ಮಂಗಳೂರು, ನವೆಂಬರ್ 17: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದರಲ್ಲಿ ಟೇಕಾಫ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ, ಮಂಗಳೂರು ವಿಮಾನ ನಿಲ್ದಾಣದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಟೇಕಾಫ್‌ಗೆ ಕೆಲವೇ ಕ್ಷಣಗಳು ಬಾಕಿ ಇರುವಾಗ ವಿಮಾನದಲ್ಲಿ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ. ಸೋಮವಾರ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ.

229 ಪ್ರಯಾಣಿಕರು, 7 ಸಿಬ್ಬಂದಿ ಇದ್ದ ವಿಮಾನ

229 ಪ್ರಯಾಣಿಕರು ಮತ್ತು ಏಳು ಮಂದಿ ಸಿಬ್ಬಂದಿ ಇದ್ದ ವಿಮಾನ ಸಂಜೆ 6.10ರ ಸುಮಾರಿಗೆ ಟೇಕಾಫ್‌ಗೆ ಸಿದ್ಧವಾಗಿತ್ತು. ರನ್‌ವೇನಲ್ಲಿ ವೇಗವಾಗಿ ಸಾಗುತ್ತಿದ್ದ ವಿಮಾನ ಟೇಕಾಫ್ ಆಗಲು ಸುಮಾರು 100 ಮೀಟರ್ ಅಂತರ ಬಾಕಿ ಇರುವಾಗ ಅದರ ಕೆಳಭಾಗದಲ್ಲಿ ಬೆಂಕಿಯ ಕಿಡಿಯೊಂದಿಗೆ ಸ್ಪಾರ್ಕ್ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೈಲಟ್ ತಕ್ಷಣವೇ ವಿಮಾನದ ವೇಗವನ್ನು ಕಡಿಮೆ ಮಾಡಿ ರನ್‌ವೇನಲ್ಲೇ ನಿಲ್ಲಿಸಿದ್ದಾರೆ. ವಿಮಾನದ ಚಕ್ರವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಪೈಲಟ್ ಸಕಾಲದಲ್ಲಿ ವಿಮಾನವನ್ನು ನಿಲ್ಲಿಸಿದ್ದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಟೇಕಾಫ್‌ನ ಕೊನೆಯ ಕ್ಷಣದಲ್ಲಿ ವಿಮಾನವನ್ನು ನಿಲ್ಲಿಸಿದ ಪೈಲಟ್‌ನ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮಾನ ಟೇಕಾಫ್ ಆಗಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯಿತ್ತು ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ್ಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಇದಕ್ಕೂ ಮುನ್ನ ಬೆಂಗಳೂರಿನಿಂದ ಮಧುರೈಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲೂ ಟೇಕಾಫ್ ವೇಳೆ ಹೈಡ್ರಾಲಿಕ್ ಸಿಸ್ಟಮ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. 92 ಪ್ರಯಾಣಿಕರಿದ್ದ ಆ ವಿಮಾನವನ್ನು ಪೈಲಟ್ ತುರ್ತು ಬ್ರೇಕ್ ಹಾಕಿ ರನ್‌ವೇನಲ್ಲೇ ನಿಲ್ಲಿಸಿದ್ದರು. ಒಂದೇ ದಿನ ರಾಜ್ಯದ ಎರಡು ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳಲ್ಲಿ ಟೇಕಾಫ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಗಮನ ಸೆಳೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ