ಬೆಂಗಳೂರು: ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ವಿರುದ್ಧ ನಡೆದ ‘ಸ್ಟಿಂಗ್’ ಕಾರ್ಯಾಚರಣೆ ಸಂಬಂಧ ಕಾಂಗ್ರೆಸ್‌ನ ಉಚ್ಚಾಟಿತ ನಾಯಕಿ ಕೃಪಾ ಆಳ್ವ ಅವರು ಸಿಸಿಬಿ ಪೊಲೀಸರ ಎದುರು ಮೂರನೇ ಬಾರಿಗೆ ಸೋಮವಾರ ವಿಚಾರಣೆಗೆ ಹಾಜರಾದರು.

ವಕೀಲರ ಜೊತೆಗೆ ಬಂದಿದ್ದ ಅವರು ತನಿಖಾಧಿಕಾರಿಗಳು ಕೇಳಿದ ಹಲವು ಪ್ರಶ್ನೆಗೆ ಉತ್ತರಿಸಿದರು.

‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ವಿಡಿಯೊದಲ್ಲಿ ನೀವು ಕಾಣಿಸಿಕೊಂಡಿದ್ದೀರಿ. ಅದರ ಬಗ್ಗೆ ಮಾಹಿತಿ ಇದೆಯೇ? ‘ಸ್ಟಿಂಗ್‌’ ಕಾರ್ಯಾಚರಣೆಯಲ್ಲಿ ನಿಮ್ಮ ಪಾತ್ರವೇನು’ ಎಂಬ ಪ್ರಶ್ನೆ ಕೇಳಿ ಹೇಳಿಕೆ ದಾಖಲಿಸಿಕೊಂಡರು ಎಂದು ಗೊತ್ತಾಗಿದೆ.

‘ವಿಚಾರಣೆಗೆ ಮತ್ತೆ ಕರೆದರೆ ಹಾಜರಾಗಬೇಕು ಎಂಬುದಾಗಿ ಸೂಚಿಸಿ ಕಳುಹಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವ, ‘ಪವರ್‌ ಟಿವಿ’ ಮುಖ್ಯಸ್ಥ ರಾಕೇಶ್‌ ಶೆಟ್ಟಿ, ವಿನೋದ್ ಕುಮಾರ್, ಪ್ರಶಾಂತ್ ಕುಮಾರ್ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ತನಿಖೆಗೆ ಸಹಕಾರ ನೀಡಬೇಕು, ಸಾಕ್ಷಿಗಳಿಗೆ ಯಾವುದೇ ರೀತಿಯ ಬೆದರಿಕೆ ಹಾಕುವಂತಿಲ್ಲ. ಪ್ರಭಾವ ಬೀರುವಂತಿಲ್ಲ ಎಂಬುದಾಗಿ ಕೋರ್ಟ್ ಷರತ್ತು ವಿಧಿಸಿದೆ.

261117-51-1988314814