ಹಾಸನ: ವಾಟ್ಸ್ಆ್ಯಪ್ ಚಾಟ್ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಲಿಗೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತೀಕ್ಷ್ಣ ಪ್ರತ್ಯುತ್ತರ ನೀಡಿರುವ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ‘ದಿನಕ್ಕೆ ₹60 ಸಾವಿರ ಖರ್ಚು ಮಾಡಲು ನಾನೇನು ಫೈವ್ಸ್ಟಾರ್ ಹೋಟೆಲ್ನಲ್ಲಿ ವಾಸ ಮಾಡ್ತಿದ್ದೀನಾ’ ಎಂದು ಪ್ರಶ್ನಿಸಿದ್ದಾರೆ.
‘ದಿನಕ್ಕೆ ₹50ಸಾವಿರದಿಂದ ₹60 ಸಾವಿರ ಖರ್ಚು ಮಾಡುತ್ತೇನೆ ಎಂಬ ಆರೋಪ ಹಾಸ್ಯಾಸ್ಪದ. ಅವರು ಯಾವ ಮೊತ್ತದ ಬಗ್ಗೆ ಮಾತನಾಡುತ್ತಿದ್ದಾರೆ? ಅಂತಹ ಜೀವನ ಮಾಡುವವರಿಗೆ ಆ ಹಣ ಬೇಕಾಗಬಹುದು. ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಕಚೇರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ನಮಗೆ ಅಷ್ಟೊಂದು ಹಣದ ಅವಶ್ಯಕತೆ ಏನಿದೆ? ಎಂದು ಕೇಳಿದ್ದಾರೆ.
‘ಊಹೆಗೆ ನಿಲುಕದ ಮಾತುಗಳನ್ನು ಆಡುತ್ತಿದ್ದಾರೆ. ಇಷ್ಟ ಬಂದ ಹಾಗೆ ₹50 ಲಕ್ಷ ಒಂದು ಕಡತಕ್ಕೆ ಎಂದು ಹೇಳುತ್ತೀರಾ? ಯಾರೋ ಹುಚ್ಚರು, ಆರೋಪಿಗಳು ಮಾತನಾಡಿ ಅದನ್ನು ವಾಟ್ಸ್ಆ್ಯಪ್ ಚಾಟ್ ಮಾಡಿರ್ತಾರೆ. ಅದನ್ನು ತೆಗೆದುಕೊಂಡು ಬಂದು ಮಾಧ್ಯಮಕ್ಕೆ ಕೊಟ್ಟು ಇನ್ನೊಬ್ಬರನ್ನು ಮಾನಸಿಕವಾಗಿ ಹಿಂಸಿಸುವ ಹಕ್ಕು ಕೊಟ್ಟಿದ್ದು ಯಾರು’ ಎಂದು ಪ್ರಶ್ನಿಸಿದ್ದಾರೆ.
‘ಈಗಾಗಲೇ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ತನಿಖೆ ಪೂರ್ಣಗೊಳ್ಳುವ ಮುನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಏನೇನೋ ಶೀರ್ಷಿಕೆಗಳನ್ನು ನೀಡಿ ಅಪಪ್ರಚಾರ ಮಾಡಬೇಡಿ, ಮಾಧ್ಯಮಗಳು ಕೂಡ ತೀರ್ಪು ನೀಡಬಾರದು. ತನಿಖಾ ವರದಿ ಬರುವವರೆಗೆ ಕಾಯಬೇಕು’ ಎಂದು ಮನವಿ ಮಾಡಿದ್ದಾರೆ.

