ಕರ್ನಾಟಕದಲ್ಲಿ ನಗರೀಕರಣ ಹಾಗೂ ಮೂಲಸೌಕರ್ಯ ಯೋಜನೆಗಳ ವಿಸ್ತರಣೆಯೊಂದಿಗೆ ಪರಿಸರ ಸಂರಕ್ಷಣೆಯೂ ಅತ್ಯಂತ ಪ್ರಮುಖ ಸವಾಲಾಗಿ ಹೊರಹೊಮ್ಮಿದ್ದು, ಹಲವು ಜನಾಂದೋಲನಗಳಿಗೆ ಕಾರಣವಾಗಿದೆ
ಕರ್ನಾಟಕವು ಸಮೃದ್ಧ ಅರಣ್ಯ ಸಂಪತ್ತು, ಅಪರೂಪದ ಜೀವವೈವಿಧ್ಯ ಹಾಗೂ ಉಗಮಗೊಳ್ಳುವ ಪ್ರಮುಖ ನದಿಗಳಿಗೆ ಹೆಸರಾಗಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಡೆದ ಅನಗತ್ಯ ಒತ್ತಡಗಳು, ಅಸಂಖ್ಯಾತ ಪಾರಿಸರಿಕ ಚಳವಳಿಗಳಿಗೆ ನಾಂದಿ ಹಾಡಿದವು.
ಉತ್ತರ ಕನ್ನಡದ ದಟ್ಟ ಅರಣ್ಯಗಳಿಂದ ಹಿಡಿದು ಕುದುರೆಮುಖದ ಮಳೆಕಾಡುಗಳವರೆಗೆ, ಪರಿಸರ ಮತ್ತು ಮಾನವನ ಜೀವನಾಧಾರವನ್ನು ರಕ್ಷಿಸಲು ನಡೆದ ಬಹುಮುಖಿ ಹೋರಾಟಗಳು ರಾಜ್ಯದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿವೆ.
ಬೇಡ್ತಿ ಯೋಜನೆ ಮತ್ತು ಪಾರಿಸರಿಕ ಜಾಗೃತಿ
ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ನದಿಗೆ ಮಾಗೋಡಿನ ಬಳಿ ಅಣೆಕಟ್ಟು ನಿರ್ಮಿಸುವ ಯೋಜನೆ ಪ್ರಾರಂಭವಾದಾಗ, ರಾಜ್ಯದ ಮೊದಲ ಬೃಹತ್ ಪರಿಸರ ಪ್ರತಿಭಟನೆ ರೂಪುಗೊಂಡಿತು. ಇದಕ್ಕೂ ಮೊದಲು ಶರಾವತಿಯ ಲಿಂಗನಮಕ್ಕಿ ಮತ್ತು ಕಾಳಿ ಯೋಜನೆಯ ಸುಪಾ ಅಣೆಕಟ್ಟುಗಳ ನಿರ್ಮಾಣದ ಸಮಯದಲ್ಲಿ ಸಾವಿರಾರು ಹೆಕ್ಟೇರ್ ಕಾಡು ಮತ್ತು ಹಳ್ಳಿ ಪಟ್ಟಣಗಳು ಮುಳುಗಡೆಯಾಗಿದ್ದರೂ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿರಲಿಲ್ಲ. ಆದರೆ ಬೇಡ್ತಿ ಹಾಗೂ ಅಘನಾಶಿನಿ ಕಣಿವೆಗಳ ಸುಮಾರು 60 ಹಳ್ಳಿಗಳು ಮತ್ತು ಸಾಂಬಾರ ಪದಾರ್ಥಗಳ ಸಾವಿರಾರು ಎಕರೆ ಸಮೃದ್ಧ ಕೃಷಿಭೂಮಿ ಮುಳುಗಡೆಯಾಗುವ ಭೀತಿ ಎದುರಾದಾಗ ಸ್ಥಳೀಯರು ಪ್ರಬಲ ಧ್ವನಿ ಎತ್ತಿದರು.
1980ರಲ್ಲಿ ಶಿರಸಿಯಲ್ಲಿ ನಡೆದ ರಾಷ್ಟ್ರಮಟ್ಟದ ಚರ್ಚಾಸಭೆಯು ಈ ಹೋರಾಟಕ್ಕೆ ವೈಜ್ಞಾನಿಕ ಮತ್ತು ಸಾಮಾಜಿಕ ಪರಿಪ್ರೇಕ್ಷ್ಯವನ್ನು ನೀಡಿತು. ಡಾ. ಶಿವರಾಮ ಕಾರಂತ, ವಂದನಾ ಶಿವಾ, ಪಾಂಡುರಂಗ ಹೆಗಡೆ, ಕುಸುಮಾ ಸೊರಬ ಹಾಗೂ ಸ್ವರ್ಣವಳ್ಳಿ ಮಠದ ಶ್ರೀಗಳಂತಹ ಪ್ರಮುಖರು ಭಾಗವಹಿಸಿ, ಪಶ್ಚಿಮ ಘಟ್ಟಗಳ ಸೂಕ್ಷ್ಮತೆಯನ್ನು ಜಗತ್ತಿನೆದುರು ತೆರೆದಿಟ್ಟರು. ತಜ್ಞರ ಸಮಿತಿ ಹಾಗೂ ಸ್ಥಳೀಯರ ತೀವ್ರ ಪ್ರತಿಭಟನೆಯ ಫಲವಾಗಿ ಬೇಡ್ತಿ ಯೋಜನೆ ನಿರಂತರ ನನೆಗುದಿಗೆ ಬಿತ್ತು.
ಅಪ್ಪಿಕೋ ಚಳವಳಿ: ಕಾಡಿನ ರಕ್ಷಣೆಗೆ ಹೊಸ ಹೆಜ್ಜೆ
1980ರ ದಶಕದ ಆರಂಭದಲ್ಲಿ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 'ಅಪ್ಪಿಕೋ ಚಳವಳಿ' ಪ್ರಾರಂಭವಾಯಿತು. ಉತ್ತರ ಭಾರತದ ಪ್ರಸಿದ್ಧ 'ಚಿಪ್ಕೋ' ಚಳವಳಿಯಿಂದ ಪ್ರೇರಿತರಾದ ಪಾಂಡುರಂಗ ಹೆಗಡೆ ಅವರ ನೇತೃತ್ವದಲ್ಲಿ ಸ್ಥಳೀಯ ರೈತರು, ಆದಿವಾಸಿಗಳು ಮತ್ತು ಗೌಳಿಗರು ಸಂಘಟಿತರಾದರು. ವಾಣಿಜ್ಯ ಉದ್ದೇಶಕ್ಕಾಗಿ ನೈಸರ್ಗಿಕ ಮರಗಳನ್ನು ಕಡಿಯಲು ಬಂದ ಸರ್ಕಾರಿ ಗುತ್ತಿಗೆದಾರರನ್ನು ತಡೆಯಲು ಜನ ಗಿಡ-ಮರಗಳನ್ನು ಅಪ್ಪಿ ಹಿಡಿದು ಸವಾಲೆಸೆದರು.
ಈ ಚಳವಳಿಯು ಕೇವಲ ಮರಗಳನ್ನು ಕಾಯುವುದಕ್ಕೆ ಸೀಮಿತವಾಗದೆ, ಕಾಲ್ನಡಿಗೆ ಜಾಥಾಗಳು, ಬೀದಿನಾಟಕಗಳು, ಸ್ಲೈಡ್ಶೋಗಳು ಮತ್ತು ಗ್ರಾಮಸಭೆಗಳ ಮೂಲಕ ಜಾಗೃತಿ ಮೂಡಿಸಿತು. ಏಕಸಸ್ಯ (ನೀಲಗಿರಿ/ಅಕೇಶಿಯಾ) ನೆಡುತೋಪು ಬೆಳೆಸುವುದನ್ನು ವಿರೋಧಿಸಿ, ನೈಸರ್ಗಿಕ ಅರಣ್ಯ ಉತ್ಪನ್ನಗಳನ್ನು ಸುಸ್ಥಿರ ಮಾದರಿಯಲ್ಲಿ ಬಳಸಬೇಕೆಂಬ ತತ್ವವನ್ನು ಸಾರುವಲ್ಲಿ ಅಪ್ಪಿಕೋ ಚಳವಳಿ ಯಶಸ್ವಿಯಾಯಿತು.
ಪಶ್ಚಿಮ ಘಟ್ಟ ಉಳಿಸಿ ಅಭಿಯಾನ
1987ರ ನವೆಂಬರ್ನಿಂದ 1988ರ ಫೆಬ್ರವರಿವರೆಗೆ ನಡೆದ 'ಪಶ್ಚಿಮ ಘಟ್ಟ ಉಳಿಸಿ ಅಭಿಯಾನ'ವು ದಕ್ಷಿಣ ಭಾರತದ ಪಾರಿಸರಿಕ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಪಶ್ಚಿಮ ಘಟ್ಟಗಳನ್ನು ಹೊಂದಿರುವ ಆರು ರಾಜ್ಯಗಳ ಪೈಕಿ ಐದು ರಾಜ್ಯಗಳ 160ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳು, ವಿಜ್ಞಾನಿಗಳು, ವಕೀಲರು, ಸಾಹಿತಿಗಳು ಹಾಗೂ ವಿದ್ಯಾರ್ಥಿಗಳು ಈ 100 ದಿನಗಳ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡರು.
ಡಾ. ಶಿವರಾಮ ಕಾರಂತರ ಬೌದ್ಧಿಕ ನೇತೃತ್ವದಲ್ಲಿ ನಡೆದ ಈ ಅಭಿಯಾನವು ಘಟ್ಟಗಳಲ್ಲಿ ಜನಿಸುವ ನದಿಗಳು, ಶೋಲಾ ಅರಣ್ಯಗಳು ಮತ್ತು ವನ್ಯಜೀವಿಗಳ ರಕ್ಷಣೆಗೆ ಶ್ರಮಿಸಿತು. ಗೋವಾದಲ್ಲಿ ನಡೆದ ಬೃಹತ್ ಸಮಾವೇಶದೊಂದಿಗೆ ಮುಕ್ತಾಯಗೊಂಡ ಈ ಚಳವಳಿಯ ಪರಿಣಾಮವಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ 'ಜೀವವೈವಿಧ್ಯದ ಹಾಟ್ಸ್ಪಾಟ್' ಎಂಬ ಪರಿಕಲ್ಪನೆ ಮುಂಚೂಣಿಗೆ ಬರಲು ಸಾಧ್ಯವಾಯಿತು.
ಕುದುರೆಮುಖ ಉಳಿಸಿ ಹೋರಾಟ: ಐತಿಹಾಸಿಕ ಜಯ
ಪಶ್ಚಿಮ ಘಟ್ಟಗಳ ಅತಿಸೂಕ್ಷ್ಮ ಶೋಲಾ ಕಣಿವೆಗಳ ವ್ಯಾಪ್ತಿಯಲ್ಲಿ ಬರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುತ್ತಿದ್ದ ಕಬ್ಬಿಣದ ಅದಿರು ಗಣಿಗಾರಿಕೆಯು ತೀವ್ರ ತಾಪತ್ರಯ ತಂದೊಡ್ಡಿತ್ತು. ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳ ಉಗಮ ಸ್ಥಾನವಾಗಿದ್ದ ಈ ಭಾಗದಲ್ಲಿ ಗಣಿಗಾರಿಕೆಯ ರಾಡಿ ಹಾಗೂ ಲಕ್ಯಾ ಡ್ಯಾಮ್ ಬಿರುಕುಗಳಿಂದಾಗಿ ಅರಣ್ಯ ಸಂಪೂರ್ಣವಾಗಿ ಕಲುಷಿತಗೊಂಡಿತು.
ಯು.ಆರ್. ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು ಗಣಿಗಾರಿಕೆಯ ಹಾನಿಯನ್ನು ಸಾಬೀತುಪಡಿಸಿದರು. 'ವೈಲ್ಡ್ ಲೈಫ್ ಫಸ್ಟ್' ಸಂಸ್ಥೆಯ ಪ್ರವೀಣ್ ಭಾರ್ಗವ್ ಅವರು ಸುಪ್ರೀಂ ಕೋರ್ಟ್ನಲ್ಲಿ ನಡೆಸಿದ ಸುದೀರ್ಘ ಕಾನೂನು ಹೋರಾಟದ ಫಲವಾಗಿ, 2005ರ ವೇಳೆಗೆ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು.
ಸ್ಥಳೀಯ ಸಣ್ಣ ಚಳವಳಿಗಳು ಮತ್ತು FEVORD-K ಒಕ್ಕೂಟ
ಸಂಘಟನೆಗಳ ಹೋರಾಟ ಒಂದಡೆಯಾದರೆ, ಸಾಮಾಜಿಕ ಕಳಕಳಿಯ ಹಲವಾರು ವ್ಯಕ್ತಿತ್ವಗಳು ತಮ್ಮದೇ ನೆಲೆಯಲ್ಲಿ ಸಮಾಜಮುಖೀ ಕೆಲಸಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡು ಪರಿಸರ ನಾಶದ ವಿರುದ್ಧ ವಿಶಿಷ್ಟ ರೀತಿಯಲ್ಲಿ ಧ್ವನಿ ಎತ್ತಿದರು. ರಾಣೇಬೆನ್ನೂರಿನ ಬಳಿ ಮೇಡ್ಲೇರಿಯಲ್ಲಿ ಕುರಿ ಸಾಕಣೆ, ಕಂಬಳಿ ನೇಯ್ಗೆಯ ಸಾಮೂಹಿಕ ಕೆಲಸಗಳಲ್ಲಿ ತೊಡಗಿದ್ದ ಹಿರೇಮಠರು ಪಕ್ಕದಲ್ಲೇ ಇದ್ದ ಹರಿಹರದ ಬಿರ್ಲಾ ಒಡೆತನದ ಪಾಲಿಫೈಬರ್ ಕಾರ್ಖಾನೆಯು ತುಂಗಭದ್ರಾ ನದಿಗೆ ತ್ಯಾಜ್ಯ ಸೇರಿಸುತ್ತಿರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟಕ್ಕೆ ಸಜ್ಜುಗೊಳಿಸಿದರು. ಹೊನ್ನಾವರದ ಸ್ನೇಹಕುಂಜದಲ್ಲಿ ಬಡವರಿಗಾಗಿ ಆರೋಗ್ಯ ಸುಧಾರಣಾ ಶಿಬಿರ ಹಾಕಿ ಕೊಂಡಿದ್ದ ಡಾ.ಕುಸುಮಾ ಸೊರಬ ಹಂಚಿನ ಕಾರ್ಖಾನೆಗಳಿಗಾಗಿ ಹಿಂದುಳಿದವರ ಗದ್ದೆಯ ಮಣ್ಣು ಹೇಗೆ ಲೂಟಿಯಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಸೋಲಿಗ ಸಮುದಾಯದ ಜೀವನ ಕ್ರಮ ಸುಧಾರಿಸಲು ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಾರ್ಯನಿರತರಾಗಿದ್ದ ಡಾ.ಸುದರ್ಶನ್, ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಪರಿಸರದ ದೃಷ್ಟಿಯಿಂದ ಎಷ್ಟು ಅಪಾಯಕಾರಿ ಎಂಬುದನ್ನು ಜನ ಮತ್ತು ಮಾಧ್ಯಮಗಳಿಗೆ ಹೇಳಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.ಗ್ರಾಮದ ಹೆಣ್ಣುಮಕ್ಕಳಿಗೆ ಅನುಕೂಲ ಕಲ್ಪಿಸುವ ಹೊಗೆ ರಹಿತ ಒಲೆ ‘ಅಸ್ತ್ರ’ ನಿರ್ಮಿಸಿದ ಅಮೂಲ್ಯ ರೆಡ್ಡಿ, ಅಭಿಯಾರಣ್ಯಗಳಿಂದ ನಿರ್ವಸಿತರಾದ ಜನರ ಪುನರ್ವಸತಿಗಾಗಿ ದುಡಿದ ಡೀಡ್ ಸಂಸ್ಥೆಯ ಡಾ. ಪಯಾಸ್ ಸಹ ಜನ ಜಾಗೃತಿ ಮೂಡಿಸಿದ್ದರು.
ಹರಿಹರದ ಪಾಲಿಫೈಬರ್ ಕಂಪನಿಯ ವಿರುದ್ಧ, ಮೈಸೂರು ಪೇಪರ್ ಮಿಲ್ಸ್ನವರು ಶಿವಮೊಗ್ಗದ ಬಳಿ ನಡೆಸುತ್ತಿದ್ದ ಭೂಮಿ ಅತಿಕ್ರಮಣದ ವಿರುದ್ಧ, ತುಂಗಾ ನದಿಗೆ ಬಾಳೆಹೊನ್ನೂರಿನ ಬಳಿ ಯೋಜಿಸಿದ್ದ ಅಣೆ ಕಟ್ಟಿನ ವಿರುದ್ಧ, ಶರಾವತಿ ಟೇಲ್ ರೇಸ್ ಯೋಜನೆಯ ವಿರುದ್ಧ, ಕೈಗಾ ಪರಮಾಣು ಸ್ಥಾವರ ಸ್ಥಾಪನೆಯ ವಿರುದ್ಧ, ಮಂಡ್ಯದ ಕಾಗದ ಕಾರ್ಖಾನೆ ಸೂಸುವ ವಿಷ ವಾಯುವಿನ ವಿರುದ್ಧ, ಬೆಂಗಳೂರಿನ ಲಾಲ್ ಬಾಗ್ ಕೆರೆಯ ಜಲ ಪಕ್ಷಿಗಳಿಗೆ ಅಪಾಯವೊಡ್ಡಬಲ್ಲ ದೋಣಿ ವಿಹಾರದ ವಿರುದ್ಧ, ಬೀದರದ ರಾಸಾಯನಿಕ ಕಾರ್ಖಾನೆಗಳಿಂದಾಗುತ್ತಿರುವ ನೆಲ ಮಾಲಿನ್ಯದ ವಿರುದ್ಧ, ಮಂಗಳೂರು ಹತ್ತಿರದ ತಣ್ಣೀರು ಬಾವಿಯಲ್ಲಿ ಗುಜರಿ ಹಡಗುಗಳನ್ನು ಒಡೆಯುವುದರ ವಿರುದ್ಧ, ಮೈಸೂರಿನ ರಟ್ನಹಳ್ಳಿಯ ಬಳಿ ಯೋಜಿಸಲ್ಪಟ್ಟ ಯುರೇನಿಯಂ ಸಾಂದ್ರೀಕರಣ ಘಟಕದ ವಿರುದ್ಧ, ನಾಗರಹೊಳೆ - ಬಂಡೀಪುರ ಕಾಡುಗಳಲ್ಲಿ ರೆಸಾರ್ಟ್ ಪ್ರಾರಂಭಿಸುವವರ ವಿರುದ್ಧ, ನಂದಿಕೂರು ಮತ್ತು ತದಡಿಯ ಉಷ್ಣ ಸ್ಥಾವರಗಳ ವಿರುದ್ಧ, ತದಡಿಯ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರದ ವಿರುದ್ಧ, ಸಾಗರದ ಬಳಿ ಚಿನ್ನದ ಅದಿರು ಶೋಧದ ವಿರುದ್ಧ, ಬಿಡದಿ-ಸಾತನೂರಿನ ಬಳಿ ಜಪಾನ್ ಉದ್ಯಮ ಪ್ರಾರಂಭಿಸುವುದರ ವಿರುದ್ಧ, ಪರಿಸರವಾದಿಗಳ, ಸಾಮಾನ್ಯರ, ತಜ್ಞರ, ಸ್ಥಳೀಯರ ಹೋರಾಟಗಳು ನಿರಂತರವಾಗಿ ನಡೆದವು.
ಇವುಗಳಿಗೆ ಸಮಾನಾಂತರವಾಗಿ ನಡೆಯುತ್ತಿದ್ದ ಬೃಹತ್ ಪರಿಸರ ಹೋರಾಟಗಳ ಫಲವಾಗಿ ಕರ್ನಾಟಕದಲ್ಲಿ ಸಕ್ರಿಯವಾಗಿದ್ದ ಎಲ್ಲ ಸ್ವಯಂಸೇವಾ ಸಂಸ್ಥೆಗಳು ಒಂದಾಗಿ ಫೆವಾರ್ಡ್ - ಕೆ . ಒಕ್ಕೂಟವನ್ನು ಸ್ಥಾಪಿಸಿ, ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲೇ ಪರಿಸರಕ್ಕೆ ಧಕ್ಕೆ ಬರುತ್ತಿದೆ ಎಂದು ತಿಳಿದ ತಕ್ಷಣ ಅಲ್ಲಿಗೆ ತೆರಳಿ, ಸಂತ್ರಸ್ತರನ್ನು ಸಂಘಟಿಸಿ, ಯೋಜನೆ ಬಾಧಕ ಚರ್ಚಿಸಿ ನಂತರ ಸಮರ್ಪಕವಾಗಿ ಪ್ರತಿಭಟಿಸುವ ಕೆಲಸ ಮಾಡಿದರು.
ಪ್ರಕೃತಿ ರಕ್ಷಣೆ– ಜನಜಾಗೃತಿಯ ವಿಶಿಷ್ಟ ಹಾದಿ; ಕರ್ನಾಟಕದ ಪರಿಸರ ಹೋರಾಟ ಹೇಗಿದೆ?
ಒಂದು ಸಾಲಿನಲ್ಲಿಕರ್ನಾಟಕದಲ್ಲಿ ಪರಿಸರ ಸಂರಕ್ಷಣೆಗಾಗಿ ನಡೆದ ಐತಿಹಾಸಿಕ ಹೋರಾಟಗಳು ಮತ್ತು ಜನಾಂದೋಲನಗಳು ಪ್ರಕೃತಿ ಸಂಪತ್ತನ್ನು ಉಳಿಸಲು ಪ್ರೇರಣೆಯಾಗಿ ಹೇಗೆ ನಿಂತಿವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.ಏನು? ಏಕೆ? ಹೇಗೆ?ಬೇಡ್ತಿ ಯೋಜನೆ ವಿರೋಧಕ್ಕೆ ಕಾರಣವೇನು?
ಬೇಡ್ತಿ ಮತ್ತು ಅಘನಾಶಿನಿ ನದಿಗಳ ಅಣೆಕಟ್ಟು ಯೋಜನೆಯು 60 ಹಳ್ಳಿಗಳನ್ನು ಮುಳುಗಡೆಗೊಳಿಸುವ ಮತ್ತು ಸಾವಿರಾರು ಎಕರೆ ಕೃಷಿ ಭೂಮಿಯನ್ನು ನಾಶಪಡಿಸುವ ಭೀತಿಯಿಂದ ಸ್ಥಳೀಯರ ಬೃಹತ್ ಪ್ರತಿಭಟನೆಗೆ ನಾಂದಿ ಹಾಡಿತು.
ಅಪ್ಪಿಕೋ ಚಳವಳಿ ಹೇಗೆ ಕಾರ್ಯನಿರ್ವಹಿಸಿತು?
ವಾಣಿಜ್ಯ ಉದ್ದೇಶಕ್ಕಾಗಿ ಮರ ಕಡಿಯುವುದನ್ನು ವಿರೋಧಿಸಲು ಜನರು ಗಿಡ-ಮರಗಳನ್ನು ಅಪ್ಪಿ ಹಿಡಿಯುವ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಿದರು ಮತ್ತು ಸುಸ್ಥಿರ ಅರಣ್ಯ ಬಳಕೆಯ ಜಾಗೃತಿಯನ್ನು ಮೂಡಿಸಿದರು.
ಕುದುರೆಮುಖ ಗಣಿಗಾರಿಕೆ ತಡೆಯಾದದ್ದು ಹೇಗೆ?
ಪರಿಸರವಾದಿಗಳು ಮತ್ತು ವಿಜ್ಞಾನಿಗಳು ಗಣಿಗಾರಿಕೆಯಿಂದ ತುಂಗಾ-ಭದ್ರಾ ನದಿಗಳ ಮೇಲಾಗುತ್ತಿರುವ ಹಾನಿಯನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಿದ್ದರಿಂದ, 2005ರಲ್ಲಿ ಸುಪ್ರೀಂ ಕೋರ್ಟ್ ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿತು.
ಪಶ್ಚಿಮ ಘಟ್ಟ ಉಳಿಸಿ ಅಭಿಯಾನದ ಮಹತ್ವವೇನು?
1987-88ರಲ್ಲಿ ನಡೆದ 100 ದಿನಗಳ ಈ ಐತಿಹಾಸಿಕ ಕಾಲ್ನಡಿಗೆ ಜಾಥಾವು ಪಶ್ಚಿಮ ಘಟ್ಟಗಳ ಜೀವವೈವಿಧ್ಯವನ್ನು ಜಾಗತಿಕ ಮಟ್ಟದಲ್ಲಿ 'ಹಾಟ್ಸ್ಪಾಟ್' ಎಂದು ಗುರುತಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಇಂದಿನ ಪರಿಸರ ಹೋರಾಟಗಳು ಹೇಗಿವೆ?
ನಗರೀಕರಣದಿಂದ ಉಂಟಾಗುತ್ತಿರುವ ಮರಗಳ ಮಾರಣಹೋಮ, ಜಲ ಮಾಲಿನ್ಯ ಮತ್ತು ಕೈಗಾರಿಕಾ ತ್ಯಾಜ್ಯಗಳ ವಿರುದ್ಧ ನಾಗರಿಕರು ಹಾಗೂ ಸ್ವಯಂಸೇವಾ ಸಂಸ್ಥೆಗಳು ನಿರಂತರವಾಗಿ ಜಾಗೃತಿ ಮತ್ತು ಹೋರಾಟಗಳನ್ನು ನಡೆಸುತ್ತಿವೆ.
&ಪ್ರಮುಖ ಅಂಕಿಅಂಶಗಳು60ಬೇಡ್ತಿ ಯೋಜನೆ ವಿರೋಧಿಸಲು ಭಾಗವಹಿಸಿದ ಹಳ್ಳಿಗಳ ಸಂಖ್ಯೆ100ಪಶ್ಚಿಮ ಘಟ್ಟ ಉಳಿಸಿ ಅಭಿಯಾನದ ಅವಧಿ (ದಿನಗಳು)2005ಕುದುರೆಮುಖ ಗಣಿಗಾರಿಕೆ ಸ್ಥಗಿತಗೊಂಡ ವರ್ಷಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆಹೋರಾಟ, ಜಾಗೃತಿ ನಿರಂತರ
ಕರ್ನಾಟಕದಲ್ಲಿ ನಗರೀಕರಣ ಹಾಗೂ ಮೂಲಸೌಕರ್ಯ ಯೋಜನೆಗಳ ವಿಸ್ತರಣೆಯೊಂದಿಗೆ ಪರಿಸರ ಸಂರಕ್ಷಣೆಯೂ ಅತ್ಯಂತ ಪ್ರಮುಖ ಸವಾಲಾಗಿ ಹೊರಹೊಮ್ಮಿದ್ದು, ಹಲವು ಜನಾಂದೋಲನಗಳಿಗೆ ಕಾರಣವಾಗಿದೆ. ಇನ್ನೊಂದೆಡೆ, ಬೆಂಗಳೂರಿನಲ್ಲಿ ಮೆಟ್ರೋ ಹಾಗೂ ರಸ್ತೆ ಅಗಲೀಕರಣಕ್ಕೆ ಸಾವಿರಾರು ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿ ನಾಗರಿಕರು 'ಟ್ರೀ ಹಗ್' ಮತ್ತು 'ಮರ ಗಣತಿ' ಅಭಿಯಾನಗಳ ಮೂಲಕ ನಗರ ಅರಣ್ಯ ಹಾಗೂ ಕೆರೆಗಳ ಒತ್ತುವರಿ ವಿರುದ್ಧ ಹೋರಾಡುತ್ತಿದ್ದಾರೆ. ಜೊತೆಗೆ ಮೈಸೂರಿನ ತಿಪ್ಪಯ್ಯನ ಕೆರೆಯಂತಹ ಜಲಮೂಲಗಳಿಗೆ ಕೈಗಾರಿಕಾ ತ್ಯಾಜ್ಯ ನೀರು ಸೇರುವುದನ್ನು ತಡೆದು ಜಲಚರಗಳನ್ನು ರಕ್ಷಿಸುವ ಮಾಲಿನ್ಯ ವಿರೋಧಿ ಚಳವಳಿಗಳು ತೀವ್ರಗೊಂಡಿವೆ. ಇದರೊಂದಿಗೆ ಮಿಷನ್ ಲೈಫ್ ಭಾಗವಾಗಿ ಏಕಬಾರಿ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ,ನದಿ-ಕಡಲತೀರಗಳ ಸ್ವಚ್ಛತೆ ಹಾಗೂ ಪರ್ಯಾಯ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸಲು ಶಾಲಾ-ಕಾಲೇಜುಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ವ್ಯಾಪಕ ಜಾಗೃತಿ ಜಾಥಾಗಳನ್ನು ಸಂಘಟಿಸುತ್ತಿವೆ.
ಪರಿಸರ ಹೋರಾಟಗಳನ್ನು ಕೇವಲ 'ಸೋಲು' ಅಥವಾ 'ಗೆಲುವು' ಎಂಬ ಸರಳ ಆಯಾಮದಲ್ಲಿ ಅಳೆಯಲು ಸಾಧ್ಯವಿಲ್ಲ. ಕೆಲವು ಯೋಜನೆಗಳು ಸಂಪೂರ್ಣ ರದ್ದಾದರೆ, ಇನ್ನು ಕೆಲವು ಪುನರ್-ರೂಪುಗೊಂಡಿವೆ. ಆದರೆ, ಈ ಚಳವಳಿಗಳು ಜನರಲ್ಲಿ ಮೂಡಿಸಿದ ಪಾರಿಸರಿಕ ಜಾಗೃತಿ, ಪ್ರಕೃತಿಯ ಮೇಲಿನ ಕಾಳಜಿ ಹಾಗೂ ಗಡಿಗಳನ್ನು ಮೀರಿದ ಒಗ್ಗಟ್ಟು ಭಾರತದ ಪರಿಸರ ಚಳವಳಿಗಳ ಇತಿಹಾಸದಲ್ಲಿ ಕರ್ನಾಟಕದ ಕೊಡುಗೆಯನ್ನು ಅಮರಗೊಳಿಸಿವೆ.
( ಲೇಖಕರು: ಶಿಕ್ಷಣ ತಜ್ಞರು, ಸಂಸ್ಥೆಯೊಂದರಲ್ಲಿ ಪ್ರಾಂಶುಪಾಲರು)
ಉತ್ತರ ಕನ್ನಡದ ಕೈಗಾದಲ್ಲಿ ಅಣುಸ್ಥಾವರ ಸ್ಥಾಪಿಸಲು ಸರ್ಕಾರ ಮುಂದಾದಾಗ, ಪರಿಸರವಾದಿಗಳು ಹಾಗೂ ಸ್ಥಳೀಯ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಜಲವಿದ್ಯುತ್ ಯೋಜನೆಗಳಿಂದ ಕಾಡು ನಾಶವಾಗುತ್ತದೆ, ಆದ್ದರಿಂದ ಅಣುಶಕ್ತಿಯೇ ಪರ್ಯಾಯ ಎಂಬ ಸರ್ಕಾರದ ವಾದವನ್ನು ಜಸ್ಟಿಸ್ ಕೃಷ್ಣ ಅಯ್ಯರ್, ಡಾ.ಶಿವರಾಮ ಕಾರಂತ, ಪೇಜಾವರ ಶ್ರೀಗಳು ಹಾಗೂ ಅಂತರರಾಷ್ಟ್ರೀಯ ವಿಜ್ಞಾನಿಗಳು ಪ್ರಶ್ನಿಸಿದರು. ಅಣುವಿಕಿರಣದ ಅಪಾಯಗಳು ಮತ್ತು ದಟ್ಟ ಕಾಡಿನ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗತಿಕ ಮಟ್ಟದಲ್ಲಿ ದೊಡ್ಡ ಸಂವಾದವೇ ನಡೆಯಿತು.ಕೈಗಾ ಅಣುಸ್ಥಾವರ ವಿರೋಧ ಮತ್ತು ವೈಜ್ಞಾನಿಕ ಸಂವಾದಪ್ರಸ್ತುತ ಎತ್ತಿನಹೊಳೆ ಹಾಗೂ ಶರಾವತಿ ನದಿ ತಿರುವು ಯೋಜನೆಗಳ ವಿರುದ್ಧವೂ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಹೋರಾಟಗಳು ಮುಂದುವರಿದಿವೆ. ಈಗ ಮತ್ತೆ ಮುನ್ನೆಲೆಗೆ ಬಂದಿರುವ ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆಯಿಂದ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ, ಅಪರೂಪದ ಜೀವವೈವಿಧ್ಯ ಹಾಗೂ ಸ್ಥಳೀಯ ಮೀನುಗಾರರು-ರೈತರ ಬದುಕು ನಾಶವಾಗುತ್ತದೆ ಎಂಬ ಕಳವಳದಿಂದ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ನದಿ ಜೋಡಣೆಗೆ ವಿರೋಧಕರುನಾಡೋತ್ಸವ | ಜಪಾನ್ ಕನ್ನಡ ಸಂಘ: ಜಪಾನ್ನಲ್ಲಿ ಕನ್ನಡಿಗರ ಒಗ್ಗಟ್ಟಿನ ನೆಲೆಕರುನಾಡೋತ್ಸವ: ಮೈಸೂರಿನ ಈ ಸಂಸ್ಥೆಯಲ್ಲಿ ದೇಶದ ಆಹಾರೋತ್ಪನ್ನಗಳ ಗುಣಮಟ್ಟ ಪರೀಕ್ಷೆಕರುನಾಡೋತ್ಸವ ವಿಶೇಷ: ದೇವಕಾರಿನ ದಾರಿಯಲ್ಲಿ ಕರ್ನಾಟಕದ ಜಲಪಾತಗಳ ಲೋಕ ಬಲ್ಲಿರಾ?ಕರುನಾಡೋತ್ಸವ | ಪ್ರಗತಿಶೀಲ ಸಾಹಿತ್ಯ: ಜನಬದುಕಿನ ದನಿಯಾಗಿ...ಕರುನಾಡೋತ್ಸವ: ಉಡುಪಿಯಿಂದ ಇಸ್ರೊವರೆಗೆ ಯು.ಆರ್.ರಾವ್ ಬಾನೆತ್ತರದ ಸಾಧನೆ
