ಬೆಂಗಳೂರು: ನಮ್ಮ ಮೆಟ್ರೊ ಯೋಜನೆಗಳ ಹೂಡಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆ ಸಮಾನವಾದುದು ಎಂದಿದ್ದರೂ ಶೇ 84 ರಷ್ಟನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಶೇ 16ರಷ್ಟನ್ನು ಮಾತ್ರ ಕೇಂದ್ರ ಸರ್ಕಾರ ಭರಿಸುತ್ತಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರವಾದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಚಲ್ಲಘಟ್ಟದಿಂದ ವೈಟ್ಫೀಲ್ಡ್ ಸಂಪರ್ಕಿಸುವ ನೇರಳೆ ಮಾರ್ಗ, ಮಾದಾವರದಿಂದ ರೇಷ್ಮೆ ಸಂಸ್ಥೆ (ಸಿಲ್ಕ್ ಇನ್ಸ್ಟಿಟ್ಯೂಟ್) ಸಂಪರ್ಕಿಸುವ ಹಸಿರು ಮಾರ್ಗ, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗಗಳಲ್ಲಿ ಮೆಟ್ರೊ ಸಂಚರಿಸುತ್ತಿದೆ. ಕಾಳೇನ ಅಗ್ರಹಾರ–ನಾಗವಾರ ಸಂಪರ್ಕದ ಗುಲಾಬಿ ಮಾರ್ಗದಲ್ಲಿ ಪಾರ್ಶವಾಗಿ ನ.13ರಂದು ಸಂಚಾರ ಆರಂಭಗೊಳ್ಳುತ್ತಿದೆ. ಗುಲಾಬಿ ಮಾರ್ಗದ ಉಳಿದ ಭಾಗ, ಕೇಂದ್ರ ರೇಷ್ಮೆ ಮಂಡಳಿಯಿಂದ (ಸೆಂಟ್ರಲ್ ಸಿಲ್ಕ್ ಬೋರ್ಡ್) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗಗಳ ಕಾಮಗಾರಿ ನಡೆಯುತ್ತಿದ್ದು, ಒಂದೂವರೆ ವರ್ಷದಲ್ಲಿ ಸಂಚಾರ ಆರಂಭವಾಗಲಿದೆ.

ಜೆ.ಪಿ.ನಗರ 4ನೇ ಹಂತ–ಕೆಂಪಾಪುರ ಹಾಗೂ ಹೊಸಹಳ್ಳಿ–ಕಡಬಗೆರೆ ಸಂಪರ್ಕಿಸುವ ಕಿತ್ತಳೆ ಮಾರ್ಗಕ್ಕೆ ಮುಂದಿನ ವರ್ಷ ಶಂಕುಸ್ಥಾಪನೆ ನೆರೆವೇರಲಿದೆ. ಸರ್ಜಾಪುರ–ಹೆಬ್ಬಾಳ ಸಂಪರ್ಕದ ಕೆಂಪು ಮಾರ್ಗವು ಕೇಂದ್ರ ಸರ್ಕಾರದ ಅನುಮೋದನೆಗೆ ಕಾಯುತ್ತಿದೆ. ಈ ಎಲ್ಲ ಮಾರ್ಗಗಳ ಖರ್ಚುವೆಚ್ಚದಲ್ಲಿ ಸಿಂಹಪಾಲು ರಾಜ್ಯ ಸರ್ಕಾರದ್ದೇ ಆಗಿದೆ. ರಾಜ್ಯ ಸರ್ಕಾರಕ್ಕೆ ಐದು ರೂಪಾಯಿ ವೆಚ್ಚವಾದರೆ, ಕೇಂದ್ರ ಸರ್ಕಾರ ಒಂದು ರೂಪಾಯಿ ವೆಚ್ಚ ಭರಿಸುತ್ತಿದೆ ಎಂಬುದು ಅಂಕಿ ಅಂಶಗಳ ವಿವರಣೆಯಾಗಿದೆ.


