ಬೆಂಗಳೂರು: ‘ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ತಲುಪದ ರೈತರ ಖಾತೆಯಲ್ಲಿ ಇರುವ ಅಡೆತಡೆ ನಿವಾರಿಸಿ ಹಣ ಪಾವತಿಸಲಾಗುವುದು. ಯಾವೊಬ್ಬ ರೈತನೂ ಆತಂಕ ಪಡುವ ಅಗತ್ಯ ಇಲ್ಲ. ಗೊಂದಲವೂ ಬೇಡ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

‘ಅರ್ಹ ರೈತರಿಗೆ ₹5,000 ಬರ ಪರಿಹಾರ ನೀಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ, ಮೊದಲ ಕಂತಿನಲ್ಲಿ ₹2,500 ಜಮೆ ಮಾಡುವುದಾಗಿ ಹೇಳಿತ್ತು. ಖಾತೆಗೆ ₹1,500, ₹2,000 ಮಾತ್ರ ಜಮೆ ಮಾಡಲಾಗಿದೆ’ ಎಂದು ಯಾದಗಿರಿ ಜಿಲ್ಲೆಯ ಪ್ರಕರಣ ಉಲ್ಲೇಖಿಸಿ ಬಿಜೆಪಿ ನಾಯಕರು ಟೀಕಾಪ್ರಹಾರ ನಡೆಸಿದ್ದರು. ಅದರ ಬೆನ್ನಲ್ಲೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ರೈತರಿಗೆ ತಲುಪಬೇಕಾದ ಮೊತ್ತದಲ್ಲಿ ಹೆಚ್ಚು-ಕಡಿಮೆ ಆಗಿದ್ದರೆ ಅದನ್ನು ಸರಿಪಡಿಸಲಾಗುವುದು’ ಎಂದರು.

‘ಪ್ರತಿಯೊಬ್ಬ ಅರ್ಹ ರೈತನಿಗೂ ನಮ್ಮ ಸರ್ಕಾರ ಎರಡು‌ ಕಂತಿನಲ್ಲಿ ₹5,000 ಬಿಡುಗಡೆ ಮಾಡಲಿದೆ. ಮೊದಲ ಕಂತಿನ ಹಣ ಈಗಾಗಲೇ ಅನೇಕ ರೈತರನ್ನು ತಲುಪಿದೆ.‌ ಪ್ರತಿ ರೈತನಿಗೆ ಹಣ ತಲುಪಿಸಲು ಸೂತ್ರ ರೂಪಿಸಲಾಗಿದೆ’ ಎಂದರು.

‘ಪ್ರತಿ ರೈತನಿಗೂ ಒಂದು ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗಿದೆ. ಒಂದೇ ಬಟನ್ ಮೂಲಕ ಎಲ್ಲರ ಖಾತೆಗೂ ಹಣ ವರ್ಗಾವಣೆ ಆಗುತ್ತಿದೆ. ಆದರೆ, ಕೆಲವು ಬ್ಯಾಂಕ್‌ಗಳಲ್ಲಿ ರೈತರ ಖಾತೆಗಳು ಸರಿಯಾಗಿಲ್ಲ. ಕೆಲವರ ಖಾತೆಗಳು ಸಾಲ ಪಡೆದ ಮೊತ್ತಕ್ಕೆ ಲಿಂಕ್ ಆಗಿವೆ. ಈ ಖಾತೆಗಳ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತವನ್ನು ಶೀಘ್ರ ಪಾವತಿಸಲಾಗುವುದು' ಎಂದರು.

‘ನುಡಿದಂತೆ ಕೊಡುತ್ತೇವೆ’: ‘ರೈತರಿಗೆ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡದೇ ಇದ್ದರೂ ನಮ್ಮ ಸರ್ಕಾರ ನುಡಿದಂತೆ ಎರಡು ಕಂತುಗಳಲ್ಲಿ ₹5 ಸಾವಿರ ಪರಿಹಾರ ಪಾವತಿ ಮಾಡಲಿದೆ. ತಾಂತ್ರಿಕ ಸಮಸ್ಯೆ ಇದ್ದರೆ ಸರಿಪಡಿಸುತ್ತೇವೆ’ ಎಂದೂ ಭರವಸೆ ನೀಡಿದರು.

‘ಲೋಪಕ್ಕೆ ಎಕರೆಯ ಲೆಕ್ಕ: ಪರಿಹಾರ ಪಕ್ಕಾ’

‘ಕೆಲವು ರೈತರಿಗೆ ₹1,500, ಇನ್ನು ಕೆಲವರಿಗೆ ₹2,000 ಪಾವತಿ ಆಗಿರುವುದು ಗಮನಕ್ಕೆ ಬಂದಿದೆ. ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವಾಗ ಅಧಿಕಾರಿಗಳು ಪ್ರತಿ ಹೆಕ್ಟೇರ್‌ ಬದಲು ಎಕರೆಗೆ ಲೆಕ್ಕ ಹಾಕಿದಂತೆ ಕಾಣುತ್ತಿದೆ. ಈ ಲೋಪವನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು.

‘ಬರ ಪರಿಹಾರ ಘೋಷಿಸುವ ಆರಂಭದಲ್ಲಿ ಮುಖ್ಯಮಂತ್ರಿ ಮಾತನಾಡುವಾಗ ಎಕರೆಗೆ ಎಂದಿದ್ದರು. ಆಗ ಸ್ವಲ್ಪ ಗೊಂದಲ ಉಂಟಾಗಿತ್ತು. ಅದನ್ನು ನಂತರ ಸರಿಪಡಿಸಿದ್ದರು. ಆದರೆ, ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ನು ಅಧಿಕಾರಿಗಳ ಹಂತದಲ್ಲಿ ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಮಾರ್ಗಸೂಚಿಗಳ ಪ್ರಕಾರ ಪ್ರತಿ ಹೆಕ್ಟೇರ್‌ಗೆ ಕನಿಷ್ಠ ₹1,500 ನೀಡಬೇಕೆಂಬ ಲೆಕ್ಕಾಚಾರವನ್ನು ಸರಿಯಾಗಿ ಅನುಸರಿಸುವಂತೆ ಸೂಚಿಸಲಾಗಿದೆ’ ಎಂದರು

ಜಿ.ಪರಮೇಶ್ವರ

‘ಮೊದಲ ಹಂತದಲ್ಲಿ ಸುಮಾರು 50 ಲಕ್ಷ ರೈತ ಕುಟುಂಬಗಳಿಗೆ ತಲಾ ₹2500 ನೀಡುವ ಉದ್ದೇಶಕ್ಕೆ ₹1250 ಕೋಟಿ ಬೇಕೆಂದು ಅಂದಾಜು ಮಾಡಲಾಗಿದೆ. ಎರಡನೇ ಹಂತದಲ್ಲಿಯೂ ಅಷ್ಟೇ ಮೊತ್ತವನ್ನು ಒದಗಿಸುವ ಲೆಕ್ಕಾಚಾರವಿದೆ. ರೈತರ ಒಂದು ಕುಟುಂಬಕ್ಕೆ ₹5000 ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಆದರೆ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಹೊಂದಿರಬೇಕು. ಈ ಪ್ರಕ್ರಿಯೆಯಲ್ಲಿ ಕೆಲವರು ಅನರ್ಹರಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

‘ಹಣಕಾಸು ಇಲಾಖೆಯ ಅನುಮತಿ ದೊರೆತ ಕೂಡಲೇ ಪರಿಹಾರ ವಿತರಣೆಯಲ್ಲಿ ಆಗಿರುವ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಲಾಗುವುದು. ಅಗತ್ಯವಿದ್ದರೆ ಈಗಾಗಲೇ ನೀಡಿರುವ ಮೊತ್ತದೊಂದಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ ₹3000 ಅಥವಾ ₹3500 ನೀಡುವ ಬಗ್ಗೆಯೂ ಪರಿಶೀಲಿಸಲಾಗುವುದು. ಯಾದಗಿರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಬರ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಿಸಲಾಗಿದ್ದು ಇದೀಗ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಯಾವ ರೈತನಿಗೂ ಅನ್ಯಾಯವಾಗಲು ಬಿಡುವುದಿಲ್ಲ’ ಎಂದೂ ಪರಮೇಶ್ವರ ಹೇಳಿದರು.