ಶಿವಮೊಗ್ಗ, ನವೆಂಬರ್ 17: ಶಿವಮೊಗ್ಗದ ಕೇಂದ್ರ ಕಾರಾಗೃಹದ ಆವರಣದ ಬಳಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಜೈಲಿನೊಳಗೆ ಕೈದಿಗಳಿಗೆ ತಲುಪಿಸುವ ಉದ್ದೇಶದಿಂದ ತಂದಿರಿಸಲಾಗಿದ್ದ ಮೊಬೈಲ್ ಫೋನ್‌ಗಳು ಮತ್ತು ಸಿಗರೇಟ್‌ಗಳನ್ನು ಜೈಲು ಅಧಿಕಾರಿಗಳು ಮತ್ತು ಕೆಎಸ್ಐಎಸ್ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಕೆಎಸ್ಐಎಸ್ಎಫ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ, ಎರಡು ಅನುಮಾನಾಸ್ಪದ ಪೊಟ್ಟಣಗಳು ಸಿಕ್ಕಿವೆ. ಪೊಟ್ಟಣಗಳನ್ನು ಪರಿಶೀಲಿಸಿದಾಗ, ಕಪ್ಪು ಟೇಪ್‌ನಿಂದ ಸುತ್ತಿಡಲಾದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಒಂದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ನಾಲ್ಕು ಸಾಮಾನ್ಯ ಮೊಬೈಲ್ ಫೋನ್‌ಗಳು, ಮೊಬೈಲ್ ಬ್ಯಾಟರಿಗಳು, ಚಾರ್ಜರ್‌ಗಳು ಮತ್ತು ಹೆಡ್‌ಫೋನ್‌ಗಳು ಸೇರಿವೆ. ಇದರ ಜೊತೆಗೆ, ಸಿಗರೇಟ್‌ಗಳು ಮತ್ತು ಬಿಡಿ ಪ್ಯಾಕೆಟ್‌ಗಳು ಸಹ ಪತ್ತೆಯಾಗಿವೆ.

ಈ ವಸ್ತುಗಳನ್ನು ಕೈದಿಗಳಿಗೆ ತಲುಪಿಸುವುದಕ್ಕಾಗಿ ತಂದಿಡಲಾಗಿತ್ತು ಎಂದು ಶಂಕಿಸಲಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಧಿಕಾರಿಗಳು ಈ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ