ಮೈಸೂರು: ‘ವಿಶ್ವಸಂಸ್ಕೃತಿಯ ಮಹಾಯಾನ’ ಗದ್ಯಮಹಾಕಾವ್ಯದ ಹತ್ತು ಸಂಪುಟಗಳನ್ನು ಹೊರತರಲು ಯೋಜಿಸಿದ್ದೇನೆ. 5ನೇ ಸಂಪುಟ ಬಹುತೇಕ ಸಿದ್ಧವಾಗಿದ್ದು, ಜನವರಿಯಲ್ಲಿ ಲೋಕಾರ್ಪಣೆ ಮಾಡಲಾಗುವುದು’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ತಿಳಿಸಿದರು.
ಇಲ್ಲಿ ಬುಧವಾರ ನಡೆದ ‘ವಿಶ್ವಸಂಸ್ಕೃತಿಯ ಮಹಾಯಾನ’ (ಸಂಪುಟ 4)– ಗದ್ಯ ಮಹಾಕಾವ್ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಹಳಷ್ಟು ಪ್ರಾಕಾರದ ಸಾಹಿತ್ಯ ರಚಿಸಿದ್ದರೂ ನನಗೆ ತೃಪ್ತಿ ಇಲ್ಲ. ವಿಶ್ವಸಂಸ್ಕೃತಿಯ ಮಹಾಯಾನ ಕೃತಿಯು ಸತ್ಯದ ಹುಡುಕಾಟ. ಸಂಸ್ಕೃತಿ ಮಾತ್ರವೇ ಹೃದಯಗಳನ್ನು ಒಗ್ಗೂಡಿಸುತ್ತದೆ. ಆಗ ಮಾತ್ರ ವಿಶ್ವದ ಏಕತೆ ಸಾಧ್ಯ. ಅದೇ ಮಹಾಶಕ್ತಿ’ ಎಂದರು.
‘ಪ್ರಸ್ತುತ ಪ್ರೀತಿಯ ಬಳ್ಳಿ ಸೊರಗುತ್ತಿದೆ. ಪ್ರೀತಿಯ ಬಳ್ಳಿಗೆ ನೀರೆರೆದು ಪೋಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ’ ಎಂದು ಆಶಿಸಿದರು.
ಮನುಷ್ಯರು ಒಂದಾಗಬೇಕು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಜಗತ್ತು ಒಂದಾಗಬೇಕಾದರೆ ಮೊದಲು ಮನುಷ್ಯರು ಒಂದಾಗಬೇಕು. ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುವುದೇ ಧರ್ಮ ಮತ್ತು ಸಂಸ್ಕೃತಿ. ರಾಜಕೀಯದಲ್ಲಿರುವ ನಮ್ಮ ಹೆಸರು ಭವಿಷ್ಯದಲ್ಲಿ ಮರೆಯಾಗಬಹುದು. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರು ಮತ್ತು ಅವರ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಶಿಕ್ಷಣ ಮತ್ತು ಸಾಹಿತ್ಯ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ’ ಎಂದು ವ್ಯಾಖ್ಯಾನಿಸಿದರು.
‘ಸಾಹಿತ್ಯ ಮತ್ತು ರಾಜಕಾರಣದ ನಂಟು ಹೊಸದೇನಲ್ಲ. ಅಧಿಕಾರ ಬಳಸಿಕೊಂಡು ಜನರ ಬದುಕಿನಲ್ಲಿ ಬದಲಾವಣೆ ತರಬಹುದು. ಆದರೆ, ಸಾಹಿತ್ಯದ ಮೂಲಕ ಜನರ ಆಲೋಚನೆಗಳನ್ನೇ ಬದಲಾಯಿಸಬಹುದು. ಅಧಿಕಾರದ ಅವಧಿ ಸೀಮಿತವಾದರೂ ಸಾಹಿತ್ಯದ ಪ್ರಭಾವ ಶಾಶ್ವತ. ವ್ಯಕ್ತಿಯ ಬದುಕು ಮುಗಿದರೂ ಆತ ಬರೆದ ಚಿಂತನೆಗಳಿಗೆ ಸಾವಿಲ್ಲ’ ಎಂದು ಪ್ರತಿಪಾದಿಸಿದರು.
ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಮಾತನಾಡಿದರು. ಸಾಹಿತಿ ಕೆ.ಅನಂತರಾಮು ಆಶಯ ನುಡಿಗಳನ್ನಾಡಿದರು.
ನಿವೃತ್ತ ಕುಲಪತಿ ಪ್ರೊ.ಪದ್ಮಾಶೇಖರ್ ಕೃತಿ ಪರಿಚಯಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ರಾಮಲಿಂಗಾ ರೆಡ್ಡಿ, ಶಾಸಕರಾದ ತನ್ವೀರ್ ಸೇಠ್, ಎ.ಎಸ್. ಪೊನ್ನಣ್ಣ, ದರ್ಶನ್ ಧ್ರುವನಾರಾಯಣ, ಎಚ್.ಎಂ. ಗಣೇಶ್ಪ್ರಸಾದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ರಾಜ್ಯ ಧಾರ್ಮಿಕ ಪರಿಷತ್ತು ಅಧ್ಯಕ್ಷ ಕೆ.ಎಂ. ನಾಗರಾಜ್, ಸಪ್ನ ಬುಕ್ ಹೌಸ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಪಾಲ್ಗೊಂಡಿದ್ದರು.
ಪುಸ್ತಕ ಪರಿಚಯ
ಕೃತಿ;ವಿಶ್ವಸಂಸ್ಕೃತಿಕ ಮಹಾಯಾನ (ಸಂಪುಟ–4) ಲೇಖಕ;ಎಂ.ವೀರಪ್ಪ ಮೊಯಿಲಿ ಪ್ರಕಾಶನ;ಸಪ್ನ ಬುಕ್ ಹೌಸ್ ಪುಟಗಳು;558 ಬೆಲೆ;₹ 795
ಅಧಿಕೃತ ಮಾನ್ಯತೆಗೆ ಬದ್ಧ: ಸಿ.ಎಂ
‘ಕನ್ನಡ ಭಾಷೆ ಮತ್ತು ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ವಿಚಾರದಲ್ಲೂ ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಕನ್ನಡ ಧ್ವಜದ ವಿಚಾರವನ್ನು ಕೇಂದ್ರದ ಗಮನಕ್ಕೆ ತಂದಿದ್ದರು. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಅಗತ್ಯ ಕಾನೂನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಸಂವಿಧಾನದಲ್ಲಿ ಇದಕ್ಕೆ ಯಾವುದೇ ನಿರ್ಬಂಧವಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

