ಹುಬ್ಬಳ್ಳಿ/ಮೈಸೂರು/ಕಲಬುರಗಿ: ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ಶನಿವಾರ ಕರೆ ನೀಡಿದ್ದ ಬಂದ್ಗೆ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.
ರೈತರು ದಿಢೀರ್ ಬಂದ್ ಘೋಷಿಸಿದ್ದರಿಂದ, ಈ ಭಾಗದಲ್ಲಿ ಊರಿನಿಂದ ಊರಿಗೆ ಹೋಗಲು ಜನ ಪರದಾಡಿದರು. ವಾರಾಂತ್ಯದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರವಾಸಿತಾಣಗಳಿಗೆ ಹೊರಟಿದ್ದರು. ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದಿದ್ದರಿಂದ ಪ್ರಯಾಣ ಬೆಳೆಸಲು ಆಗದೇ ವಾಪಸ್ ಆದರು. ಸಂಜೆ ವೇಳೆಗೆ ಹಂತಹಂತವಾಗಿ ವಾಹನಗಳ ಸಂಚಾರ ಸುಗಮಗೊಂಡಿತು.
ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರೈತ ಸಂಘದ ಕಾರ್ಯಕರ್ತರು ಕಪ್ಪುಬಟ್ಟೆ ಪ್ರದರ್ಶಿಸಲು ಪ್ರಯತ್ನಿಸಿದರು.
ಮೈಸೂರು ನಗರದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡ ಮಲಗಿ ರೈತರು ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಗೋದಾಮಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಂದ್ಗೆ ಬೆಂಬಲ ನೀಡಿಲ್ಲ ಎಂದು ಆರೋಪಿಸಿ ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಕಬ್ಬು ಬೆಳೆಗಾರರು, ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯುತ್ತಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ನುಗ್ಗಿ ದಾಂದಲೆ ನಡೆಸಿದರು.
ಬಾಗಲಕೋಟೆ ನಗರದಲ್ಲಿ ‘ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ರಸ್ತೆತಡೆ ಮಾಡುವಂತಿಲ್ಲ’ ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ಆದೇಶ ಹೊರಡಿಸಿದ್ದರೂ ಅದು ಪಾಲನೆ ಆಗಲಿಲ್ಲ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಸಂಗಾಪುರದಲ್ಲಿ ಕಬ್ಬು ಬೆಳೆಗಾರರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರಿಗೆ ಘೇರಾವ್ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ‘ನಾನು ನಿಮ್ಮ ಭೂಮಿಗೆ ನೀರು ಕೊಟ್ಟಿರುವುದಕ್ಕೆ ಇಂದು ನೀವು ಕಬ್ಬು ಬೆಳೆದಿದ್ದೀರಿ ಎಂಬುದನ್ನು ಮರೆಯಬೇಡಿ. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಪರ ಇದೆ. ನಿಮ್ಮ ಬೇಡಿಕೆಗೆ ಸ್ಪಂದಿಸಲಿದೆ, ತಾಳ್ಮೆ ವಹಿಸಿ’ ಎಂದು ಸಚಿವರು ಪ್ರತಿಕ್ರಿಯಿಸಿದರು. ಆಗ ರೈತರು ಮತ್ತು ಸಚಿವರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ತಾರಕಕ್ಕೇರುತ್ತಿದ್ದಂತೆ, ರೈತರನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದರು.
ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಲೋಕಾಪುರದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ರೈತರು ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ಬಂದ್ ಮಾಡಿದರು. ಹೊಸಪೇಟೆ–ಸೊಲ್ಲಾಪುರ, ಬೆಳಗಾವಿ–ರಾಯಚೂರು, ಹುಬ್ಬಳ್ಳಿ–ಸೊಲ್ಲಾಪುರ ಸೇರಿ ರಾಜ್ಯ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಟನೆ ತೀವ್ರವಾಗಿತ್ತು.
ಹುನಗುಂದ ಬಳಿ ಹೊಸಪೇಟೆ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ಎರಡೂ ಬದಿ ವಾಹನಗಳು ಕಿಲೊ ಮೀಟರ್ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ರೈತರು ರಸ್ತೆಯಲ್ಲೇ ಅಡುಗೆ ಮಾಡಿ, ಅಲ್ಲಿಯೇ ಊಟ ಮಾಡಿದರು. ಜಮಖಂಡಿ, ಲೋಕಾಪುರ, ಮಹಾಲಿಂಗಪುರ, ಹುನಗುಂದ, ಮುಧೋಳ, ಬೀಳಗಿ, ಅಮೀನಗಡ, ವರಗೋಡದಿನ್ನಿ, ಬಾದಾಮಿ, ಕುಳಗೇರಿ ಕ್ರಾಸ್ ಸೇರಿ ಹಲವೆಡೆ ರೈತರು ಪ್ರತಿಭಟಿಸಿದರು. ಬೀಳಗಿಯಲ್ಲಿ ಅಂಗಡಿಗಳನ್ನೂ ಬಂದ್ ಮಾಡಲಾಗಿತ್ತು.
ಬಾಗಲಕೋಟೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ರಾಜಕೀಯ ನಾಯಕರು ಕರೆದಲ್ಲಿಗೆ ಹೋಗಬೇಡಿ. ನೀವಿದ್ದಲ್ಲಿಗೇ ಬಂದು ನಿರ್ಣಯ ನೀಡಲಿ. ಒಳಗೆ ಕರೆದೊಯ್ದು ನಿಮ್ಮ ಮೇಲೆ ಆಪಾದನೆ ಹೊರೆಸಿ, ನಿಮ್ಮ ಒಗ್ಗಟ್ಟು ಮುರಿಯುತ್ತಾರೆ. ಎಲ್ಲವೂ ರೈತರ ಎದುರಿಗೇ ನಿರ್ಣಯವಾಗಲಿ’ ಎಂದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ಬಬಲೇಶ್ವರದಲ್ಲಿ ಸಂಪೂರ್ಣ ಬಂದ್ ಇತ್ತು. ನಿಡಗುಂದಿ, ಸಿಂದಗಿ, ಚಡಚಣ, ಝಳಕಿ, ಬಬಲೇಶ್ವರ, ಹೂವಿನ ಹಿಪ್ಪರಗಿ, ಕೊಲ್ಹಾರದಲ್ಲೂ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ಕಲಘಟಗಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆಯಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮತ್ತು ಮುಂಡಗೋಡ ಪಟ್ಟಣದಲ್ಲೂ ಬಂದ್ ಇತ್ತು.
ಗದಗ ಜಿಲ್ಲೆ ಮುಂಡರಗಿಯ ವಿಜಯನಗರ ಶುಗರ್ಸ್ ಕಾರ್ಖಾನೆಯಲ್ಲಿ ಅಕ್ಟೋಬರ್ 26ರಿಂದ ಕಬ್ಬು ನುರಿಸುವಿಕೆಗೆ ಚಾಲನೆ ನೀಡಲಾಗಿತ್ತು. ಆದರೆ, ಪ್ರತಿಭಟನೆ ತೀವ್ರಗೊಂಡಿರುವ ಕಾರಣ ಕಾರ್ಖಾನೆ ಬಂದ್ ಮಾಡಲಾಗಿದೆ.
ಹಾವೇರಿ ಜಿಲ್ಗೆಯ ತಾಲ್ಲೂಕುಗಳಲ್ಲಿ ಪ್ರತಿಭಟನೆಗಳು ನಡೆದವು. ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ಮನೆ ಎದುರು ಪ್ರತಿಭಟನೆ ಆರಂಭಿಸಿರುವ ರೈತರು, ಶನಿವಾರವೂ ಮುಂದುವರಿಸಿದರು. ಅಲ್ಲಿ ಪೆಂಡಾಲ್ ನಿರ್ಮಿಸಿ, ಸ್ಥಳದಲ್ಲೇ ಅಡುಗೆ ಮಾಡಿದರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹೊಳಲು ಗ್ರಾಮದ ಬಳಿಯ ಹೆದ್ದಾರಿಯನ್ನು ರೈತರು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಮೈಲಾರ–ತೋರಣಗಲ್ಲು ರಾಜ್ಯ ಹೆದ್ದಾರಿ ಬಂದ್ ಮಾಡಿದರು.


ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ರಾಸ್ನ ರಸ್ತೆಯಲ್ಲಿ ಶನಿವಾರ ರೈತರು ಭಜನೆ ಮಾಡಿದರು.-

ಬಂದ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬಸ್ಗಳು ಸಾಲಾಗಿ ನಿಂತಿರುವುದು.
ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಪ್ರತಿಭಟನೆ ರೈತರ ಹೋರಾಟಕ್ಕೆ ಸ್ವಾಮೀಜಿಗಳ ಬೆಂಬಲ ಬಂದ್ ಆಚರಣೆಯಿಂದ ನಡೆಯದ ವಹಿವಾಟು
- ಬಸನಗೌಡ ಪಾಟೀಲ, ಯತ್ನಾಳ ಶಾಸಕರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಗೆ ರಾಜ್ಯ ಸರ್ಕಾರ ಸಿದ್ಧವಿಲ್ಲ. ಕಮಿಷನ್ ಕಾರಣಕ್ಕೆ ಹೊರ ರಾಜ್ಯ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸುತ್ತದೆ.- ದಿಂಗಾಲೇಶ್ವರ ಸ್ವಾಮೀಜಿ, ಬಾಳೇಹೊಸೂರುಸಮಿತಿ ರಚನೆಯನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು. ಹೋರಾಟ ಹತ್ತಿಕ್ಕಲು ಸಮಿತಿ ರಚನೆಯಾಗಿದೆ. ಸ್ವಾಮಿನಾಥನ್ ವರದಿ ಜಾರಿಗೊಳಿಸಲಿ.ಶಶಿಕಾಂತ ಗುರೂಜಿ ಗೌರವಾಧ್ಯಕ್ಷ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಡಿ.ಕೆ.ಶಿವಕುಮಾರ್ ರೈತರ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರ ವಿರುದ್ಧದ ಹೋರಾಟವನ್ನು ಬೆಂಬಲಿಸಿದರು. ಪ್ರೋತ್ಸಾಹಧನಕ್ಕೆ ಆಗ್ರಹಿಸಿದರೆ ನಿಷೇಧಾಜ್ಞೆ ಹೇರಿದ್ದಾರೆ.ಚೂನಪ್ಪ ಪೂಜೇರಿ ಅಧ್ಯಕ್ಷ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಟನ್ ಕಬ್ಬಿಗೆ ₹1 ಸಾವಿರ ಪ್ರೋತ್ಸಾಹಧನ ನೀಡದ ಹೊರತು ಮುಖ್ಯಮಂತ್ರಿಗೆ ಬೇರೆ ದಾರಿಯೇ ಇಲ್ಲ. ಇವರಿಗೆ ನಾವು ಅನ್ನ ಹಾಕಿದ್ದೇವೆ. ನಮಗೆ ಮಣ್ಣು ಹಾಕುತ್ತಿದ್ದಾರೆಬೆಳಗಾವಿಯಲ್ಲಿ ತೀವ್ರ ಹೋರಾಟ
ಬೆಳಗಾವಿ ಜಿಲ್ಲೆಯಲ್ಲಿ ಹೋರಾಟದ ಸ್ವರೂಪ ತೀವ್ರಗೊಂಡು ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸಿತು. ಗೋಕಾಕ ಕಾಗವಾಡ ಯರಗಟ್ಟಿ ಹುಕ್ಕೇರಿ ನಿಪ್ಪಾಣಿ ಮೂಡಲಗಿ ಅಥಣಿ ಸಂಕೇಶ್ವರ ಕೌಜಲಗಿ ಮುಗಳಖೋಡ ಹತ್ತರಗಿ ಗುರ್ಲಾಪುರ ಬೈಲಹೊಂಗಲ ಪಟ್ಟಣಗಳಲ್ಲಿ ಸಂಜೆಯವರೆಗೆ ವಾಣಿಜ್ಯ ಚಟುವಟಿಕೆಗಳು ವಿರಳವಾಗಿದ್ದವು. ನಿಪ್ಪಾಣಿ ಹಾಗೂ ಕಾಗವಾಡ ತಾಲ್ಲೂಕಿನ ಗಡಿಯಲ್ಲಿ ಕರ್ನಾಟಕ– ಮಹಾರಾಷ್ಟ್ರದ ಮಾರ್ಗಗಳನ್ನು ರೈತರು ಬಂದ್ ಮಾಡಿದರು. ‘ಭಾನುವಾರವೂ ರಸ್ತೆತಡೆ ಮಾಡುತ್ತೇವೆ. ಆದರೆ ರಾಜ್ಯೋತ್ಸವದ ಮೆರವಣಿಗೆಗೆ ಅವಕಾಶ ಮಾಡಿಕೊಡುತ್ತೇವೆ’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ ಚೌಗಲಾ ಹೇಳಿದ್ದಾರೆ.

