ಬೆಂಗಳೂರು: ‘ಐ.ಟಿ ಕಂಪನಿಗಳ ಉದ್ಯೋಗಿಗಳು ಕೃಷಿ ಉದ್ಯಮದತ್ತ ಮುಖ ಮಾಡಿದ್ದು, ಅವರನ್ನು ಪ್ರೋತ್ಸಾಹಿಸಲು ಹೊಸ ಯೋಜನೆ ಆರಂಭಿಸಲಾಗುವುದು’ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿದ್ದ ಮೂರು ದಿನಗಳ ಕೃಷಿಮೇಳವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಸಾವಿರಾರು ಎಕರೆ ಪ್ರದೇಶದಲ್ಲಿ ಒಂದೇ ಬೆಳೆ ಬೆಳೆದು ವಿದೇಶಗಳಿಗೆ ರಫ್ತು ಮಾಡಲು ಕೆಲ ಟೆಕಿಗಳು ಮುಂದಾಗಿರುವುದು ಗಮನಕ್ಕೆ ಬಂದಿದೆ. ರೈತರಿಗೆ ಲಾಭ ತರುವ ಅವರ ಪ್ರಯತ್ನಕ್ಕೆ ಸರ್ಕಾರದ ಬೆಂಬಲವಿದೆ’ ಎಂದರು.
‘ಕೃಷಿಕ ಮಹಿಳೆಯರು, ಯುವಕರು ರೈತೋದ್ಯಮಿಗಳಾಗಬೇಕು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು. ಆಹಾರ ಸಂಸ್ಕರಣೆ, ಶೈತ್ಯಾಗಾರ– ದಾಸ್ತಾನುಗಳ ಹೆಚ್ಚಳಕ್ಕೆ ಸರ್ಕಾರ ಕ್ರಮವಹಿಸಿದೆ’ ಎಂದರು.
‘ಮಳೆಯಾಶ್ರಿತ ಪ್ರದೇಶಗಳಲ್ಲಿ ಲಾಭದಾಯಕ ಕೃಷಿ ಮಾಡಲು, ಸಮಗ್ರ ಕೃಷಿ ಪದ್ಧತಿ ಅನುಸರಿಸಲು ಕೃಷಿ ವಿಜ್ಞಾನಿಗಳು ನೆರವಾಗಿದ್ದಾರೆ. ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನೆಗಳು ಹೊಲಗಳನ್ನು ತಲುಪುತ್ತಿವೆ’ ಎಂದರು.
ಕೇಂದ್ರಕ್ಕೂ ಮೊದಲು ನೆರವು: ‘ರಾಜ್ಯ ಬರದಿಂದ ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ನೆರವಿಗೆ ಬರುವ ಮೊದಲೇ ಪ್ರತಿಯೊಬ್ಬ ರೈತರಿಗೆ ₹5 ಸಾವಿರ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ’ ಎಂದು ನರೇಂದ್ರಸ್ವಾಮಿ ಹೇಳಿದರು.
‘ಎಲ್ ನಿನೊ ಕಾರಣ ಮಳೆ ಅನಿಶ್ಚಿತತೆ ಎದುರಾಗಿದೆ. ಅಂತರ್ಜಲವು ಕುಸಿದಿದೆ. ರಾಜ್ಯದ 220 ತಾಲ್ಲೂಕುಗಳು ಬರಪೀಡಿತವಾಗಿವೆ. ಸ್ಥಳ ಪರಿಶೀಲನೆಗೆ ಹೋದಾಗ ಎದುರಾಗುವ ರೈತರ ಬವಣೆಯನ್ನು ನೋಡಲು ಆಗುತ್ತಿಲ್ಲ’ ಎಂದರು.
‘ಈ ಬಾರಿ ರಾಜ್ಯದ ರೈತರು ದಾಖಲೆ ಪ್ರಮಾಣದಲ್ಲಿ (37.5 ಲಕ್ಷ) ಬೆಳೆವಿಮೆ ನೋಂದಣಿ ಮಾಡಿಸಿದ್ದಾರೆ. ಬರದ ಹಿನ್ನೆಲೆಯಲ್ಲಿ ಮೇಳವನ್ನು 1 ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ, ಬರದ ಸವಾಲು ಎದುರಿಸುತ್ತಿರುವ ರೈತರಿಗೆ ಮಾಹಿತಿ ಕೊಡಲು ಮೇಳ ವಿಸ್ತರಿಸಲಾಗಿದೆ’ ಎಂದರು.
‘1,500ಕ್ಕೂ ಹೆಚ್ಚು ತಳಿ ಬಿಡುಗಡೆ’
‘ಹವಾಮಾನ ವೈಪರೀತ್ಯದ ನಡುವೆ ಇಳುವರಿ ಹೆಚ್ಚಿಸುವ 1,500ಕ್ಕೂ ಹೊಸ ಕೃಷಿ ತಳಿಗಳು ಕಳೆದ 3-4 ವರ್ಷದಲ್ಲಿ ಬಿಡುಗಡೆಯಾಗಿವೆ’ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
‘ಭಾರತೀಯ ಕೃಷಿ ಸಂಶೋಧನಾ ಮಂಡಳಿ ಸೇರಿದಂತೆ ಕೃಷಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಆವಿಷ್ಕಾರಗಳು ಅತಿವೃಷ್ಟಿ– ಅನಾವೃಷ್ಟಿ ವೇಳೆ ರೈತರ ಕೈಹಿಡಿಯಲಿವೆ. ಬೆಳೆ ನಷ್ಟವಾದಾಗ ವಿಮಾ ಕಂಪನಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನ್ಯಾಯಯುತವಾಗಿ ಹಣವು ರೈತರಿಗೆ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಕ್ರಮವಹಿಸಬೇಕು’ ಎಂದರು.
ರೈತರ ಆದಾಯ ಹೆಚ್ಚಿಸಲು ಹೊಸ ತಳಿಗಳನ್ನು ಅಭಿವೃದ್ಧಿಪಡಿಸುತ್ತಿರುವ ರಾಜ್ಯದ 5 ಕೃಷಿ ವಿ.ವಿಗಳ ವಿಜ್ಞಾನಿಗಳ ಕಾರ್ಯ ಶ್ಲಾಘನೀಯ
ಪಿ.ಎಂ.ನರೇಂದ್ರಸ್ವಾಮಿ,ಕೃಷಿ ಸಚಿವ
261117-51-1757164373

