ಬೆಂಗಳೂರು, ನವೆಂಬರ್ 01): ಬನಶಂಕರಿಯ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ʻಗಾಂಧಿ ಹತ್ಯೆಯ ಸತ್ಯʼ ನಾಟಕ ಪ್ರದರ್ಶನದ ವೇಳೆ ಏರ್ಪಟ್ಟ ಗದ್ದಲದ ವೇಳೆ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಮುಖಕ್ಕೆ ಮಸಿ ಬಳಿಯಲಾಗಿದೆ. ನಾಟಕದಲ್ಲಿ ಮಹಾತ್ಮ ಗಾಂಧೀಜಿ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆ ಬಳಸಲಾಗಿದೆ ಎಂದು ಆಕ್ರೋಶಗೊಂಡ ಸಂಘಟನೆಗಳ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಕಾಡೆಮಿಗೆ ನುಗ್ಗಿದ್ದಾರೆ. ಬಳಿಕ ಮಾತಿನ ಚಕಮಕಿ ನಡೆದು ಅಡ್ಡಂಡ ಕಾರ್ಯಪ್ಪ ಅವರನ್ನ ಎಳೆದಾಡಿ ಮುಖಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಗಾಂಧಿ ಹತ್ಯೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕುಶಾಲ್ ಎಂಬುವರ ದೂರು ದಾಖಲಿಸಿದ್ದರೆ, ಇತ್ತ ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿ ಹಲ್ಲೆ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ನಾಟಕ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರತಿದೂರು ದಾಖಲಿಸಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯ ದೂರುಗಳು ದಾಖಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ನೋಡಿ: ಬೆಂಗಳೂರಲ್ಲಿ ಗಾಂಧಿ ಹತ್ಯೆಯ ನಾಟಕ ಪ್ರದರ್ಶನದ ವೇಳೆ ಹೈಡ್ರಾಮಾ; ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದ ಕಾಂಗ್ರೆಸ್ ಕಾರ್ಯಕರ್ತರು
ಬನಶಂಕರಿ 2ನೇ ಹಂತದಲ್ಲಿರುವ ಅಕಾಡೆಮಿಯಲ್ಲಿ ‘ಕೊಡಗು ರಂಗಭೂಮಿ ಟ್ರಸ್ಟ್’ನಿಂದ ‘ಗಾಂಧಿ ಹತ್ಯೆಯ ಸತ್ಯ’ ಎಂಬ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ನಾಟಕವನ್ನ ಅಡ್ಡಂಡ ಕಾರ್ಯಪ್ಪ ಅವರೇ ನಿರ್ದೇಶನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿಯವರನ್ನ ದೇಶ ವಿರೋಧಿ ಹಾಗೂ ಮುಸ್ಲಿಮರ ಪರ ಎಂದು ಬಿಂಬಿಸಿ ಸುಳ್ಳು ಪ್ರಚಾರ ಮಾಡಿದ್ದಾರೆ. ನಾಟಕದ ಮೂಲಕ ಅಡ್ಡಂಡ ಕಾರ್ಯಪ್ಪ ತಪ್ಪು ಸಂದೇಶ ರವಾನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಮಹಾತ್ಮ ಗಾಂಧೀಜಿ ಯವರು ದೇಶ ವಿಭಜಿಸಿದರು ಎಂದು ನಾಟಕದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಪಾದಿಸಿ ಬನಶಂಕರಿ ಠಾಣೆಗೆ ಸಂಘಟನೆಗಳ ಮುಖಂಡರು ದೂರು ನೀಡಿದ್ದಾರೆ.
‘ಬೆಂಗಳೂರಿನಲ್ಲಿ ನಡೆಯುವ ನಾಟಕ ಪ್ರದರ್ಶನಕ್ಕೆ ಮೈಸೂರಿನ ಟಿಕೆಟ್ಗಳನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಅದನ್ನು ಪ್ರಶ್ನಿಸಿದರೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ನಾಟಕದ ರಚನೆ, ನಿರ್ದೇಶನ ಮಾಡಿರುವ ಅಡ್ಡಂಡ ಕಾರ್ಯಪ್ಪ, ನಾಟಕದಲ್ಲಿ ಅಭಿನಯಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

