ಬೆಂಗಳೂರು: ‘ಸಾರ್ವಜನಿಕ ಕ್ಷೇತ್ರದಲ್ಲಿ ನಾಯಕರಿಗೆ ಮುಜುಗರ ಉಂಟು ಮಾಡುವ ಕೆಲಸದಿಂದ ಮಾಧ್ಯಮಗಳಲ್ಲಿ ಅಹಿತಕರ ಸುದ್ದಿಗಳು ಬಂದಿದ್ದವು. ಈ ವಿಚಾರವಾಗಿ ಕಾರಣ ಕೇಳಿ ನೀಡಿದ್ದ ನೋಟಿಸ್ಗೆ ಕೃಪಾ ಆಳ್ವ ಉತ್ತರ ನೀಡದ ಕಾರಣ ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಉತ್ತರ ನೀಡಲು ಮೂರು ದಿನ ಕಾಲಾವಕಾಶ ನೀಡಲಾಗಿತ್ತು. ಆದರೆ, ಆ ನೋಟಿಸ್ ವಾಪಸ್ ಬಂದಿದೆ. ಅವರ ವಿರುದ್ಧ ನೇರ ಸಾಕ್ಷ್ಯ ಇರುವ ಕಾರಣ ಉಚ್ಚಾಟಿಸಿದ್ದೇವೆ’ ಎಂದರು.
ಕೃಪಾ ಆಳ್ವ ಅವರು ವಿದೇಶಕ್ಕೆ ಹೋಗಿರುವ ಬಗ್ಗೆ ಕೇಳಿದಾಗ, ‘ಈ ವಿಚಾರವನ್ನು ಐಬಿ, ಸಿಬಿಐ ನೋಡಿಕೊಳ್ಳುತ್ತವೆ. ನಾನು ಮಾತನಾಡುವುದಿಲ್ಲ’ ಎಂದರು.
‘ಇಷ್ಟು ತಡವಾಗಿ ಕ್ರಮ ಯಾಕೆ’ ಎಂಬ ಪ್ರಶ್ನೆಗೆ, ‘ನಾವು ದುಡುಕಿ ಹೆಜ್ಜೆ ಇಡುವ ಮುನ್ನ, ಅವರನ್ನು ಕೇಳಿ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಒಂದು ಅವಕಾಶ ನೀಡಬೇಕು. ಅವರು ಉತ್ತರ ನೀಡದೇ ಇದ್ದಾಗ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಹೇಳಿದರು.
‘ಆನೆಯ ಹಿಂದೆ ಹೋಗುವ ತೋಳ, ನರಿ’
‘ಆನೆ ನಡೆಯುವಾಗ ಆದೇನಾದರೂ ಬಿದ್ದುಬಿಡಬಹುದು ಎಂದು ಅದರ ಹಿಂದೆ ತೋಳ ಮತ್ತು ನರಿ ನಡೆದುಕೊಂಡು ಹೋಗುತ್ತಿರುತ್ತವೆ. ಅದರಲ್ಲಿ ತಪ್ಪೇನಿಲ್ಲ’ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ದೇವೇಗೌಡರನ್ನು ಯಡಿಯೂರಪ್ಪ ಅವರು ಭೇಟಿ ಮಾಡಿದ ಬಳಿಕ ಈ ಸರ್ಕಾರದ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ನಾಗಪುರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಬಗೆಗಿನ ಪ್ರಶ್ನೆಗೆ, ‘ನಾಗಪುರ ಎಂದರೆ ಕನ್ನಡದಲ್ಲಿ ಹಾವಿನಪುರ. ದೇಶದಲ್ಲಿ ದ್ವೇಷದ ವಿಷ ಕಾರುವ ಸಂಘಟನೆಯ ಕತ್ತಿಗೆ ಕೈ ಹಾಕಿ ಹಿಡಿದಿದ್ದೇವೆ. ಅಲ್ಲಿ ಆರಂಭವಾಗಿದ್ದು, ದೇಶದಲ್ಲಿ ಅವರನ್ನು ಮಣಿಸುವ ಸಂದೇಶ ರವಾನಿಸುತ್ತೇವೆ’ ಎಂದರು.
ಕಾಂಗ್ರೆಸ್ ಮಣಿಸಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆಯಲ್ಲ ಎಂಬ ಪ್ರಶ್ನೆಗೆ, ‘ಮಹಾಮಾನವನ ಕ್ಷೇತ್ರ ವಾರಾಣಸಿಯಲ್ಲಿ ಬಹಳ ಕೆಟ್ಟದಾಗಿ ಸೋತಿದ್ದಾರೆ. ಬಿಜೆಪಿ ಅಧ್ಯಕ್ಷ ಪ್ರತಿನಿಧಿಸುವ ಬಿಹಾರದಲ್ಲಿ, ನಿತಿನ್ ಗಡ್ಕರಿ ಹಾಗೂ ಯೋಗಿ ಆದಿತ್ಯನಾಥ ಕ್ಷೇತ್ರಗಳಲ್ಲಿಯೂ ಅವರು ಸೋತಿದ್ದಾರಲ್ಲ’ ಎಂದರು.

