ಸೋಲಾಪುರ: ‘ಕುಡಿಯುವ ನೀರಿನ ಅಭಾವವಿರುವ ಗ್ರಾಮಗಳಲ್ಲಿ 24ರಿಂದ 48 ಗಂಟೆಗಳೊಳಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಆರಂಭಿಸಬೇಕು. ಪ್ರತಿ ವಾಡಿ, ವಸತಿ ಪ್ರದೇಶ ಹಾಗೂ ಗಲ್ಲಿಗಳಿಗೂ ಟ್ಯಾಂಕರ್ ತಲುಪುವಂತೆ ನೋಡಿಕೊಳ್ಳಬೇಕು. ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ದೊಡ್ಡ ಅಥವಾ ಸಣ್ಣ ಟ್ಯಾಂಕರ್ಗಳನ್ನು ಒದಗಿಸಬೇಕು. ಜಾನುವಾರುಗಳಿಗೂ ಅಗತ್ಯ ನೀರು ಮತ್ತು ಮೇವು ಪೂರೈಸಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಯಕುಮಾರ ಗೋರೆ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವೇಢಾ ತಾಲ್ಲೂಕಿನ ರೆಡ್ಡೆ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಬೆನ್ನಿಗೆ ಸರ್ಕಾರ ದೃಢವಾಗಿ ನಿಂತಿದೆ. ಬರದಿಂದ ಉಂಟಾದ ನಷ್ಟಕ್ಕೆ ಸಮಗ್ರ ಪಂಚನಾಮೆ ನಡೆಸಲಾಗಿದ್ದು, ರೈತರಿಗೆ ದೀಪಾವಳಿ ಹಬ್ಬ ಆಚರಿಸಲು ಅನುಕೂಲವಾಗುವಂತೆ ತಲಾ ₹5 ಸಾವಿರ ಮುಂಗಡ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಲಕ್ಷಾಂತರ ರೈತರ ಖಾತೆಗಳಿಗೆ ಹಣ ಜಮೆಯಾಗುತ್ತಿದ್ದು, ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿರುವವರಿಗೂ ಶೀಘ್ರ ನೆರವು ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಯಕುಮಾರ ಗೋರೆ ಹೇಳಿದರು.
ರೈತರು ಹಾಗೂ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕಾಗಿ ಸೋಲಾಪುರದ ಯೋಜನಾ ಭವನದಲ್ಲಿರುವ ಉಸ್ತುವಾರಿ ಸಚಿವರ ಕಚೇರಿಯಿಂದ 24 ಗಂಟೆಗಳ ಸಹಾಯವಾಣಿ ಆರಂಭಿಸಲಾಗುವುದು. ಮ್ಹೈಸಾಳ್ ನೀರಾವರಿ ಹಾಗೂ 24 ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಶಾಸಕ ಸಮಾಧಾನ ಆವತಾಡೆ, ಜಿಲ್ಲಾಧಿಕಾರಿ ಎಸ್. ಕಾರ್ತಿಕೇಯನ್ ಸೇರಿದಂತೆ ಅಧಿಕಾರಿಗಳು ಇದ್ದರು.
261112-26-1566203341

