ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಶೇ 50ರಿಂದ ಶೇ 56ಕ್ಕೆ ಹೆಚ್ಚಿಸಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

‘ಹೈಕೋರ್ಟ್‌ ತೀರ್ಪಿನ ವಿರುದ್ಧ ತಕ್ಷಣವೇ ಸುಪ್ರೀಂಕೋರ್ಟ್‌ ಬಾಗಿಲು ತಟ್ಟಬೇಕು. ಈ ವರ್ಗದ ಜನರಿಗೆ ಅನ್ಯಾಯ ಆಗಲು ಸರ್ಕಾರ ಬಿಡಬಾರದು’ ಎಂದು ಸಚಿವ ಸಂಪುಟ ಚರ್ಚೆಯಲ್ಲಿ ತೀರ್ಮಾನಿಸ ಲಾಗಿತ್ತು.ಇದೀಗ, ವಕೀಲ ರಾಜೇಶ್‌ ಜಿ. ಇನಾಮ್‌ದಾರ್‌ ಮೂಲಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿರ್ಧಾರ ಕೈಗೊಂಡಿತ್ತು. ತನ್ನ ತೀರ್ಮಾನಕ್ಕೆ ಕಾನೂನಿನ ರಕ್ಷಣೆ ಒದಗಿಸುವ ಉದ್ದೇಶದಿಂದ,  ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯದ ಅಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ-2022ರ ಕಲಂ 3 ಮತ್ತು 4ಕ್ಕೆ ತಿದ್ದುಪಡಿ ತರಲಾಗಿತ್ತು.

ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪ‍ಂಗಡಗಳ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲಾಗಿತ್ತು. 2023ರ ಜನವರಿಯಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿತ್ತು.

ಸಮಾನತೆಯ ರಕ್ಷಣೆ ಮತ್ತು ಸಮಾನ ಅವಕಾಶದ ಷರತ್ತುಗಳ ಯೋಜನೆಯಡಿ ಮೀಸಲಾತಿ ಒದಗಿಸುವ ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿ ರಾಯಚೂರಿನ ಮಹೇಂದ್ರ ಕುಮಾರ್ ಮಿತ್ರ ಮತ್ತು ಬೆಂಗಳೂರಿನ ಎಚ್‌.ಎಸ್‌.ಸಾಗರ್ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ‘ಸರ್ಕಾರದ ಕ್ರಮದಿಂದಾಗಿ ಒಟ್ಟು ಮೀಸಲಾತಿಯ ಪ್ರಮಾಣವು ಶೇ 50ರ ಮಿತಿಗಿಂತ ದಾಟಿರುವುದು ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

ಕೇಂದ್ರ ಸರ್ಕಾರವು ಈ ವಿಷಯದಲ್ಲಿ ನಿರಂತರವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸರ್ಕಾರ, ‘ರಾಜ್ಯದಿಂದ ಐವರು ಕೇಂದ್ರ ಸಚಿವರು ಹಾಗೂ ಲೋಕಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಒಟ್ಟು 19 ಸಂಸದರು ಇದ್ದರೂ, ಸಂವಿಧಾನ ತಿದ್ದುಪಡಿಗೆ ಈವರೆಗೆ ಮುಂದಾಗಿಲ್ಲ. 2023ರಲ್ಲಿ ಮತ್ತು ತದನಂತರವೂ ಸಂವಿಧಾನಾತ್ಮಕ ರಕ್ಷಣೆ ಪಡೆಯಲು ವಿಫಲವಾದ ಕಾರಣ, ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು’ ಎಂದು ತಿಳಿಸಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹೆಚ್ಚಳ ಮಾಡಲಾಗಿದ್ದ ಶೇ 6ರಷ್ಟು ಮೀಸಲಾತಿಯನ್ನು ಹೈಕೋರ್ಟ್‌ ರದ್ದು ಮಾಡಿರುವುದರಿಂದ ಹಳೇ ಮೀಸಲಾತಿ ‍ಪ್ರಮಾಣದ (ಶೇ 50) ಅನ್ವಯವೇ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಲಾಗುವುದು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಸ್ಪಷ್ಟಪಡಿಸಿತ್ತು.