ಬೆಂಗಳೂರು: ‘ರಾಜ್ಯದ ಒಂದು ವಿಶ್ವವಿದ್ಯಾಲಯಕ್ಕೆ ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಜಾದ್ ಹೆಸರನ್ನು ನಾಮಕರಣ ಮಾಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಬುಧವಾರ ನಡೆದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜಯಂತಿ ಆಚರಣೆ ಹಾಗೂ ‘ರಾಷ್ಟ್ರೀಯ ಶಿಕ್ಷಣ ದಿನ–2026’ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ಮಾಡುತ್ತೇನೆ’ ಎಂದರು.
‘ಅಲ್ಪಸಂಖ್ಯಾತ ಸಮುದಾಯಗಳ ಪೈಕಿ ಮುಸ್ಲಿಮರ ಶಿಕ್ಷಣ ಪ್ರಮಾಣ ತೀರ ಕಡಿಮೆ ಇದೆ. ಅದನ್ನು ಹೆಚ್ಚಿಸಲು ನಾನು ಸಚಿವನಾಗಿ ಪಣತೊಟ್ಟಿದ್ದೇನೆ. ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಹೊಸ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು’ ಎಂದರು.
ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಮಾತನಾಡಿ, ‘ಆಜಾದ್ ಅವರು ಕೇವಲ ಒಬ್ಬ ನಾಯಕರಲ್ಲ, ಒಬ್ಬ ದೂರದರ್ಶಿಯಾಗಿದ್ದರು. ಅವರು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ಐಐಟಿ, ಯುಜಿಸಿ, ಸಾಹಿತ್ಯ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿಗಳನ್ನು ಸ್ಥಾಪಿಸಿದರು. ಒಂದು ದೇಶ ಉದ್ಧಾರವಾಗಬೇಕಾದರೆ, ಮೊದಲು ಅದರ ಶಿಕ್ಷಣ ಉದ್ಧಾರವಾಗಬೇಕು ಎನ್ನುವುದು ಅವರಿಗೆ ಗೊತ್ತಿತ್ತು’ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಘ್, ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್, ಜೈನ್ ವಿಶ್ವವಿದ್ಯಾಲಯದ ಕುಲಪತಿ ಚೆನ್ನರಾಜ ರಾಯಚಂದ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ, ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯ ನಿವೃತ್ತ ಪ್ರಾಂಶುಪಾಲ ಅಬ್ರಾಹಂ ಇ-ಬೈಜರ್, ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞ, ಬೆಂಗಳೂರಿನ ಸುಮ್ಮನಹಳ್ಳಿಯ ಕುಷ್ಠರೋಗಿಗಳು ಮತ್ತು ಪುನರ್ ವಸತಿ ಕೇಂದ್ರದ ಸಿಸ್ಟರ್ ಮೇರಿ ಮಸ್ಕರೇನ್ಯಾಸ್, ಎಕ್ಸ್ಪರ್ಟೈಸ್ ಗ್ರೂಪ್ ಆಫ್ ಕಂಪನೀಸ್ ಸಿಇಒ ಕಾರ್ನಿರೆ ಸೆಯ್ಯದ್ ಶೇಖಬ್ಬ, ಪತ್ರಕರ್ತ ರಫೀಕ್ ಭಂಡಾರಿ ಅವರನ್ನು ಗೌರವಿಸಲಾಯಿತು.
ತುಮಕೂರಿನ ಶ್ರೀ ಸಿದ್ದಗಂಗಾ ಎಜುಕೇಷನ್ ಸೊಸೈಟಿ, ಭಟ್ಕಳದ ಅಂಜುಮನ್ ಶಿಕ್ಷಣ ಸಂಸ್ಥೆ, ಹಾವೇರಿಯ ಕನಕ ಗುರುಪೀಠ ಶಿಕ್ಷಣದ ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನ್ ಸೊಸೈಟಿ, ದಕ್ಷಿಣ ಕನ್ನಡದ ಸೆಂಟ್ ಅಲೋಶಿಯಸ್ ಕಾಲೇಜಿಗೂ ಪುರಸ್ಕಾರ ನೀಡಲಾಯಿತು.
ಮಾಜಿ ಸಚಿವ ರಹೀಂ ಖಾನ್, ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್, ಶಾಸಕರಾದ ಇಕ್ಬಾಲ್ ಹುಸೇನ್, ಕನೀಜ್ ಫಾತಿಮಾ, ವಿಧಾನ ಪರಿಷತ್ತಿನ ಸದಸ್ಯರಾದ ಅಬ್ದುಲ್ ಜಬ್ಬಾರ್,ಬಿಲ್ಕಿಸ್ ಬಾನು, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಹುಸೈನಿ, ಕೆಎಂಡಿಸಿ ಅಧ್ಯಕ್ಷ ಬಿ.ಕೆ. ಅಲ್ತಾಫ್ ಖಾನ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹ್ಮದ್ ಮುಂತಾದವರು ಇದ್ದರು.
ರಾಜ್ಯದಲ್ಲಿರುವ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಪಠ್ಯಕ್ರಮ ಜಾರಿಗೊಳಿಸಲಾಗುವುದು
ಯು.ಟಿ. ಖಾದರ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ
261112-4-341095539

