ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಮೊತ್ತದ ಹಣಕಾಸಿನ ವ್ಯವಹಾರ ಮತ್ತು ಭ್ರಷ್ಟಾಚಾರ ಆರೋಪ ಕುರಿತು ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಸಬೇಕು ಎಂದು ಜೆಡಿಎಸ್ ಶಾಸಕರ ನಿಯೋಗವು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಒತ್ತಾಯಿಸಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ವಿಧಾನ ಪರಿಷತ್ತಿನ ಸದಸ್ಯ ಟಿ.ಎ.ಶರವಣ ಮತ್ತು ಶಾಸಕ ರಾಜುಗೌಡ ಪಾಟೀಲ ಅವರಿದ್ದ ನಿಯೋಗವು ಬುಧವಾರ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದೆ.
‘ಹಾಸನ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಅವರ ಆಪ್ತ ಸಹಾಯಕ ಸೇರಿ ವಿವಿಧ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ ನಡೆಸಲಾದ ವಾಟ್ಸ್ಆ್ಯಪ್ ಸಂದೇಶಗಳ ಸ್ಕ್ರೀನ್ಶಾಟ್ಗಳು ಸೋರಿಕೆ ಆಗಿವೆ. ಈ ಎಲ್ಲ ಅಧಿಕಾರಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿರುವ ವಿವರವೂ ಸ್ಕ್ರೀನ್ಶಾಟ್ಗಳಲ್ಲಿ ಇದೆ’ ಎಂದು ನಿಯೋಗವು ಕಳವಳ ವ್ಯಕ್ತಪಡಿಸಿದೆ.
‘ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹೆಸರಿನಲ್ಲಿ ಲಕ್ಷಗಟ್ಟಲೆ ರೂಪಾಯಿಯ ಪ್ರಸ್ತಾಪಗಳು ಸಂದೇಶಗಳಲ್ಲಿವೆ. ಸಕಲೇಶಪುರದ ಮೂರು ಕ್ರಷರ್ಗಳಿಗೆ ಸಂಬಂಧಿಸಿದ ಕಡತಗಳ ಅನುಮೋದನೆ ಮತ್ತು ವಿಲೇವಾರಿಯ ಮಾಹಿತಿ ಅವುಗಳಲ್ಲಿ ಇವೆ. ಇಲ್ಲಿ ಭ್ರಷ್ಟಾಚಾರ ನಡೆದಿರುವ ಅನುಮಾನವಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.
‘ಸಂದೇಶಗಳಲ್ಲಿ ಉಲ್ಲೇಖಿಸಲಾದ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಇತರ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಬೇಕು. ಅವರ ಮೊಬೈಲ್ ಹಾಗೂ ಹಣಕಾಸಿನ ವಹಿವಾಟು ವಿವರಗಳನ್ನು ಕಲೆಹಾಕಬೇಕು. ಸಂದೇಶಗಳನ್ನು ಸ್ಕ್ರೀನ್ಶಾಟ್ ಮಾಡಲಾದ ಮತ್ತು ಸೋರಿಕೆ ಮಾಡಿದ ಮೊಬೈಲ್ಗಳನ್ನು ವಶಕ್ಕೆ ಪಡೆದು, ಸ್ಕ್ರೀನ್ಶಾಟ್ನಲ್ಲಿರುವ ವಿಷಯಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಕೋರಿದೆ.
ಸ್ವತಂತ್ರ ತನಿಖೆ ನಡೆಯಲಿ: ಶರವಣ
‘ಪ್ರಕರಣವನ್ನು ಜಿಲ್ಲಾಡಳಿತದ ಆಂತರಿಕ ತನಿಖೆಗೆ ಸೀಮಿತಗೊಳಿಸದೆ ಲೋಕಾಯುಕ್ತ ಅಥವಾ ಸಮರ್ಥ ಸ್ವತಂತ್ರ ತನಿಖಾ ಸಂಸ್ಥೆಯ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಟಿ.ಎ.ಶರವಣ ಒತ್ತಾಯಿಸಿದರು. ಮುಖ್ಯ ಕಾರ್ಯದರ್ಶಿ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಹೆಸರಿನಲ್ಲೇ ಈ ವ್ಯವಹಾರಗಳು ನಡೆದಿವೆ ಎಂಬ ಆರೋಪ ಇದೆ. ಹೀಗಿರುವಾಗ ಇಲಾಖಾ ತನಿಖೆ ನಡೆದರೆ ಸತ್ಯ ಹೊರಬರುವುದಿಲ್ಲ. ಭ್ರಷ್ಟಾಚಾರ ತಡೆ ಕಾಯ್ದೆ ಸೇರಿ ಅನ್ವಯವಾಗುವ ಎಲ್ಲ ಕಾನೂನುಗಳ ಅಡಿಯಲ್ಲಿ ಅಪರಾಧದ ಅಂಶಗಳು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.

