ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಚಿತ್ರದ ನಾಗಾಲೋಟ ಮುಂದುವರಿದಿದೆ. ಬಿಡುಗಡೆಯಾಗಿ 12 ದಿನಗಳನ್ನು ಪೂರೈಸಿರುವ ಈ ಸಿನಿಮಾ ವಿಶ್ವದಾದ್ಯಂತ 1,437.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಭಾನುವಾರದ ಭರ್ಜರಿ ಗಳಿಕೆಗೆ ಹೋಲಿಸಿದರೆ 12ನೇ ದಿನವಾದ ಸೋಮವಾರ ಕಲೆಕ್ಷನ್‌ನಲ್ಲಿ ಕೊಂಚ ಇಳಿಕೆಯಾಗಿದೆ. ಆದರೂ ಎರಡನೇ ಸೋಮವಾರದ ಮಟ್ಟಿಗೆ ಇದು ಅತ್ಯುತ್ತಮ ಗಳಿಕೆಯೇ ಆಗಿದ್ದು, ಸಿನಿಮಾದ ಗಟ್ಟಿ ಹಿಡಿತಕ್ಕೆ ಸಾಕ್ಷಿಯಾಗಿದೆ.

ಭಾರತದ ಬಾಕ್ಸ್ ಆಫೀಸ್‌ನಲ್ಲಿ 12ನೇ ದಿನ ‘ರಾಮಾಯಣ’ ಚಿತ್ರವು ಒಟ್ಟು 32 ಕೋಟಿ ರೂಪಾಯಿ ನೆಟ್ ಗಳಿಕೆ ಕಂಡಿದೆ. ಭಾನುವಾರ 75 ಕೋಟಿ ರೂಪಾಯಿ ಬಾಚಿಕೊಂಡಿದ್ದ ಈ ಚಿತ್ರ, ಸೋಮವಾರ ಶೇ. 57.3 ರಷ್ಟು ಡ್ರಾಪ್ ಕಂಡರೂ 32 ಕೋಟಿ ರೂಪಾಯಿ ಗಳಿಸಿರುವುದು ಸಾಮಾನ್ಯ ಮಾತಲ್ಲ. ವಾರದ ದಿನವಾದ ಸೋಮವಾರ ದೇಶದಾದ್ಯಂತ 22,395 ಶೋಗಳಲ್ಲಿ ಪ್ರದರ್ಶನ ಕಂಡಿರುವ ಈ ಸಿನಿಮಾ, ಪ್ರತಿ ಶೋಗೆ ಸರಾಸರಿ 14,289 ರೂಪಾಯಿ ಕಲೆಕ್ಷನ್ ಮಾಡಿದೆ.

ಭಾಷಾವಾರು ಗಳಿಕೆಯನ್ನು ನೋಡುವುದಾದರೆ, ಹಿಂದಿ ಬೆಲ್ಟ್‌ನಲ್ಲಿ ‘ರಾಮಾಯಣ’ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. 12ನೇ ದಿನ ಹಿಂದಿಯಲ್ಲಿ ಬರೋಬ್ಬರಿ 23.75 ಕೋಟಿ ರೂಪಾಯಿ ಗಳಿಕೆಯಾಗಿದೆ. ಉಳಿದಂತೆ ಮಲಯಾಳಂನಲ್ಲಿ 2.85 ಕೋಟಿ, ಕನ್ನಡದಲ್ಲಿ 2 ಕೋಟಿ, ತಮಿಳಿನಲ್ಲಿ 1.90 ಕೋಟಿ ಹಾಗೂ ತೆಲುಗಿನಲ್ಲಿ 1.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಗಳಿಕೆ 792.60 ಕೋಟಿ ರೂಪಾಯಿಗೆ ತಲುಪಿದ್ದು, ಒಟ್ಟು ಗ್ರಾಸ್ ಕಲೆಕ್ಷನ್ 947.25 ಕೋಟಿ ರೂಪಾಯಿ ಆಗಿದೆ. ಶೀಘ್ರದಲ್ಲೇ ಭಾರತದಲ್ಲಿ ಸಾವಿರ ಕೋಟಿ ಗ್ರಾಸ್ ಕ್ಲಬ್ ಸೇರಲಿದೆ.

ವಿದೇಶಿ ಮಾರುಕಟ್ಟೆಯಲ್ಲೂ ‘ರಾಮಾಯಣ’ ಸಿನಿಮಾದ ಕ್ರೇಜ್ ಕಡಿಮೆಯಾಗಿಲ್ಲ. 12ನೇ ದಿನ ಓವರ್‌ಸೀಸ್ ಬಾಕ್ಸ್ ಆಫೀಸ್‌ನಲ್ಲಿ 10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ವಿದೇಶಿ ಗಳಿಕೆಯ ಒಟ್ಟು ಮೊತ್ತ 490 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಭಾರತದ 947.25 ಕೋಟಿ ಹಾಗೂ ವಿದೇಶದ 490 ಕೋಟಿ ರೂಪಾಯಿ ಸೇರಿ ಚಿತ್ರದ ಒಟ್ಟು ವರ್ಲ್ಡ್‌ವೈಡ್ ಗ್ರಾಸ್ ಕಲೆಕ್ಷನ್ 1,437.25 ಕೋಟಿ ರೂಪಾಯಿ ತಲುಪಿದೆ.

ಇದನ್ನೂ ಓದಿ: ‘ರಾಮಾಯಣ’ ಕಲೆಕ್ಷನ್: ‘ಧುರಂಧರ್’, ‘ಆರ್‌ಆರ್‌ಆರ್’, ‘ಕೆಜಿಎಫ್ 2’ ದಾಖಲೆ ಧೂಳೀಪಟ

ಮೊದಲ ವಾರದಲ್ಲಿ (8 ದಿನಗಳಿಗೆ) ಭಾರತದಲ್ಲಿ 564.60 ಕೋಟಿ ರೂಪಾಯಿ ನಿವ್ವಳ ಗಳಿಕೆ ಕಂಡಿದ್ದ ಈ ಸಿನಿಮಾ, ಎರಡನೇ ವಾರದ ಕೇವಲ ನಾಲ್ಕು ದಿನಗಳಲ್ಲಿ 228 ಕೋಟಿ ರೂಪಾಯಿ ಬಾಚಿಕೊಂಡಿದೆ. ವೀಕೆಂಡ್ ಮುಗಿದು ಕೆಲಸದ ದಿನಗಳು ಆರಂಭವಾಗಿದ್ದರೂ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ಬಲ ತಂದಿದೆ. ಮುಂದಿನ ವಾರಾಂತ್ಯದ ವೇಳೆಗೆ ಈ ಸಿನಿಮಾ ಇನ್ನಷ್ಟು ದೊಡ್ಡ ಮೈಲಿಗಲ್ಲುಗಳನ್ನು ದಾಟುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.