ಹಾವೇರಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ 151.25 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದ ಅಭ್ಯರ್ಥಿ ಶಂಕರ ಬನ್ನೂರ, ಮೊಬೈಲ್ ಬಳಸಿ ಪರೀಕ್ಷೆ ಬರೆದಿದ್ದರೆಂಬ ಮಾಹಿತಿ ಉಪ ವಿಭಾಗಾಧಿಕಾರಿ ವಿಚಾರಣೆಯಿಂದ ಪತ್ತೆಯಾಗಿದೆ.

ಹಾನಗಲ್‌ನ ಎಲೆಪೇಟೆ ನಿವಾಸಿಯಾದ ಶಂಕರ ಬೆನ್ನೂರ ಅವರನ್ನು ಶುಕ್ರವಾರ ಮಧ್ಯಾಹ್ನ ವಶಕ್ಕೆ ಪಡೆದಿರುವ ಹಾನಗಲ್ ಠಾಣೆ ಪೊಲೀಸರು, ಶಿಗ್ಗಾವಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.

‘ಶಿಗ್ಗಾವಿಯ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಕೊಂಡೊಯ್ದಿದ್ದ ಶಂಕರ, ಗೂಗಲ್ ಲೆನ್ಸ್ ಆ್ಯಪ್ ಮೂಲಕ ಪ್ರಶ್ನೆ ಪತ್ರಿಕೆ ಸ್ಕ್ಯಾನ್ ಮಾಡಿ ಉತ್ತರಗಳನ್ನು ಬರೆದಿದ್ದ. ಈ ದೃಶ್ಯ, ಪರೀಕ್ಷಾ ಕೇಂದ್ರದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೇ ಪುರಾವೆ ಆಧರಿಸಿ, ಶಂಕರನನ್ನು ವಶಕ್ಕೆ ಪಡೆಯಲಾಗಿದೆ. ಆತ, ತಪ್ಪೊಪ್ಪಿಗೆ ನೀಡಲು ಸಿದ್ಧನಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪರೀಕ್ಷೆ ಕೇಂದ್ರಕ್ಕೆ ಹೋಗುವಾಗ, ಪ್ರವೇಶ ದ್ವಾರದಲ್ಲಿ ಆಧಾರ್ ಕಾರ್ಡ್ ಮಾತ್ರ ಕೇಳಿದರು. ಅದನ್ನು ತೋರಿಸಿ, ಮೊಬೈಲ್ ಸಮೇತ ಕೇಂದ್ರಗೊಳಗೆ ಹೋದೆ. ಕೊಠಡಿಯ ಕೊನೆಯ ಡೆಸ್ಕ್‌ನಲ್ಲಿ ನನ್ನ ನಂಬರ್ ಇತ್ತು. ಅಲ್ಲಿಯೇ ಮೊಬೈಲ್ ತೆರೆದು, ಗೂಗಲ್‌ ಲೆನ್ಸ್‌ ಸಹಾಯದಿಂದ ಸ್ಕ್ಯಾನ್‌ ಮಾಡಿ ಒಎಂಆರ್ ಪ್ರತಿ ಭರ್ತಿ ಮಾಡಿದೆ. ಇದನ್ನು ಯಾರೊಬ್ಬರೂ ಗಮನಿಸಲಿಲ್ಲ’ ಎಂದು ಶಂಕರ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ವಿಎಒ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಶಂಕರ ಬನ್ನೂರ ಅವರ ಫಲಿತಾಂಶದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆದಿತ್ತು. ‘ಎಸ್‌ಎಸ್‌ಎಲ್‌ಸಿಯಲ್ಲಿ ಶೇ 40.96, ಪಿಯುಸಿಯಲ್ಲಿ ಶೇ 49ರಷ್ಟು ಅಂಕ ಪಡೆದಿರುವ ಶಂಕರ, ಕಾನ್‌ಸ್ಟೆಬಲ್ ಪರೀಕ್ಷೆಯಲ್ಲಿ 25 ಅಂಕ ಮಾತ್ರ ಗಳಿಸಿದ್ದ. ವಿಇಒ ಪರೀಕ್ಷೆಯಲ್ಲಿ 151.25 ಅಂಕ ಗಳಿಸಿರುವುದು ಹೇಗೆ’ ಎಂದು ಪ್ರಶ್ನಿಸಿದ್ದ ವಿದ್ಯಾರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ದೂರು ನೀಡಿದ್ದರು.

ಗೂಗಲ್ ಲೆನ್ಸ್ ಆ್ಯಪ್ ಬಳಸಿ ಪ್ರಶ್ನೆಪತ್ರಿಕೆ ಸ್ಕ್ಯಾನ್‌ ಆರೋಪ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ ಅಕ್ರಮ ಕುರಿತು ಅಭ್ಯರ್ಥಿಗಳಿಂದ ಕೆಇಎಗೆ ದೂರು