ಖ್ಯಾತ ನಟಿ ಸಾಯಿ ಪಲ್ಲವಿ ತಮ್ಮ ಸರಳತೆ ಮತ್ತು ನೇರ ಮಾತುಗಳಿಂದಲೇ ಅಭಿಮಾನಿಗಳ ಮನಗೆದ್ದವರು. ಇದೀಗ ಹೈದರಾಬಾದ್‌ನಲ್ಲಿ ನಡೆದ ಧನುಷ್ ನಟನೆಯ ‘ಓಂ’ ಸಿನಿಮಾದ ತೆಲುಗು ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರು ಆಸಕ್ತಿದಾಯಕ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಖ್ಯಾತ ನಿರ್ಮಾಪಕ ನಾಗವಂಶಿ ಅವರು ಕೋವಿಡ್-19ಗೂ ಮುನ್ನ ತಮಗೆ ನೀಡಿದ್ದ ಅಡ್ವಾನ್ಸ್ ಹಣದ ಬಗ್ಗೆ ಸಾಯಿ ಪಲ್ಲವಿ ವೇದಿಕೆ ಮೇಲೆ ತಮಾಷೆಯಾಗಿ ಮಾತನಾಡಿದ್ದಾರೆ. ಅವರ ಈ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಯಿ ಪಲ್ಲವಿ, ನಾಗವಂಶಿ ಅವರೊಂದಿಗಿನ ಹಳೆಯ ಮಾತುಕತೆಯನ್ನು ನೆನಪಿಸಿಕೊಂಡರು. ‘ವಂಶಿ ಅವರೇ, ಕೋವಿಡ್‌ಗೂ ಮೊದಲೇ ನಾವು ಎರಡು ಮೂರು ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಚರ್ಚಿಸಿದ್ದೆವು. ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ಸಿನಿಮಾಗಾಗಿ ನೀವು ನನಗೆ ಅಡ್ವಾನ್ಸ್ ಹಣ ಕೊಟ್ಟಿದ್ದೀರಿ. ಆ ವಿಷಯವನ್ನು ನೀವು ಮರೆತೇ ಬಿಟ್ಟಿದ್ದೀರಿ’ ಎಂದು ನಗುತ್ತಲೇ ಕಾಲೆಳೆದರು.

‘ಆ ಹಣವನ್ನು ವಾಪಸ್ ತೆಗೆದುಕೊಳ್ಳಿ. ನಾವು ಒಟ್ಟಿಗೆ ಸಿನಿಮಾ ಮಾಡುವಾಗ ಮತ್ತೆ ಮಾತನಾಡೋಣ ಎಂದು ನಾನು ನಿಮಗೆ ಹೇಳಿದ್ದೆ. ಆದರೆ ನೀವು ಆ ಹಣವನ್ನು ವಾಪಸ್ ಪಡೆಯಲೇ ಇಲ್ಲ. ಈಗಲೂ ಆ ಅಡ್ವಾನ್ಸ್ ಹಣ ನನ್ನ ಬಳಿಯೇ ಇದೆ. ನಿಮಗೆ ನೆನಪಿದೆಯಾ?’ ಎಂದು ಪ್ರಶ್ನಿಸಿದರು. ಜೊತೆಗೆ ನಾಗವಂಶಿ ಅವರ ಉದಾರ ಗುಣವನ್ನು ಸಾಯಿ ಪಲ್ಲವಿ ಮನಸಾರೆ ಹೊಗಳಿದರು. ತಮ್ಮ ಸಿನಿಮಾದಲ್ಲಿ ನಾನು ನಟಿಸಬೇಕೆಂಬ ಒಂದೇ ಕಾರಣಕ್ಕೆ ಅವರು ಅಷ್ಟು ಪ್ರೀತಿ ತೋರಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಯಿ ಪಲ್ಲವಿ ಮಾತಿಗೆ ನಿರ್ಮಾಪಕ ನಾಗವಂಶಿ ಕೂಡ ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯಿಸಿದರು. ವೇದಿಕೆ ಮೇಲೆ ಸಾಯಿ ಪಲ್ಲವಿ ಅವರನ್ನು ‘ಲೇಡಿ ಪವರ್ ಸ್ಟಾರ್’ ಎಂದು ಬಣ್ಣಿಸಿದರು. ಅಡ್ವಾನ್ಸ್ ಹಣದ ಬಗ್ಗೆ ಮಾತನಾಡುತ್ತಾ, ‘ಆ ಹಣ ನಿಮ್ಮ ಬಳಿಯೇ ಇರಲಿ. ನೀವು ನನಗಾಗಿ ಖಂಡಿತವಾಗಿಯೂ ಒಂದು ತೆಲುಗು ಸಿನಿಮಾ ಮಾಡಲೇಬೇಕು’ ಎಂದು ನಗುತ್ತಲೇ ಬೇಡಿಕೆ ಇಟ್ಟರು.

ಇದನ್ನೂ ಓದಿ: ಹೊಸ ಸಿನಿಮಾಕ್ಕಾಗಿ ಉದ್ದನೆಯ ಕೂದಲು ಕತ್ತರಿಸಿಕೊಂಡ ಸಾಯಿ ಪಲ್ಲವಿ; ಶಾಕ್ ಆದ ತಾಯಿ

ಇಲ್ಲಿಯವರೆಗೆ ನಾಗವಂಶಿ ನಿರ್ಮಾಣದ ಯಾವುದೇ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸಿಲ್ಲ. ಆದರೆ ಈ ಸಂಭಾಷಣೆಯ ನಂತರ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಸದ್ಯ ಸಾಯಿ ಪಲ್ಲವಿ ‘ಓಂ: ಚಾಪ್ಟರ್ 1’ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಧನುಷ್, ಮಮ್ಮುಟ್ಟಿ ಮತ್ತು ಶ್ರೀಲೀಲಾ ನಟಿಸಿರುವ, ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಸಿನಿಮಾ ನವೆಂಬರ್ 20, 2026ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.