ವಿವಿಧ ಸಂಸ್ಥಾನಗಳಲ್ಲಿ ಹರಿದುಹಂಚಿಹೋಗಿದ್ದ ಕನ್ನಡಿಗರನ್ನು ಒಂದೇ ಆಡಳಿತದಡಿ ತಂದು ಅಖಂಡ ಕರ್ನಾಟಕವನ್ನು ಕಟ್ಟಿದ ಚಾರಿತ್ರಿಕ ಹೋರಾಟವೇ ಕರ್ನಾಟಕ ಏಕೀಕರಣ ಚಳವಳಿ. ಇದು ಕೇವಲ ಭೌಗೋಳಿಕ ಗಡಿಗಳನ್ನು ಒಂದಾಗಿಸುವ ಪ್ರಯತ್ನವಾಗಿರಲಿಲ್ಲ; ಕನ್ನಡ ಭಾಷೆ, ಸಂಸ್ಕೃತಿ, ಅಸ್ಮಿತೆ ಮತ್ತು ಸ್ವಾಭಿಮಾನವನ್ನು ಉಳಿಸಿ ಬೆಳೆಸುವ ಜನಾಂದೋಲನವಾಗಿತ್ತು.

ಕರ್ನಾಟಕದ ಇತಿಹಾಸವನ್ನು ಗಮನಿಸಿದರೆ, ಕದಂಬರು ಕರ್ನಾಟಕದ ಉತ್ತರ ಭಾಗದಲ್ಲಿ ಸುಮಾರು ಎರಡು ಶತಮಾನಗಳ ಕಾಲ ಆಡಳಿತ ನಡೆಸಿದರು. ಅದೇ ಕಾಲದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಗಂಗರು ಆಳ್ವಿಕೆ ನಡೆಸುತ್ತಿದ್ದರು. ಅಂದರೆ, ಪ್ರಾಚೀನ ಕಾಲದಲ್ಲಿಯೇ ಕನ್ನಡ ನಾಡು ರಾಜಕೀಯವಾಗಿ ಎರಡು ಭಾಗಗಳಾಗಿತ್ತು. ಅನಂತರ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಕನ್ನಡ ನಾಡನ್ನು ಆಳಿದರು. ವಿಜಯನಗರ ಸಾಮ್ರಾಜ್ಯ, ಮೈಸೂರು ಸಂಸ್ಥಾನದ ಆಡಳಿತದಲ್ಲಿ ಕನ್ನಡ ನಾಡು ಸುಭಿಕ್ಷವಾಗಿತ್ತು.

ಮೈಸೂರು ಅರಸರ ಉತ್ತಮ ಆಡಳಿತದಿಂದ ತೃಪ್ತರಾಗಿದ್ದ ಅಲ್ಲಿನ ಜನರು ಏಕೀಕರಣದ ಬಗ್ಗೆ ಯಾವುದೇ ಆಸಕ್ತಿ ತೋರುತ್ತಿರಲ್ಲಿ. ಅದು ಅವರಿಗೆ ಬೇಕಿರಲೂ ಇಲ್ಲ. ಕನ್ನಡ ಭಾಷಿಕ ಪ್ರದೇಶಗಳನ್ನು ಒಂದಾಗಿಸಬೇಕು ಎಂಬ ತುರ್ತು ಅವರಿಗಿರಲಿಲ್ಲ. ಆದರೆ ಉತ್ತರ ಕರ್ನಾಟಕದ ಪರಿಸ್ಥಿತಿ ಭಿನ್ನವಾಗಿತ್ತು. ಅಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಾಗಿತ್ತು. ತಮ್ಮ ನೆಲದಲ್ಲಿಯೇ ತಮ್ಮ ಮಾತೃಭಾಷೆಯನ್ನು ಮಾತನಾಡಲಾಗದ ಸ್ಥಿತಿ ಅವರಿಗೆ ಒದಗಿತ್ತು. ಈ ಪರಿಸ್ಥಿತಿಯೇ ಆ ಜನರಲ್ಲಿ ಏಕೀಕರಣದ ಆಶಯವನ್ನು ಮೂಡಿಸಿತ್ತು.

ಇದೇ ಸಂದರ್ಭದಲ್ಲಿ ಉತ್ತರದ ಹಲವು ರಾಜ್ಯಗಳಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸಬೇಕೆಂಬ ಬೇಡಿಕೆಗಳು ಕೇಳಿಬಂದಿದ್ದವು. ಕರ್ನಾಟಕದಲ್ಲಿಯೂ ಈ ಆಲೋಚನೆಗೆ ಬೆಂಬಲ ದೊರೆಯಿತು. ಆದರೆ, ಅದನ್ನು ಜನಾಂದೋಲನವಾಗಿ ರೂಪಿಸುವುದು ಸುಲಭದ ಕೆಲಸವಾಗಿರಲಿಲ್ಲ.

ಈ ಕಾರ್ಯಕ್ಕೆ ಮೊದಲು ಕೈಹಾಕಿದವರು ಸಾಹಿತಿಗಳು, ವಿದ್ವಾಂಸರು ಮತ್ತು ಕನ್ನಡಾಭಿಮಾನಿಗಳು. 1890ರಲ್ಲಿ ರಾ.ಹ. ದೇಶಪಾಂಡೆಯವರ ಪ್ರಯತ್ನದಿಂದ ಧಾರವಾಡದಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗುತ್ತದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ, ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸುವುದು ಸಂಸ್ಥೆಯ ಪ್ರಮುಖ ಉದ್ದೇಶಗಳಾಗಿದ್ದವು. ಸಂಘದ ಸ್ಥಾಪನೆಯಿಂದ ಏಕೀಕರಣದ ಕಾರ್ಯಕ್ಕೆ ಹೊಸ ಬಲ ದೊರಕುತ್ತದೆ.

1915ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರಕ್ಕೆ ವೇದಿಕೆಯಾಯಿತು. ಸಾಹಿತ್ಯ ಸಮ್ಮೇಳನಗಳು ನಾಡಿನ ವಿವಿಧ ಭಾಗಗಳ ಕನ್ನಡಿಗರನ್ನು ಒಂದೆಡೆ ಸೇರಿಸಿ ಏಕೀಕರಣದ ಆಶಯಕ್ಕೆ ಬಲ ನೀಡಿದವು.

ಈ ಜಾಗೃತಿಯ ಮುಂಚೂಣಿಯಲ್ಲಿದ್ದವರು ಆಲೂರು ವೆಂಕಟರಾಯರು. ‘ಕರ್ನಾಟಕ ಕುಲಪುರೋಹಿತ’ ಎಂದೇ ಪ್ರಸಿದ್ಧರಾದ ಅವರು, ತಮ್ಮ ‘ಕರ್ನಾಟಕ ಗತವೈಭವ’ ಕೃತಿಯ ಮೂಲಕ ಕನ್ನಡಿಗರಿಗೆ ನಾಡಿನ ಇತಿಹಾಸ ಮತ್ತು ಪರಂಪರೆಯ ಪರಿಚಯ ಮಾಡಿಕೊಟ್ಟರು.

1920ರಲ್ಲಿ ನಾಗ್ಪುರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಆಶಯಕ್ಕೆ ಬೆಂಬಲ ದೊರೆಯಿತು. ಇದರಿಂದ ಕರ್ನಾಟಕದ ಏಕೀಕರಣದ ಪ್ರಯತ್ನಕ್ಕೆ ರಾಜಕೀಯ ನೆಲೆಯೂ ಲಭಿಸಿತು.

ಆದರೆ, ಮೈಸೂರು ಸಂಸ್ಥಾನವನ್ನು ಏಕೀಕೃತ ಕರ್ನಾಟಕದಲ್ಲಿ ಸೇರಿಸಬೇಕೇ? ಬೇಡವೇ? ಎಂಬ ಪ್ರಶ್ನೆ ಕೆಲಕಾಲ ಚರ್ಚೆಗೆ ಗ್ರಾಸವಾಗಿತ್ತು. ಕೊನೆಗೆ ಮೈಸೂರು ಸಂಸ್ಥಾನವೂ ಸೇರಿಯೇ ಕರ್ನಾಟಕ ಪ್ರಾಂತ್ಯ ರೂಪುಗೊಳ್ಳಬೇಕು ಎಂಬ ಅಭಿಪ್ರಾಯಕ್ಕೆ ಬೆಂಬಲ ದೊರೆಯಿತು. ಈ ನಿಟ್ಟಿನಲ್ಲಿ ಶ್ರೀರಂಗ, ಕೆ.ಆರ್. ಕಾರಂತ, ಕೆಂಗಲ್ ಹನುಮಂತಯ್ಯ ಮತ್ತು ಚಂಗಲರಾಯ ರೆಡ್ಡಿ ಮೊದಲಾದವರು ಪ್ರಮುಖ ಪಾತ್ರ ವಹಿಸಿದ್ದರು.

ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ಗುದ್ಲೆಪ್ಪ ಹಳ್ಳಿಕೇರಿ ಹಾಗೂ ಇತರ ರಾಜಕೀಯ ಮುಖಂಡರೂ ಈ ಹೋರಾಟಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು.

1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಬಳಿಕವೂ ಏಕೀಕರಣದ ಬೇಡಿಕೆ ಮುಂದುವರಿಯಿತು. ಭಾಷಾವಾರು ರಾಜ್ಯಗಳ ರಚನೆಯ ಚರ್ಚೆಯ ಸಂದರ್ಭದಲ್ಲಿ ಕನ್ನಡಿಗರು ತಮ್ಮ ಹಕ್ಕು ಮತ್ತು ನ್ಯಾಯಸಮ್ಮತ ಬೇಡಿಕೆಯನ್ನು ಮಂಡಿಸಿದರು. ಹಲವು ಹಂತಗಳ ಚರ್ಚೆ, ಸಂಘಟಿತ ಪ್ರಯತ್ನ ಮತ್ತು ರಾಜಕೀಯ ಪ್ರಕ್ರಿಯೆಗಳ ಫಲವಾಗಿ ಏಕೀಕರಣದ ಕನಸು ನನಸಾಯಿತು.

1956ರ ನವೆಂಬರ್ 1ರಲ್ಲಿ ವಿವಿಧ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು. ಇದು ಕನ್ನಡಿಗರ ದಶಕಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯವಾಗಿತ್ತು.

ಏಕೀಕರಣದ ನಂತರವೂ ಬೀದರ್ ಪರಿಸ್ಥಿತಿ ವಿಭಿನ್ನವಾಗಿತ್ತು. ಆ ಪ್ರದೇಶದಲ್ಲಿ ಮರಾಠಿ ಪ್ರಭಾವ ಹೆಚ್ಚಿತ್ತು. ಕನ್ನಡ ಶಾಲೆಗಳಾಗಲಿ, ಕನ್ನಡ ಫಲಕಗಳಾಗಲಿ ಅಲ್ಲಿ ಕಾಣಿಸುತ್ತಿರಲಿಲ್ಲ. ಈ ಪರಿಸ್ಥಿತಿಯನ್ನು ಬದಲಿಸಲು ಪಣತೊಟ್ಟ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕರ್ತರು, ಅಲ್ಲಿನ ಗ್ರಾಮಗಳಿಗೆ ತೆರಳಿ ಕನ್ನಡ ಜಾಗೃತಿಯನ್ನು ಮೂಡಿಸುತ್ತಾರೆ.

ಡಾ. ಮೇಲುಕೋಟೆ ಮತ್ತು ಅನ್ನದಾನಯ್ಯ ಪುರಾಣಿಕರಂತಹ ನಾಯಕರು ಈ ಕಾರ್ಯಕ್ಕೆ ನೆರವಾಗುತ್ತಾರೆ. ಕನ್ನಡದ ಪುಸ್ತಕಗಳು, ಪತ್ರಿಕೆಗಳು, ಪಠ್ಯಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಜನರಿಗೆ ತಲುಪಿಸಲಾಗುತ್ತದೆ. 1957–58ರಲ್ಲಿ ಡಿ.ಎಲ್. ನರಸಿಂಹಾಚಾರ್ಯರ ಅಧ್ಯಕ್ಷತೆಯಲ್ಲಿ ಬೀದರ್‌ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಈ ರೀತಿಯಲ್ಲಿ ಏಕೀಕರಣದ ಉದ್ದೇಶವನ್ನು ಸಾಕಾರಗೊಳಿಸಲಾಗುತ್ತದೆ.

ನಂತರ, 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಗುತ್ತದೆ. ಅಂದಿನಿಂದ ನವೆಂಬರ್ 1 ಕನ್ನಡ ರಾಜ್ಯೋತ್ಸವವಾಗಿ ಕನ್ನಡಿಗರ ನಾಡುನುಡಿಯ ಅಭಿಮಾನ ಮತ್ತು ಒಗ್ಗಟ್ಟಿನ ಸಂಕೇತವಾಗಿ ಆಚರಣೆಯಾಗುತ್ತಿದೆ.

(ಆಧಾರ: ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದ ಪುಸ್ತಕಗಳಿಂದ ಆಯ್ದ ಮಾಹಿತಿ)