ಶಿವಮೊಗ್ಗ: ‘ಜಮೀನಿನ ಖಾತೆ ಬದಲಿಸಿ, ನಮ್ಮ ಹೆಸರಿಗೆ ಪಹಣಿ ಮಾಡಿಕೊಡಲು ₹ 25 ಲಕ್ಷ ಲಂಚ ಪಡೆದಿದ್ದ ಇಲ್ಲಿನ ತಹಶೀಲ್ದಾರ್ ವರ್ಗಾವಣೆಗೊಂಡಿದ್ದು, ನಮಗೆ ಅನ್ಯಾಯವಾಗಿದೆ' ಎಂದು ಆರೋಪಿಸಿರುವ ತಾಲ್ಲೂಕಿನ ರಾಮೇನಕೊಪ್ಪ ಗ್ರಾಮದ 12 ರೈತ ಕುಟುಂಬಗಳ ಸದಸ್ಯರು, ವಂಚನೆ ಸಂಬಂಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಕೋರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
‘ಗ್ರಾಮದ ಸರ್ವೆ ನಂ. 17ರಲ್ಲಿ 1960ರಿಂದ 12 ಕುಟುಂಬಗಳು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಮೂಲ ಮಂಜೂರಾತಿದಾರರು ನಾವೇ ಆಗಿದ್ದರೂ ಜಮೀನಿನ ಖಾತೆ ಮಾಡಿಕೊಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಿ ನಡೆದ ಪ್ರತಿಭಟನೆ ವೇಳೆ ಗ್ರಾಮದ ರೈತ ನಾಗರಾಜ್ ಎಂಬವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಆಲದ ಮರವೇರಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
‘ಇದೀಗ ವರ್ಗಾವಣೆಯಾಗಿರುವ ತಹಶೀಲ್ದಾರ್ ರಾಜೀವ್ ಅವರು ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗೆ ನೀಡಬೇಕು ಎಂದು ತಿಳಿಸಿ ನಮ್ಮಿಂದ ₹ 25 ಲಕ್ಷ ಲಂಚ ಪಡೆದಿದ್ದಾರೆ. ಆದರೂ ಕೆಲಸ ಮಾಡಿಕೊಡದೆ ವಂಚಿಸಿದ್ದಾರೆ’ ಎಂದು ದೂರಿದ ರೈತರು ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರೈತನನ್ನು ಕೆಳಗಿಳಿಸಲು ಪ್ರಯತ್ನಿಸಿದರು. ಈ ವೇಳೆ ತನಿಖೆ ನಡೆಸಿ ನ್ಯಾಯ ಒದಗಿಸುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ ನಂತರ ಸುಮಾರು ನಾಲ್ಕು ಗಂಟೆಗಳ ಪ್ರತಿಭಟನೆ ಅಂತ್ಯಗೊಂಡಿತು.
‘ತಹಶೀಲ್ದಾರ್ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು. ಆರೋಪಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರೈತರು ಒತ್ತಾಯಿಸಿದರು. ಈ ಸಂಬಂಧ ಲೋಕಾಯುಕ್ತ ಹಾಗೂ ಮುಖ್ಯಮಂತ್ರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಅಂಜುಮ್, ತುಂಗಮ್ಮ, ಮೀನಾಕ್ಷಮ್ಮ, ರತ್ನಮ್ಮ, ಚಂದ್ರಶೇಖರ, ಬಸವರಾಜ ಸೇರಿ ನೊಂದ ಕುಟುಂಬಗಳ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.
ನಾಗರಾಜ್ , ಮರ ಏರಿ ಪ್ರತಿಭಟಿಸಿದ ರೈತಸಚಿವರ ಕಚೇರಿಯಿಂದ ಕರೆ ಮಾಡಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಲಾಗಿನ್ ಬಂದ್ ಮಾಡಿ ನೋಟಿಸ್ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಲಂಚದ ಹಾವಳಿಯಿಂದ ರೈತರು ವಿಷ ಕುಡಿಯುವ ಸ್ಥಿತಿಗೆ ಬಂದಿದ್ದೇವೆ
