ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕನ್ನಡದಲ್ಲಿ ನಿಖಿಲ್ ಕುಮಾರಸ್ವಾಮಿ ನಟನೆಯ ‘ಜಾಗ್ವಾರ್’ ಸಿನಿಮಾದ ಸುಪ್ರಸಿದ್ಧ ‘ಸೆಲ್ಫಿ’ ಹಾಡನ್ನು ಹಾಡುವ ಮೂಲಕ ಕನಿಕಾ ಕಪೂರ್ ಸ್ಯಾಂಡಲ್ವುಡ್ ಪ್ರೇಕ್ಷಕರ ಮನಗೆದ್ದಿದ್ದರು. ‘ರಾಗಿಣಿ ಎಂಎಂಎಸ್ 2’ ಚಿತ್ರದ ‘ಬೇಬಿ ಡಾಲ್’ ಮತ್ತು ‘ಹ್ಯಾಪಿ ನ್ಯೂ ಇಯರ್’ ಚಿತ್ರದ ‘ಲವ್ಲಿ’ ಹಾಡುಗಳು ಇವರಿಗೆ ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟವು. ಆ ಬಳಿಕ ‘ಚಿಟ್ಟಿಯಾ ಕಾಲೈಯಾ’ ಸೇರಿದಂತೆ ಹಲವು ಸೂಪರ್ ಹಿಟ್ ಗೀತೆಗಳನ್ನು ಅವರು ನೀಡಿದ್ದಾರೆ.
ಇದನ್ನೂ ಓದಿ: ಎಆರ್ ರೆಹಮಾನ್ ನಿರ್ಮಿಸಲಿರುವ ಗಾಯಕಿಯ ಜೀವನ ಆಧರಿತ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ: ಯಾವುದು ಆ ಚಿತ್ರ?
ಗಾಯನದ ಹೊರತಾಗಿ ಸ್ವತಂತ್ರ ಆಲ್ಬಮ್ಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅವರು ಗುರುತಿಸಿಕೊಂಡಿದ್ದಾರೆ. ‘ದಿ ವಾಯ್ಸ್’ ಸಂಗೀತ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ವೈಯಕ್ತಿಕ ಜೀವನದ ಈ ಕಠಿಣ ಘಟ್ಟದಲ್ಲಿ ಅಭಿಮಾನಿಗಳು ಮತ್ತು ಮಾಧ್ಯಮಗಳು ತಮಗೆ ಬೆಂಬಲವಾಗಿ ನಿಲ್ಲಬೇಕೆಂದು ಅವರು ಕೋರಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

