ಮಂಡ್ಯ: ‘ಜನ ಕೊಟ್ಟ ಅಧಿಕಾರವನ್ನು ನಾನು ಎಂದಿಗೂ ಕೆಟ್ಟತನಕ್ಕೆ ಬಳಸುವುದಿಲ್ಲ. ದ್ವೇಷ, ಅಸೂಯೆಪಡುವುದನ್ನು ಬೇರೆಯವರಿಗೆ ಬಿಟ್ಟಿದ್ದೇನೆ. ಅವರು ಇರುವವರೆಗೂ ನಮಗೆ ಒಳ್ಳೆಯದು. ನಮ್ಮ ಶಾಸಕರು ಸರಿ ದಾರಿಯಲ್ಲಿ ನಡೆಯಲು ಅವರು ಮಾರ್ಗದರ್ಶನ ತೋರಿದ್ದಾರೆ. ಅವರಿಗೆ ಶುಭವಾಗಲಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಂಡ್ಯ ಜಿಲ್ಲೆಯ ₹1,793 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ಟಿಂಗ್‌ ಆಪರೇಷನ್‌’ ಆರೋಪ ಮಾಡಿದವರಿಗೆ ಪರೋಕ್ಷ ತಿರುಗೇಟು ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಲಿಷ್ಠ ವಿರೋಧ ಪಕ್ಷ ಇರಬೇಕು. ಸರ್ಕಾರದ ತಪ್ಪನ್ನು ಟೀಕಿಸಿ, ಸಲಹೆ ಕೊಡಲಿ. ಆದರೆ, ರೈತರಿಗೆ ಸಹಾಯವಾಗಲಿ ಎಂದು ಹಾಲಿನ ದರ ಹೆಚ್ಚಳ ಮಾಡಿರುವುದನ್ನೂ ಬಿಜೆಪಿಯವರು ವಿರೋಧಿಸುತ್ತಾರೆ. ರೈತರ ಬದುಕಿಗೆ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಮುಳ್ಳಾಗಿವೆ ಎಂದು ಜರಿದರು.

‘ಭೂಮಿ ನೀಡಲು ಸರ್ಕಾರ ಸಿದ್ಧ’

ಮಂಡ್ಯದಲ್ಲಿ ಎ.ಆರ್‌.ಎ.ಐ (ಆಟೊಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ) ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ಭೂಮಿ ನೀಡಲು ವಿಳಂಬ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ‘ಘಟಕ ಸ್ಥಾಪನೆಗೆ ಅಗತ್ಯ ಭೂಮಿ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ’ ಎಂದು ಸ್ಪಷ್ಟಪಡಿಸಿದರು.

‘ಮೊದಲು 100 ಎಕರೆ ಜಾಗ ಕೇಳಿದ್ದರು. ಈಗ 500 ಎಕರೆ ಕೇಳುತ್ತಿದ್ದಾರೆ. ಎ.ಆರ್‌.ಎ.ಐ ಅಧಿಕಾರಿಗಳೇ ತಮಗೆ ಯಾವ ಜಾಗ ಬೇಕೆಂದು ಗುರುತಿಸಿ ತೋರಿಸಲಿ. ಅಗತ್ಯವಿದ್ದರೆ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಜಾಗ ಒದಗಿಸಿಕೊಡುತ್ತೇವೆ. ಒಂದು ಕಡೆ ಭೂಸ್ವಾಧೀನಕ್ಕೆ ಮುಂದಾದಾಗ ರೈತರನ್ನು ಎತ್ತಿಕಟ್ಟಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸುತ್ತಾರೆ. ಮತ್ತೊಂದು ಕಡೆ ಜಮೀನು ಕೊಡುವುದಿಲ್ಲ’ ಎಂದು ದೂರುತ್ತಾರೆ ಎಂದು ಅವರು ಕುಟುಕಿದರು.

ಜಲವಿವಾದಕ್ಕೆ ‘ಮೇಕೆದಾಟು’ ಪರಿಹಾರ

ಮೇಕೆದಾಟು ಯೋಜನೆ ಜಾರಿಯಾದರೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೂ ಅನುಕೂಲವಾಗುತ್ತದೆ. ‌ಈ ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅರಣ್ಯ ಇಲಾಖೆಗೆ ಪರ್ಯಾಯ ಜಾಗ ನೀಡಲು ತೀರ್ಮಾನಿಸಿದ್ದು, ಈಗಾಗಲೇ 2,500 ಎಕರೆ ಜಾಗ ಒದಗಿಸಲಾಗಿದೆ. ಉಳಿದ ಜಾಗವನ್ನೂ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಯೋಜನೆಗೆ ಸಂಬಂಧಿಸಿದ ಅರಣ್ಯ ಭೂಮಿಗೆ ಪರ್ಯಾಯ ಜಮೀನು ನೀಡುವ ವಿವರಗಳನ್ನು ಅರಣ್ಯ ಇಲಾಖೆಯ ಪೋರ್ಟಲ್‌ನಲ್ಲಿ ಪ್ರಕಟಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಶೀಘ್ರ ಅನುಮತಿ ನೀಡಬೇಕು. ಅನುಮತಿ ದೊರೆತ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು‘ ಎಂದರು.