ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ನೋಟಿಸ್ ನೀಡಿ ಠಾಣೆಗೆ ಕರೆಯಿಸಿ, ಭಯಭೀತರನ್ನಾಗಿ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರಿಗೆ ದೂರು ಸಲ್ಲಿಸಿದ ನಂತರ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ರಾಜ್ಯ ಸರ್ಕಾರ ಜನರ ವಾಕ್ ಸ್ವಾತಂತ್ರ್ಯ ಕಸಿಯುತ್ತಿದೆ. ಬಾಗಲಕೋಟೆಯಲ್ಲಿ ಬಿಜೆಪಿಯ ಹಲವು ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ರೈತರ ಮಕ್ಕಳಿಗೂ ನೋಟಿಸ್ ನೀಡುತ್ತಿ ದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಂದ ಬರಹಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳನ್ನು ಠಾಣೆಗೆ ಕರೆಯಿಸಿ, ಹೆದರಿಸುತ್ತಿದ್ದಾರೆ. ಒಂದು ವರ್ಷ ಯಾವುದೇ ಪೋಸ್ಟ್ ಹಾಕುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡು ಕಳುಹಿಸುತ್ತಿದ್ದಾರೆ’ ಎಂದು ದೂರಿದರು.
‘ಮಂಗಳೂರು, ಕೋಲಾರ, ರಾಯಚೂರು, ವಿಜಯಪುರ, ಬೀದರ್ ನಲ್ಲೂ ಇದೇ ರೀತಿ ಹೆದರಿಸಲಾಗುತ್ತಿದೆ. ಇದು ವ್ಯವಸ್ಥಿತ ಷಡ್ಯಂತ್ರ. ಪೊಲೀಸ್ ಮಹಾನಿರ್ದೇಶಕರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬ ಭರವಸೆ ಇದೆ. ಯಾರೋ ಹಾಕಿದ ಬರಹವನ್ನು ಹಂಚಿಕೊಂಡವರು, ಪ್ರತಿಕ್ರಿಯೆ ನೀಡಿದವರ ವಿರುದ್ಧ ಎಫ್ಐಆರ್ ದಾಖಲಿಸದಂತೆ ಠಾಣೆಗಳಿಗೆ ನಿರ್ದೇಶನ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.
ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್.ರವಿಕುಮಾರ್, ಸದಸ್ಯರಾದ ಹೇಮಲತಾ ನಾಯಕ್, ಎಸ್.ವಿ ಸಂಕನೂರ, ಕೇಶವಪ್ರಸಾದ್ ಮತ್ತಿತರರು ನಿಯೋಗದಲ್ಲಿದ್ದರು.
261117-4-310256790

