ಬೆಂಗಳೂರು: ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆಗಳು ಇಲ್ಲದ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಸರ್ಕಾರ ನಿರ್ಧರಿಸಿದ್ದು, ನ. 2ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ಈ ತೀರ್ಮಾನದಿಂದ, ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಲವು ತಲೆಮಾರುಗಳಿಂದ ವಾಸಿಸುತ್ತಿರುವ ಸುಮಾರು 30 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ದಾಖಲೆಗಳು ಲಭ್ಯವಿಲ್ಲದ ಗ್ರಾಮಠಾಣಾ ಆಸ್ತಿಗಳಿಗೆ ನೋಂದಾಯಿತ ದಾಖಲೆಗಳಿಂದ ವಿನಾಯಿತಿ ನೀಡಲಾಗಿದೆ. ಡಿಸೆಂಬರ್‌ನಿಂದಲೇ ಇ–ಸ್ವತ್ತುಗಳನ್ನು ವಿತರಣೆ ಮಾಡಲಾಗುತ್ತದೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ, ‘ಗ್ರಾಮೀಣ ಆಸ್ತಿ ಮಾಲೀಕರ ಬಹುದಿನಗಳ ಸಮಸ್ಯೆ ಪರಿಹರಿಸಲು, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳಿಗೆ ತಿದ್ದುಪಡಿ ಮಾಡಿ, ಅಧಿಸೂಚನೆ ಹೊರಡಿಸಲಾಗಿದೆ. ಇ-ಸ್ವತ್ತು–2 ತಂತ್ರಾಂಶದಲ್ಲೂ ಮಾರ್ಪಾಡು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಆಸ್ತಿಗೆ ಸಂಬಂಧಿಸಿದ ಯಾವುದೇ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರೆ, ಅರ್ಜಿದಾರರು ಮಾಲೀಕರಲ್ಲ ಎಂಬ ದೂರುಗಳು ಬಂದರೆ ಪರಿಶೀಲನೆ ನಡೆಸಲಾಗುವುದು. ಅಗತ್ಯವಿದ್ದರೆ ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು. ಇ–ಸ್ವತ್ತು ವಿತರಿಸಿದ ನಂತರವೂ ತಪ್ಪುಮಾಹಿತಿ ನೀಡಿರುವುದು ದೃಢಪಟ್ಟರೆ ರದ್ದು ಮಾಡಲಾಗುವುದು ಎಂದರು. 

ವಸತಿ ಯೋಜನೆಯ ಮನೆಗಳಿಗೆ ಹಕ್ಕುಪತ್ರ ಪಡೆದಿದ್ದು, ಪ್ರಸ್ತುತ ಹಕ್ಕುಪತ್ರ ಲಭ್ಯವಿಲ್ಲದಿದ್ದರೂ ಹಕ್ಕುಪತ್ರ ವಿತರಣಾ ಪ್ರಾಧಿಕಾರದ ದೃಢೀಕರಣ ಪಡೆದು ಇ -ಸ್ವತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಲೆನಾಡು ಪ್ರದೇಶಗಳಿಗೆ ಅನುಕೂಲವಾಗುವಂತೆ ಮನೆಗೆ ಹೊಂದಿಕೊಂಡಂತಿರುವ ಜಾಗಗಳಿಗೂ ಇ-ಸ್ವತ್ತು ನೀಡಲಾಗುವುದು ಎಂದರು.

- ಈಶ್ವರ ಖಂಡ್ರೆ, ಗ್ರಾಮೀಣಾಭಿವೃದ್ಧಿ ಸಚಿವ 2025ನೇ ಏಪ್ರಿಲ್ 7ರ ಪೂರ್ವದ ವಿದ್ಯುತ್‌ ಬಿಲ್‌ಗಳ ಆಧಾರದ ಮೇಲೆ ಸ್ಥಳ ಪರಿಶೀಲನೆ ಮಾಡಿ ಗ್ರಾಮ ಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡಲಾಗುವುದು

ಕೃಷಿ: ನೋಂದಣಿ ಇಲ್ಲದಿದ್ದರೂ ಇ–ಸ್ವತ್ತು

ನಮೂನೆ 11–ಬಿ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಿ ಗ್ರಾಮೀಣ ಭಾಗದ ಜನರು ನೋಂದಾಯಿತ ಪತ್ರ ಇಲ್ಲದೆ ತಮ್ಮ ಕೃಷಿ ಜಮೀನಿನಲ್ಲಿ ವಾಸ ಕೃಷಿ ಉಪಯೋಗಕ್ಕೆ ನಿರ್ಮಿಸಿರುವ ಕಟ್ಟಡಗಳಿಗೆ ಇ-ಸ್ವತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ಕೃಷಿ ಭೂಮಿಯಲ್ಲಿ ವಸತಿ ಯೋಜನೆಯಡಿ ಸೃಜನೆಯಾಗಿರುವ ಕಟ್ಟಡಗಳಿಗೆ ಮತ್ತು ಪಾರಂಪರಿಕ ಅರಣ್ಯವಾಸಿಗಳು ಅರಣ್ಯ ಭಾಗದಲ್ಲಿ ವಾಸವಾಗಿರುವವರು ಅರಣ್ಯ ಹಕ್ಕು ಕಾಯ್ದೆಯಂತೆ ಹಕ್ಕುಪತ್ರ ಪಡೆದಿದ್ದಲ್ಲಿ ಅಂತಹ ಆಸ್ತಿಗಳಿಗೂ ಇ–ಸ್ವತ್ತು ಸಿಗಲಿದೆ ಎಂದರು. ಹಿತ್ತಲು ಮನೆಯಂಗಳ ಸೇರಿ ಒಟ್ಟು 4 ಸಾವಿರ ಚದರಡಿ ಒಳಗಿರುವ ನಿವೇಶನ ಆಸ್ತಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಈ ತಿದ್ದುಪಡಿಯಿಂದ ಗ್ರಾಮೀಣ ಭಾಗದ ಶೇ 90ಕ್ಕೂ ಹೆಚ್ಚು ಆಸ್ತಿಗಳಿಗೆ ನಮೂನೆ 11–ಎ/11–ಬಿ ನೀಡಲು ಅವಕಾಶವಾಗಲಿದೆ ಎಂದು ಹೇಳಿದರು.

‘ಬಿ-ಖರಾಬಿಗೆ ಇ–ಸ್ವತ್ತು ನೀಡಲಾಗದು’

‘ಬೆಂಗಳೂರು ಸೇರಿದಂತೆ ನಗರ ಪಟ್ಟಣಗಳ ಸೆರಗಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕಂದಾಯ ಭೂಮಿಗಳಲ್ಲಿ ಬಿ–ಖರಾಬು ಭೂಮಿಯನ್ನು ಸೇರಿಸಿಕೊಂಡು ಸಿದ್ಧಪಡಿಸಿರುವ ನಿವೇಶನಗಳಿಗೆ ಇ–ಸ್ವತ್ತು ವಿತರಿಸಲು ಸಾಧ್ಯವಿಲ್ಲ. ಈ ಕುರಿತು ಕಂದಾಯ ಸಚಿವರ ಜತೆ ಚರ್ಚಿಸಲಾಗುವುದು’ ಎಂದು ಈಶ್ವರ ಖಂಡ್ರೆ ಹೇಳಿದರು.  ‘ಅರ್ಜಿ ಸಲ್ಲಿಸಿದವರು ಕೆಲವೆಡೆ ಕೈಬರಹದ ಖಾತೆ ಹಾಕಿದ್ದಾರೆ. ಪಹಣಿ ಹಾಕಿಲ್ಲ. ಹೀಗಾಗಿ ಸದರಿ ನಿವೇಶನ ಇರುವ ಬಡಾವಣೆಯಲ್ಲಿ ಬಿ–ಖರಾಬು ಜಮೀನು ಇದೆಯೇ ಇಲ್ಲವೇ ಎಂಬುದು ದೃಢಪಡುವುದಿಲ್ಲ. ಇದು ಇ–ಸ್ವತ್ತು ವಿತರಣೆ ವಿಳಂಬಕ್ಕೆ ಕಾರಣವಾಗಿದೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಬಿ–ಖರಾಬು ದೃಢಪಡಿಸಿಕೊಳ್ಳದೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಿಲ್ಲ’ ಎಂದರು.