ಬೆಂಗಳೂರು: ಹಾಲು, ಬಸ್‌ ಪ್ರಯಾಣ ದರ ಸೇರಿದಂತೆ ಅಗತ್ಯ ವಸ್ತು, ಸೇವೆಗಳ ಬಲೆ ಏರಿಕೆ ಖಂಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಬುಧವಾರ ‍ಪ್ರತಿಭಟನೆ ನಡೆಸಿದರು. 

ಸ್ವಾತಂತ್ರ್ಯ ಉದ್ಯಾನದ ಬಳಿ ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ ಏರಿ ಆಕ್ರೋಶ ವ್ಯಕ್ತಪಡಿಸಿದರು. ಅಧಿಕ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಕೆ.ಆರ್‌. ವೃತ್ತ ಹಾಗೂ ಆನಂದರಾವ್‌ ವೃತ್ತದ ರಸ್ತೆಯಲ್ಲಿನ ವಾಹನಗಳ ಸಂಚಾರಕ್ಕೆ ಕೆಲ ಗಂಟೆಗಳು ತೀವ್ರ ಅಡಚಣೆಯಾಯಿತು. 

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ದಿವಾಳಿಯಾಗಿದೆ. ಸಾರಿಗೆ ನಿಗಮಗಳ ಬಸ್‌ಗಳಿಗೆ ಡೀಸೆಲ್‌ ತುಂಬಿಸಲೂ ಹಣವಿಲ್ಲದಂತಾಗಿದೆ. ಭ್ರಷ್ಟಾಚಾರದಲ್ಲೇ ಮುಳುಗಿರುವ ಸರ್ಕಾರವನ್ನು ಕಿತ್ತು ಹಾಕಬೇಕು. ಬೆಲೆ ಏರಿಕೆ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು. 

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಬೆಲೆ ಏರಿಕೆಯೇ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಮೂರೂವರೆ ವರ್ಷಗಳ ಸಾಧನೆ. ಬಡವರು, ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆಯನ್ನು ನಾಲ್ಕು ಬಾರಿ ಹೆಚ್ಚಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲೂ ದುಬಾರಿ ಶುಲ್ಕ ಪಾವತಿಸಿ, ಚಿಕಿತ್ಸೆ ಪಡೆಯುವಂತಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲೇ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ಹೆಚ್ಚಿಸಿದರು. ರೈತರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ನೆರವು ನೀಡುವ ಬದಲು ಗ್ರಾಹಕರಿಗೆ ಬರೆ ಹಾಕಿದರು’ ಎಂದು ಟೀಕಿಸಿದರು. 

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮಾತನಾಡಿ, ‘ರಾಜ್ಯದಲ್ಲಿ ಬೆಲೆ ಏರಿಕೆ ವಿರುದ್ಧ ಜನರು ತೀವ್ರ ಆಕ್ರೋಶಗೊಂಡಿದ್ದಾರೆ. ಹಾಸನಾಂಬೆಯ ದರ್ಶನಕ್ಕೆ ಹೋದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಜನರೇ ಮಂಗಳಾರತಿ ಮಾಡಿ ಕಳುಹಿಸಿದ್ದಾರೆ. ಆ ದೇವರು ಕೂಡ ಶಿವಕುಮಾರ್‌ ಅವರಿಗೆ ಆಶೀರ್ವಾದ ಮಾಡುತ್ತಿಲ್ಲ. ಅವರಿಗೆ ಆಡಳಿತದ ಅನುಭವವೇ ಇಲ್ಲ’ ಎಂದರು.  

ವಿಧಾನ ಪರಿಷತ್‌ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದ  ಮೇಲೆ ಯಾವ ವಸ್ತು, ಸೇವೆಯ ಬೆಲೆ ಹೆಚ್ಚಳ ಮಾಡಿಲ್ಲ ಎಂದು ಹುಡುಕುವುದೇ ಕಷ್ಟವಾಗಿದೆ. ಚುನಾವಣೆಗೆ ಮೊದಲು ಮತ ಭಿಕ್ಷೆ ಬೇಡಿದ್ದವರು, ಈಗ ಜನರಿಗೆ ಬೆಲೆ ಏರಿಕೆಯ ಬರೆ ಹಾಕುತ್ತಿದ್ದಾರೆ’ ಎಂದು ಟೀಕಿಸಿದರು.

ಸಂಸದರಾದ ಗೋವಿಂದ ಕಾರಜೋಳ, ಉಮೇಶ್ ಜಾಧವ್, ಯದುವೀರ ಒಡೆಯರ್‌, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಆರಗ ಜ್ಞಾನೇಂದ್ರ, ಕೆ. ಗೋಪಾಲಯ್ಯ, ಚನ್ನಬಸಪ್ಪ, ವಿಧಾನಪರಿಷತ್‌ ವಿರೋಧ ‍ಪಕ್ಷದ ಮುಖ್ಯಸಚೇತಕ ಎನ್‌. ರವಿಕುಮಾರ್, ಪಕ್ಷದ ಮುಖಂಡರಾದ ಪಿ.ರಾಜೀವ್‌, ಪ್ರಮೋದ್ ಮಧ್ವರಾಜ್ ಮತ್ತಿತರರು ಭಾಗವಹಿಸಿದ್ದರು.    

ಜಗದೀಶ ಶೆಟ್ಟರ್, ಸಂಸದಖಾಲಿಯಾಗಿರುವ ರಾಜ್ಯದ ಖಜಾನೆ ತುಂಬಿಸಲು ಪ್ರತಿಯೊಂದು ವಸ್ತುಗಳ ಬೆಲೆಯನ್ನೂ ಏರಿಸುತ್ತಿದ್ದಾರೆ. ಕಾಂಗ್ರೆಸ್‌ ಆಡಳಿತ ವೈಖರಿಗೆ ಆ ಪಕ್ಷದ ಶಾಸಕರೇ ಹಿಡಿಶಾಪ ಹಾಕುತ್ತಿದ್ದಾರೆ

ಪ್ರಾಣಿಗಳಂತೆ ಕಾಣುತ್ತಿರುವ ಸರ್ಕಾರ: ಬೊಮ್ಮಾಯಿ

‘ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡುತ್ತಲೇ ಇದೆ. ಮತ್ತೊಂದು ಕಡೆ ಬರ ಪರಿಹಾರದ ಹಣವನ್ನೂ ರೈತರಿಗೆ  ತಲುಪಿಸುತ್ತಿಲ್ಲ. ಜನರನ್ನು ಪ್ರಾಣಿಗಳಂತೆ ಕಾಣುತ್ತಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. ‘ಅಗತ್ಯ ವಸ್ತುಗಳ ಬೆಲೆ ಹಾಗೂ ಸೇವಾ ಶುಲ್ಕ ಗಣನೀಯವಾಗಿ ಹೆಚ್ಚಳವಾಗಿದೆ. ಹಾಲು ನೀರು ವಿದ್ಯುತ್ ಡೀಸೆಲ್ ಮದ್ಯ ಹಾಗೂ ಭೂ ಕಂದಾಯ ಸೇರಿದಂತೆ ಎಲ್ಲ ಸೌಕರ್ಯಗಳ ದರ ಗಗನಕ್ಕೇರಿದೆ. ಕಳೆದ ಮೂರು ವರ್ಷಗಳಲ್ಲಿ ₹4 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದ ಜನರ ಮೇಲೆ ಸುಮಾರು ₹1 ಲಕ್ಷ ಕೋಟಿಗೂ ಅಧಿಕ ಹೊಸ ತೆರಿಗೆ ಹೇರಲಾಗಿದೆ’ ಎಂದು ದೂರಿದರು.​

‘ಎಥೆನಾಲ್ ಕಲಬೆರಕೆಗೆ ಉತ್ತರಿಸಿ, ನಂತರ ಪ್ರತಿಭಟಿಸಿ: ಸಿ.ಎಂ ಸವಾಲು

ಮೈಸೂರು: ‘ಪೆಟ್ರೋಲ್‌ನಲ್ಲಿ ಅಧಿಕ ಪ್ರಮಾಣದ ಎಥೆನಾಲ್‌ ಮಿಶ್ರಣ ಮಾಡುತ್ತಿರುವ ಬಗ್ಗೆ ಉತ್ತರಿಸಿ ನಂತರ ಪ್ರತಿಭಟನೆ ನಡೆಸಲಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಬೆಲೆ ಏರಿಕೆ ವಿರುದ್ಧ ಬಿಜೆಪಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಬಗ್ಗೆ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಅವರದು ಪ್ರತಿಭಟನೆಯಲ್ಲ, ರಾಜಕಾರಣ. ಕೇಂದ್ರ ಸರ್ಕಾರ ತೈಲಬೆಲೆ ಏರಿಸಿದಾಗ ಏಕೆ ಪ್ರತಿಭಟಿಸಲಿಲ್ಲ?’ ಎಂದು ಕೇಳಿದರು.

‘ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಶೇ 20ರ ಬದಲು ಶೇ 30ರಷ್ಟು ಬೆರೆಸಿದ್ದಾರೆ. ಇದರಿಂದ ರಾಜ್ಯದ ಕೋಟ್ಯಂತರ ವಾಹನಗಳಿಗೆ ತೊಂದರೆ ಆಗಿದೆ. ಎಂಜಿನ್‌ಗಳು ಕೆಟ್ಟು ಹೋಗಿ ನಷ್ಟವಾಗಿದೆ. ಇವೆಲ್ಲಾ ಬಿಜೆಪಿಯವರಿಗೆ ಕಾಣುವುದಿಲ್ಲವೇ? ಈ ಅವಾಂತರ ಅವರಿಗೆ ತಿಳಿದಿಲ್ಲವೇ’ ಎಂದು ಪ್ರಶ್ನಿಸಿದರು.

‘ಕಲಬೆರೆಕೆ ತೈಲ ಸರಬರಾಜು ಮಾಡಿ ರಾಜ್ಯದ ಜನರಿಗೆ ಹೊಡೆತ ನೀಡಿರುವುದಕ್ಕೆ ಯಾರು ಜವಾಬ್ದಾರಿ? ಕೇಂದ್ರದ ಸಚಿವರು ಇಲ್ಲ, ಇಲ್ಲ ಎನ್ನುತ್ತಿದ್ದಾರೆ. ಆದರೆ, ನಮ್ಮ ಸ್ಯಾಂಪಲ್‌ಗಳು (ಮಾದರಿಗಳು) ಸಾಕ್ಷಿಗಿವೆ. ಮೊದಲು ಇದಕ್ಕೆ ಬಿಜೆಪಿಯವರು ಉತ್ತರಿಸಲಿ’ ಎಂದು ಸವಾಲು ಹಾಕಿದರು.

ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರ ಖುಷಿಗೆ ಮಾತನಾಡುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ತುಂಡು ತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಹಾಕುತ್ತೇನೆ ಅಂದರು, ಆ ಪಕ್ಷದ ಅಧ್ಯಕ್ಷರು ‘ನನ್ಮಕ್ಕಳು’ ಎಂದು ಜರಿದಿದ್ದಾರೆ. ಹಾಗಾದರೆ, ನಾವೆಲ್ಲಾ ವಿಜಯೇಂದ್ರರ ಮಕ್ಕಳಾ? ಬಿಜೆಪಿಯವರು
ಆತ್ಮಸಂತೋಷಕ್ಕೆ ಬೇರೆಯವರನ್ನು ಬೈಯುತ್ತಿದ್ದಾರೆ’ ಎಂದು ಅವರು ದೂರಿದರು.

ನಿಗಮ–ಮಂಡಳಿ: 428 ಸ್ಥಾನಗಳಿಗೆ ನೇಮಕ

ಬೆಂಗಳೂರು: ವಿವಿಧ ನಿಗಮ–ಮಂಡಳಿ ಹಾಗೂ ಪ್ರಾಧಿಕಾರಗಳಿಗೆ 428 ಸದಸ್ಯರು/ನಿರ್ದೇಶಕರ ನೇಮಕಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ.

ನೇಮಕಾತಿ ಪಟ್ಟಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಸಹಿ ಹಾಕಿದ್ದಾರೆ.

‘ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಾಯದಂತೆ ಕೊನೆಗೂ 112 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ನೇಮಕ ಮಾಡಿದ್ದು, ಉಳಿದ ಸ್ಥಾನಗಳನ್ನು ಶೀಘ್ರ ಭರ್ತಿ ಮಾಡಲಾಗುತ್ತದೆ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.