ಬೆಂಗಳೂರು: ದೀ‍ಪಾವಳಿ ಸಂದರ್ಭದಲ್ಲಿ ನಗರದಲ್ಲಿ 2025ರಲ್ಲಿ ದಾಖಲೆ ಪ್ರಮಾಣದಲ್ಲಿ ಕಡಿಮೆಯಾಗಿದ್ದ ವಾಯು ಮಾಲಿನ್ಯ ಈ ವರ್ಷ ಶೇ 37ರಷ್ಟು ಹೆಚ್ಚಾಗಿದೆ.

ಕೋವಿಡ್‌ ಬಾಧಿಸಿದ್ದ 2020 ಮತ್ತು ಅದರ ಹಿಂದಿನ ವರ್ಷಕ್ಕಿಂತ 2025ರ ದೀಪಾವಳಿ ಸಂದರ್ಭದಲ್ಲಿ ಶೇ 30.34ರಷ್ಟು ವಾಯು ಮಾಲಿನ್ಯ ಕಡಿಮೆಯಾಗಿತ್ತು. 2024ಕ್ಕೆ ಹೋಲಿಸಿದರೆ 2025ರಲ್ಲಿ ವಾಯು ಮಾಲಿನ್ಯ (ವಾಯು ಗುಣಮಟ್ಟ ಇಂಡೆಕ್ಸ್‌– ಎಕ್ಯೂಐ) ಶೇ 44ರಷ್ಟು ಇಳಿಕೆಯಾಗಿತ್ತು. ಆದರೆ, 2026ರಲ್ಲಿ ಮೂರು ದಿನದಲ್ಲಿ ಸರಾಸರಿ 114.33 ಎಕ್ಯೂಐ ದಾಖಲಾಗಿದೆ.

ದೀಪಾವಳಿಯ ಮುನ್ನಾ ದಿನ ನ.7ರಂದು ನಗರದಲ್ಲಿ 53 ಎಕ್ಯೂಐ ದಾಖಲಾಗಿತ್ತು. ಹಬ್ಬದ ಮೊದಲ ದಿನ ನ.8ರಂದು ಈ ಪ್ರಮಾಣ 102ಕ್ಕೆ ಹೆಚ್ಚಾಯಿತು. ನ.9ರಂದು 144 ಎಕ್ಯೂಐ, ನ.10ರಂದು 133 ಎಕ್ಯೂಐ ದಾಖಲಾಗಿದ್ದು, ಗಾಳಿಯ ಮೂಲಕ ಹೊಗೆ ಎಲ್ಲೆಡೆ ಪಸರಿಸಿದೆ.

ಮೆಜೆಸ್ಟಿಕ್‌ನಲ್ಲಿರುವ ರೈಲು ನಿಲ್ದಾಣದ ಸುತ್ತಮುತ್ತ ಪ್ರದೇಶದಲ್ಲಿ ಹಬ್ಬದ ಸಂದರ್ಭದಲ್ಲಿ ಅತಿಹೆಚ್ಚು ವಾಯು ಮಾಲಿನ್ಯ ದಾಖಲಾಗಿದ್ದು, ಎಕ್ಯೂಐ 228ಕ್ಕೇರಿತ್ತು. ಹೊರ ವರ್ತುಲ ರಸ್ತೆಯಲ್ಲಿರುವ ಕಾಡಬೀಸನಹಳ್ಳಿಯಲ್ಲಿ 188 ಎಕ್ಯೂಐ ದಾಖಲಾಗಿದ್ದರೆ, ಕೋರಮಂಗಲ, ರಿಚ್ಮಂಡ್‌ ಟೌನ್‌ನಲ್ಲಿ 186 ಎಕ್ಯೂಐ, ಎಲೆಕ್ಟ್ರಾನಿಕ್‌ ಸಿಟಿ, ನೀಲಾದ್ರಿ ನಗರ, ಸಿಲ್ಕ್‌ ಬೋರ್ಡ್‌ ಸುತ್ತಮುತ್ತ 181 ಎಕ್ಯೂಐ, ವೈಟ್‌ಫೀಲ್ಡ್‌– ಕುಂದಲಹಳ್ಳಿಯಲ್ಲಿ 182 ಎಕ್ಯೂಐ ದಾಖಲಾಗಿದೆ. ಲಾಲ್‌ಬಾಗ್‌ ಪಶ್ಚಿಮ ಗೇಟ್, ಜಯನಗರ ಸುತ್ತಮುತ್ತಲಿನ ಪ್ರದೇಶದಲ್ಲೂ ಅತಿಹೆಚ್ಚು ವಾಯು ಮಾಲಿನ್ಯವಾಗಿದೆ.

ಶಬ್ದ ಮಾಲಿನ್ಯವೂ ಹೆಚ್ಚು: ದೀಪಾವಳಿ ಸಂದರ್ಭದಲ್ಲಿ ಅತಿಯಾದ ಶಬ್ದ ಮಾಲಿನ್ಯವೂ ಉಂಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 62ರಷ್ಟು ಅಧಿಕವಾಗಿದೆ. 2025ರಲ್ಲಿ ಸರಾಸರಿ 74 ಡೆಸಿಬಲ್‌ (ಡಿಬಿ) ಶಬ್ದ ಮಾಲಿನ್ಯ ದಾಖಲಾಗಿದ್ದರೆ, ಈ ವರ್ಷ ಅದು 122 ಡಿಬಿಗೆ ಹೆಚ್ಚಳವಾಗಿದೆ. ಶಬ್ದ ಮಾಲಿನ್ಯದ ಸಾಮಾನ್ಯ ಪ್ರಮಾಣ (ಸ್ಟ್ಯಾಂಡರ್ಡ್‌ ಲಿಮಿಟ್‌) 50 ಡಿಬಿ ಆಗಿದೆ.

ರಾಮಮೂರ್ತಿ ನಗರ, ಕೋರಮಂಗಲ, ಯಲಹಂಕ, ಎಚ್‌ಎಸ್‌ಆರ್‌ ಲೇಔಟ್‌, ಇಂದಿರಾನಗರ, ಜಯನಗರ, ಆರ್‌ವಿಸಿಇ–ಮೈಸೂರು ರಸ್ತೆ, ಬಿಟಿಎಂ ಲೇಔಟ್‌, ದೊಮ್ಮಲೂರು  ಸುತ್ತಮುತ್ತಲ ಪ್ರದೇಶದಲ್ಲಿ ಅತಿಹೆಚ್ಚು ಶಬ್ದಮಾಲಿನ್ಯ ದಾಖಲಾಗಿದೆ.

ಮಾಹಿತಿ ಮುಚ್ಚಿಟ್ಟ ಕೆಎಸ್‌ಪಿಸಿಬಿ

ದೀಪಾವಳಿ ಹಾಗೂ ಅದರ ಹಿಂದಿನ ದಿನಗಳಲ್ಲಿನ ಮಾಹಿತಿ ಹಾಗೂ ದತ್ತಾಂಶವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಚ್ಚಿಟ್ಟಿದೆ. ಮಂಡಳಿಯ ಸದಸ್ಯ ಕಾರ್ಯದರ್ಶಿ ಗೋಕುಲ್‌ ಅವರಿಂದ ಹಿಡಿದು ಮುಖ್ಯ ಪರಿಸರ ಅಧಿಕಾರಿ ಹಿರಿಯ ಪರಿಸರ ಅಧಿಕಾರಿ (ಎಸ್‌ಇಒ) ಪ್ರಾದೇಶಿಕ ಅಧಿಕಾರಿ ವಾಯು– ಶಬ್ದ ಗುಣಮಟ್ಟ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದರೂ ಮಾಹಿತಿ ನೀಡಲು ನಿರಾಕರಿಸಿದರು. ‘ವಾಯು ಅಥವಾ ಶಬ್ದ ಮಾಲಿನ್ಯ ಬಗ್ಗೆ ಯಾವುದೇ ವರದಿಯನ್ನು ತಯಾರಿಸಿಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಇರುವ ಮಾಹಿತಿಯನ್ನೇ ಪಡೆದುಕೊಳ್ಳಬಹುದು’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು. ‘ಮಾಲಿನ್ಯಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ವರದಿ ದತ್ತಾಂಶಗಳು ಸಿದ್ಧವಿದ್ದರೂ ಹಿರಿಯ ಅಧಿಕಾರಿಗಳು ಅದನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ. ಆದ್ದರಿಂದ ಅದನ್ನು ನೀಡಲಾಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜನರಲ್ಲಿ ಜಾಗೃತಿ ಇರಬೇಕು: ರಾಮಲಿಂಗಾರೆಡ್ಡಿ

‘ಬೆಂಗಳೂರು ಹಾಗೂ ರಾಜ್ಯದ ಹಲವು ಭಾಗಗಳಲ್ಲಿ ಈ ಬಾರಿ ವಾಯು ಮಾಲಿನ್ಯ ಹೆಚ್ಚಾಗಿದೆ. ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಯನ್ನು ನಿಗದಿತ ಸಮಯದಲ್ಲಿ ಮಾತ್ರ ಸಿಡಿಸಬೇಕು ಎಂದು ಆದೇಶಿಸಲಾಗಿತ್ತಾದರೂ ಜನರು ಅದನ್ನು ಪಾಲಿಸಿಲ್ಲ. ಪರಿಸರದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಇರಬೇಕು’ ಎಂದು ಅರಣ್ಯ– ಪರಿಸರ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ‘ಬೆಂಗಳೂರಿನಲ್ಲಿ ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಜಡಿ ಮಳೆ ಬಂದಿತ್ತು. ಪಟಾಕಿ ಸಿಡಿಸುವವರ ಸಂಖ್ಯೆಯೂ ಕಡಿಮೆ ಇದ್ದುದರಿಂದ ಮಾಲಿನ್ಯ ಕಡಿಮೆ ಇತ್ತು. ಈ ಬಾರಿ ಮಳೆ ಇಲ್ಲ ಜನರೂ ಅತಿಯಾಗಿ ಪಟಾಕಿ ಸ್ಫೋಟಿಸಿದ್ದಾರೆ. ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದ್ದರೂ ಅದನ್ನು ಜನರು ಪಾಲಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.