ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪ ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ, ಇಂದು ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ INDIA ಮೈತ್ರಿಕೂಟದ ಬೃಹತ್ ರ‍್ಯಾಲಿಗೆ ಸಿದ್ಧತೆಗಳು ಪೂರ್ಣಗೊಂಡಿವೆ.

ಶಕ್ತಿ ಪ್ರದರ್ಶನದ ಉದ್ದೇಶದಿಂದ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವಿವಿಧ ರಾಜ್ಯಗಳ ವಿರೋಧ ಪಕ್ಷಗಳ ನಾಯಕರು ಮತ್ತು ಬೆಂಬಲಿಗರು ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿದ್ದಾರೆ.

ಮುಖ್ಯ ವೇದಿಕೆಯ ಮೇಲೆ ಬೃಹತ್ ತ್ರಿವರ್ಣ ಧ್ವಜದ ಮಾದರಿಯ ಮೇಲ್ಛಾವಣಿ ನಿರ್ಮಿಸಲಾಗಿದ್ದು, INDIA ಮೈತ್ರಿಕೂಟದ ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ.

ಮಿಂಟೋ ರಸ್ತೆಯಿಂದ ರಾಮಲೀಲಾ ಮೈದಾನದವರೆಗೆ ಮೆರವಣಿಗೆ ನಡೆಸಿದ ಬಳಿಕ ಬೃಹತ್ ರ‍್ಯಾಲಿ ಆಯೋಜಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಈ ರ‍್ಯಾಲಿಯಲ್ಲಿ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

'ರಾಹುಲ್ ಗಾಂಧಿಯನ್ನು ಅಣಕು ಪ್ರಧಾನಿ ಮಾಡಿ; ಪ್ರತಿದಿನ ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ ಅಂತ ಭಜನೆ ಮಾಡಿ': 'ಮಹಾಭಿಯೋಗ'ಕ್ಕೆ BJP ಟಾಂಗ್

ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಕಾರ್ಮಿಕರು ಹಾಗೂ ನಾಗರಿಕ ಸಮಾಜದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಇಂಡಿಯಾ ಮೈತ್ರಿಕೂಟ ಮನವಿ ಮಾಡಿದೆ. ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳೂ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.

ಅಭಿಜೀತ್ ದೀಪ್ಕೆ ಸ್ಥಾಪಿಸಿರುವ ಯುವಜನರ ಸಂಘಟನೆಯಾದ ಕಾಕ್ರೋಚ್ ಜನತಾ ಪಾರ್ಟಿ (CJP) ಕೂಡ ಇಂದಿನ ಪ್ರತಿಭಟನಾ ಕಾರ್ಯಕ್ರಮಕ್ಕೆ ಬೆಂಬಲ ಘೋಷಿಸಿದೆ. ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಬೇಡಿಕೆಯನ್ನು ಪುನರುಚ್ಚರಿಸಿರುವ ಪಕ್ಷ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಹೋರಾಡುವ ಸಂಘಟನೆಗಳೊಂದಿಗೆ ತಾನು ನಿಲ್ಲುವುದಾಗಿ ತಿಳಿಸಿದೆ.

'ಚಲೋ ದಿಲ್ಲಿ' ಎಂದು ಹೆಸರಿಸಲಾಗಿರುವ ಮೆರವಣಿಗೆ ಮಧ್ಯಾಹ್ನ 12 ಗಂಟೆಗೆ ಮಿಂಟೋ ರಸ್ತೆ-ಕನಾಟ್ ಪ್ಲೇಸ್ ಜಂಕ್ಷನ್‌ನಿಂದ ಆರಂಭವಾಗಿ ರಾಮಲೀಲಾ ಮೈದಾನದಲ್ಲಿ ಅಂತ್ಯಗೊಳ್ಳಲಿದೆ. ರಾಮಲೀಲಾ ಮೈದಾನದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ರ‍್ಯಾಲಿ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಿಂದ INDIA ಮೈತ್ರಿಕೂಟದ ನಾಯಕರು ತೆರೆದ ಬಸ್‌ಗಳಲ್ಲಿ ಮೆರವಣಿಗೆ ಆರಂಭವಾಗುವ ಸ್ಥಳಕ್ಕೆ ತೆರಳುವ ನಿರೀಕ್ಷೆಯಿದೆ.

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ರಾಮಲೀಲಾ ಮೈದಾನದಲ್ಲಿ ಭರದ ಸಿದ್ಧತೆ

ವಿರೋಧ ಪಕ್ಷಗಳ ಹಿರಿಯ ನಾಯಕರಿಗೆ ಮುಖ್ಯ ವೇದಿಕೆಯ ಮೇಲೆ ಬೃಹತ್ ತ್ರಿವರ್ಣ ಧ್ವಜದ ಮಾದರಿಯ ಪೆಂಡಾಲ್ ನಿರ್ಮಿಸಲಾಗಿದೆ. ಇಂಡಿಯಾ ಮೈತ್ರಿಕೂಟದ ರಾಜ್ಯ ಘಟಕಗಳ ಪ್ರತಿನಿಧಿಗಳಿಗೆ ಮತ್ತೊಂದು ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಬಿಳಿ ಬಣ್ಣದ ಮೇಲ್ಛಾವಣಿ ಹೊಂದಿರುವ ಸಾಲುಸಾಲು ಪೆಂಡಾಲ್‌ಗಳನ್ನು ಹಾಕಲಾಗಿದ್ದು, ಜನರ ಸಂಚಾರ ನಿಯಂತ್ರಿಸಲು ಲೋಹದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ತಾತ್ಕಾಲಿಕ ವೇದಿಕೆಗಳನ್ನೂ ನಿರ್ಮಿಸಲಾಗುತ್ತಿದೆ. ಟ್ರಕ್‌ಗಳ ಮೂಲಕ ಕುರ್ಚಿಗಳು ಹಾಗೂ ಇತರ ಸಾಮಗ್ರಿಗಳನ್ನು ಸ್ಥಳಕ್ಕೆ ತರಲಾಗುತ್ತಿದೆ.

ವಿವಿಧ ವರ್ಗಗಳ ಜನರಿಗೆ ಪ್ರತ್ಯೇಕ ಪ್ರವೇಶ ದ್ವಾರ ಮತ್ತು ಆವರಣಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಜನಸಂದಣಿ ನಿಯಂತ್ರಿಸಲು ಸ್ವಯಂಸೇವಕರನ್ನು ನಿಯೋಜಿಸುವಂತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸುವಂತೆ ಸಂಘಟಕರಿಗೆ ಸೂಚಿಸಲಾಗಿದೆ. ಸಂಚಾರ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡುವಂತೆಯೂ ತಿಳಿಸಲಾಗಿದೆ. ರ‍್ಯಾಲಿ ನಡೆಯುವ ಸ್ಥಳದಲ್ಲಿ ರಾತ್ರಿ ತಂಗಲು ಅನುಮತಿ ಇಲ್ಲ.

ರ‍್ಯಾಲಿಯಲ್ಲಿ 10 ಲಕ್ಷದವರೆಗೆ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಇಂಡಿಯಾ ಮೈತ್ರಿಕೂಟದ ನಾಯಕರು ತಿಳಿಸಿದ್ದಾರೆ. ದೆಹಲಿ ಪೊಲೀಸರು ಸುಮಾರು 50,000 ಜನರು ಭಾಗವಹಿಸಬಹುದು ಎಂದು ಅಂದಾಜಿಸಿದ್ದಾರೆ.

'ನಾನು ನಿಮ್ಮ ಕಿರಿಯ ಸಹೋದರನಿದ್ದಂತೆ': ದಿಲ್ಜಿತ್ ದೋಸಾಂಜ್ ಬಳಿ ಕ್ಷಮೆಯಾಚಿಸಿದ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ!

ಖಾಲಿ ಇರುವ ಸಂದರ್ಭದಲ್ಲಿ ರಾಮಲೀಲಾ ಮೈದಾನದಲ್ಲಿ 45,000ರಿಂದ 50,000 ಜನರಿಗೆ ಅವಕಾಶ ಕಲ್ಪಿಸಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ, ಕುರ್ಚಿಗಳು, ಪ್ರತ್ಯೇಕ ಆವರಣಗಳು ಮತ್ತು ಸಂಚಾರಕ್ಕೆ ನಿಗದಿಪಡಿಸಿದ ಮಾರ್ಗಗಳ ವ್ಯವಸ್ಥೆ ಮಾಡಿದ ಬಳಿಕ ಈ ಸಾಮರ್ಥ್ಯ 30,000ರಿಂದ 40,000ಕ್ಕೆ ಇಳಿಯಲಿದೆ. ಮೈದಾನದ ಹೊರಭಾಗದಲ್ಲಿಯೂ ಜನಸಂದಣಿ ಹೆಚ್ಚಾದರೆ ನಿರ್ವಹಿಸಲು ಅಗತ್ಯ ಜಾಗವನ್ನು ಕಾಯ್ದಿರಿಸಲಾಗುತ್ತದೆ.

ಭದ್ರತೆ ಮತ್ತು ಜನಸಂದಣಿ ನಿಯಂತ್ರಣಕ್ಕಾಗಿ ಮೆರವಣಿಗೆಯ ಮಾರ್ಗ ಹಾಗೂ ರ‍್ಯಾಲಿ ನಡೆಯುವ ಸ್ಥಳದಲ್ಲಿ 4,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ತುಕಡಿಗಳನ್ನು ನಿಯೋಜಿಸಲಾಗುತ್ತದೆ. ರಾಮಲೀಲಾ ಮೈದಾನವನ್ನು 14 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ವಲಯದ ಮೇಲ್ವಿಚಾರಣೆಯನ್ನು ಸಹಾಯಕ ಪೊಲೀಸ್ ಆಯುಕ್ತರ ದರ್ಜೆಯ ಅಧಿಕಾರಿಗಳು ವಹಿಸಿಕೊಳ್ಳಲಿದ್ದಾರೆ.

ಕಣ್ಗಾವಲಿಗಾಗಿ 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್‌ಗಳು ಮತ್ತು ದೇಹಕ್ಕೆ ಅಳವಡಿಸಿಕೊಳ್ಳುವ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಮೈದಾನದೊಳಗೆ ನಿಯಂತ್ರಣ ಕೊಠಡಿಯನ್ನೂ ಸ್ಥಾಪಿಸಲಾಗಿದೆ.

ದೆಹಲಿಯಲ್ಲಿ ಸಂಚಾರ ನಿರ್ಬಂಧ

ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ದೆಹಲಿಯ ಹಲವು ಭಾಗಗಳಲ್ಲಿ ಸಂಚಾರ ನಿರ್ಬಂಧಗಳು ಜಾರಿಯಲ್ಲಿರಲಿವೆ. ಐಟಿಒ, ದೆಹಲಿ ಗೇಟ್, ರಾಜ್‌ಘಾಟ್, ಅಜ್ಮೇರಿ ಗೇಟ್ ಮತ್ತು ತುರ್ಕಮಾನ್ ಗೇಟ್ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತದೆ.

ಬಹದ್ದೂರ್ ಶಾ ಜಫರ್ ಮಾರ್ಗ, ಜವಾಹರಲಾಲ್ ನೆಹರು ಮಾರ್ಗ, ಮಿಂಟೋ ರಸ್ತೆ ಮತ್ತು ದೇಶಬಂಧು ಗುಪ್ತ ರಸ್ತೆಗಳ ಸುತ್ತಮುತ್ತಲಿನ ರಸ್ತೆಗಳನ್ನು ತಪ್ಪಿಸುವಂತೆ ವಾಹನ ಸವಾರರಿಗೆ ಸಲಹೆ ನೀಡಲಾಗಿದೆ. ಎಲ್‌ಎನ್‌ಜೆಪಿ ಮತ್ತು ಜಿಬಿ ಪಂತ್ ಆಸ್ಪತ್ರೆಗಳತ್ತ ಆಂಬ್ಯುಲೆನ್ಸ್‌ಗಳು ಹಾಗೂ ತುರ್ತು ಸೇವೆಯ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ದೆಹಲಿ ರೈಲು ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳುವಂತೆ ಸೂಚಿಸಲಾಗಿದೆ.

ರಾಮಲೀಲಾ ಮೈದಾನದಲ್ಲಿ ರ‍್ಯಾಲಿ ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಮಿಂಟೋ ರಸ್ತೆ-ಕನಾಟ್ ಪ್ಲೇಸ್ ಜಂಕ್ಷನ್‌ನಿಂದ ಉದ್ದೇಶಿತ ಮೆರವಣಿಗೆ ನಡೆಸಲು ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.