ಬೆಳಗಾವಿ: ಪತ್ರಿಕಾ ವಿತರಕರನ್ನು ಮಾಧ್ಯಮದ ಪ್ರಮುಖ ಅಂಗವೆಂದು ಪರಿಗಣಿಸಬೇಕು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪತ್ರಿಕಾ ವಿತರಕರಿಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು ಎಂಬುದು ಸೇರಿ ಪ್ರಮುಖ ಬೇಡಿಕೆಗಳ ಕುರಿತು ಬುಧವಾರ ನಡೆದ ಪತ್ರಿಕಾ ವಿತರಕರ ರಾಜ್ಯಮಟ್ಟದ 6ನೇ ಸಮ್ಮೇಳನದಲ್ಲಿ ಒಕ್ಕೊರಲಿನ ನಿರ್ಣಯ ಅಂಗೀಕರಿಸಲಾಯಿತು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಮತ್ತು ಬೆಳಗಾವಿ ದಿನಪತ್ರಿಕೆ ವಿತರಕರ ಸಂಘದಿಂದ ಧರ್ಮನಾಥ ಭವನದಲ್ಲಿ ನಡೆದ ಸಮ್ಮೇಳನದಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ಪತ್ರಿಕಾ ವಿತರಕರು ಪಾಲ್ಗೊಂಡಿದ್ದರು.

ದೇಶದಲ್ಲಿ 25 ಲಕ್ಷಕ್ಕೂ ಹೆಚ್ಚು ಪತ್ರಿಕಾ ವಿತರಕರಿದ್ದು, ಪ್ರತಿ ದಿನ ನಸುಕಿನಲ್ಲಿ ಮನೆಮನೆಗೆ ಪತ್ರಿಕೆ ಹಾಕುತ್ತಾರೆ. ಕೇಂದ್ರ ಸರ್ಕಾರವು ಪತ್ರಿಕಾ ವಿತರಕರ ಕುಟುಂಬದ ಸಾಮಾಜಿಕ ಭದ್ರತೆಗೆ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ₹2 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ಅದು ಈಡೇರಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸರ್ಕಾರದಿಂದ ಕ್ಷೇಮಾಭಿವೃದ್ಧಿ ನಿಧಿಗೆ ₹10 ಕೋಟಿ ಮೀಸಲಿಡಬೇಕು’ ಎಂದರು.

ಪತ್ರಕರ್ತ ಕೆ.ವಿ.ಪ್ರಭಾಕರ್ ಸಮ್ಮೇಳನ ಉದ್ಘಾಟಿಸಿದರು. ಬೆಳಗಾವಿ ದಿನಪತ್ರಿಕೆ ವಿತರಕರ ಸಂಘದ ಗೌರವಾಧ್ಯಕ್ಷ ಪ್ರತಾಪ್ ಭೋಸ್ಲೆ ಸರ್ವಾಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ‍ಪಿ.ಸುರೇಶ್‌, ಉಪಾಧ್ಯಕ್ಷ ಎನ್‌.ಪ್ರಶಾಂತ್‌ಕುಮಾರ್‌, ಬೆಳಗಾವಿ ವಿತರಕರ ಸಂಘದ ಅಧ್ಯಕ್ಷ ದೀಪಕ್‌ ರಾಜಗೋಳಕರ್, ಪ್ರಧಾನ ಕಾರ್ಯದರ್ಶಿ ರಾಜಾ ಭೋಸಲೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ವಜ್ರಪ್ಪ, ತುಮಕೂರಿನ ಲಕ್ಷ್ಮೀನರಸಪ್ಪ ಇದ್ದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಗಳಲ್ಲಿ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ, ವಿವಿಧ ಪತ್ರಿಕೆಗಳ ಸಂಪಾದಕರು, ವರದಿಗಾರರು, ಬ್ಯುರೊ ಮುಖ್ಯಸ್ಥರು, ಪ್ರಸರಣ ವಿಭಾಗದವರಿಗೆ, ‘ಪತ್ರಿಕಾ ವಿತರಕರ ಸೇವಾರತ್ನ’ ಪ್ರಶಸ್ತಿಗಳನ್ನು ನೀಡಲಾಯಿತು. 

ಬೆಳಗಾವಿಯಲ್ಲಿ ಬುಧವಾರ ಪತ್ರಿಕಾ ವಿತರಕರ ರಾಜ್ಯಮಟ್ಟದ 6ನೇ ಸಮ್ಮೇಳನದಲ್ಲಿ ಅಪಾರ ಸಂಖ್ಯೆಯಲ್ಲಿ ಪತ್ರಿಕಾ ವಿತರಕರು ಮತ್ತು ಕುಟುಂಬದವರು ಪಾಲ್ಗೊಂಡಿದ್ದರು. ‍ಪ್ರಜಾವಾಣಿ ಚಿತ್ರ

ಚಾರಿಟಬಲ್ ಟ್ರಸ್ಟ್‌ಗೆ ಚಾಲನೆ

ಮೊದಲ ಬಾರಿಗೆ ನ್ಯೂಸ್‌ಪೇಪರ್ ಡಿಸ್ಟ್ರಿಬ್ಯೂಟರ್ಸ್ ಚಾರಿಟಬಲ್ ಟ್ರಸ್ಟ್‌ ನಿರ್ಮಿಸಿ ಇದೇ ವೇದಿಕೆಯಲ್ಲಿ ಕೆ.ವಿ. ಪ್ರಭಾಕರ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಟ್ರಸ್ಟ್‌ಗೆ ಮೊದಲ ದೇಣಿಗೆಯಾಗಿ ಪ್ರಭಾಕರ ಅವರು ₹1 ಲಕ್ಷ ಪತ್ರಕರ್ತ ದಿಲೀಪ್‌ ಕುರಂದವಾಡೆ ₹1 ಲಕ್ಷ ಕಾರ್ಯನಿರತ ಪತ್ರಕರ್ತರ ಸಂಘದಿಂದ ₹1 ಲಕ್ಷ ಮತ್ತು ಹಲವು ಪತ್ರಿಕಾ ವಿತರಕರೂ ₹5 ಸಾವಿರದಿಂದ ₹25 ಸಾವಿರವರೆಗೆ ದೇಣಿಗೆ ಘೋಷಣೆ ಮಾಡಿದರು. ರಾಜ್ಯದ ಪ್ರತಿಯೊಬ್ಬ ಪತ್ರಿಕಾ ವಿತರಕ ಪ್ರತಿ ತಿಂಗಳು ₹100ನ್ನು ಟ್ರಸ್ಟಿಗೆ ನೀಡಲು ಒಪ್ಪಿಗೆ ಸೂಚಿಸಿದರು.

ಪ್ರಮುಖ ಬೇಡಿಕೆಗಳು

  • ಪತ್ರಿಕಾ ವಿತರಕರನ್ನು ಮಾಧ್ಯಮದ ಪ್ರಮುಖ ಅಂಗವೆಂದು ಪರಿಗಣಿಸಿ

  • ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ ಹಣವನ್ನು ಮೀಸಲಿಡಬೇಕು

  • ಸರ್ಕಾರದಿಂದ ಮನೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು

  • ಪತ್ರಿಕೆಗಳನ್ನು ವಿತರಿಸಲು ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ನೀಡಬೇಕು

  • ಕಾರ್ಮಿಕ ಇಲಾಖೆಯ ನಿಯಮಾವಳಿಗಳನ್ನು ಸಡಿಲುಗೊಳಿಸಬೇಕು