ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಸುನಾಮಿ ಎಬ್ಬಿಸಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಕೇವಲ ಒಂದು ವಾರದಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸುತ್ತಾ ಮುನ್ನುಗ್ಗುತ್ತಿದೆ. ಮೊದಲ 7 ದಿನಗಳಲ್ಲಿ ಭಾರತದಲ್ಲಿಯೇ ಈ ಚಿತ್ರ ಬರೋಬ್ಬರಿ 511.10 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ 500 ಕೋಟಿ ಕ್ಲಬ್ ಅನ್ನು ಸಲೀಸಾಗಿ ದಾಟಿದೆ. ಇದೇ ಅವಧಿಯಲ್ಲಿ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 611.05 ಕೋಟಿಗೆ ತಲುಪಿದ್ದು, ಬಾಕ್ಸ್‌ಆಫೀಸ್ ಪಂಡಿತರ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗಾಗಿಸಿದೆ.

ದೀಪಾವಳಿ ಹಬ್ಬದ ರಜೆಗಳು ಮುಗಿದರೂ ಸಹ ಚಿತ್ರಮಂದಿರಗಳಲ್ಲಿ ಸಿನಿಮಾಗೆ ಹಬ್ಬದ ವಾತಾವರಣ ಇನ್ನೂ ಮಾಸಿಲ್ಲ ಎಂಬುದಕ್ಕೆ 7ನೇ ದಿನದ ಕಲೆಕ್ಷನ್‌ ಸಾಕ್ಷಿ. ಬುಧವಾರದಂದು (ನವೆಂಬರ್ 11) ದೇಶಾದ್ಯಂತ ಒಟ್ಟು 24,239 ಪ್ರದರ್ಶನಗಳಿಂದ ಸಿನಿಮಾ 70.65 ಕೋಟಿ ನೆಟ್ ಗಳಿಕೆ ಮಾಡಿದೆ. ಇದರಲ್ಲಿ ಹಿಂದಿ ಭಾಷೆಯಿಂದಲೇ 58.00 ಕೋಟಿ ರೂಪಾಯಿ ಹರಿದುಬಂದಿದ್ದರೆ, ಕನ್ನಡದಿಂದ 4.50 ಕೋಟಿ ರೂಪಾಯಿ, ಮಲಯಾಳಂ ಮತ್ತು ತೆಲುಗಿನಿಂದ ತಲಾ 2.75 ಕೋಟಿ ರೂಪಾಯಿ ಹಾಗೂ ತಮಿಳಿನಿಂದ 2.65 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತನ್ನ ಪಾರುಪತ್ಯ ಮುಂದುವರಿಸಿದೆ.

ಕೇವಲ ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ‘ರಾಮಾಯಣ’ ಸಿನಿಮಾದ ಅಬ್ಬರ ಜೋರಾಗಿದೆ. ಏಳನೇ ದಿನ ವಿದೇಶದಲ್ಲಿ 25.00 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಚಿತ್ರ, ಮೊದಲ ವಾರದ ಅಂತ್ಯಕ್ಕೆ ಒಟ್ಟು 323.50 ಕೋಟಿ ರೂಪಾಯಿ ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ಮಾಡಿದೆ. ದೇಶೀಯ ಮತ್ತು ವಿದೇಶಿ ಗಳಿಕೆಗಳೆರಡನ್ನೂ ಸೇರಿಸಿದರೆ ಸಿನಿಮಾದ ಒಟ್ಟು ವಿಶ್ವಾದ್ಯಂತ ಗ್ರಾಸ್ ಕಲೆಕ್ಷನ್ 934.55 ಕೋಟಿ ರೂಪಾಯಿಗೆ ಬಂದು ನಿಂತಿದೆ. ಮೊದಲ ಏಳು ದಿನಗಳಲ್ಲಿ ಬರೋಬ್ಬರಿ 1.97 ಕೋಟಿಗೂ ಅಧಿಕ ಪ್ರೇಕ್ಷಕರು ಟಿಕೆಟ್ ಖರೀದಿಸಿ ಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ‘ರಾಮಾಯಣ’ ಸಿನಿಮಾ, ಆರು ದಿನದಲ್ಲಿ ಗಳಿಸಿದ್ದೆಷ್ಟು?

ಒಟ್ಟಾರೆ ವಿಶ್ವಾದ್ಯಂತ ಈಗಾಗಲೇ 934.55 ಕೋಟಿ ಗಳಿಸಿರುವ ‘ರಾಮಾಯಣ’ ಸಿನಿಮಾ, ಸಾವಿರ ಕೋಟಿ ರೂಪಾಯಿ ಗಡಿ ತಲುಪಲು ಇನ್ನು ಕೇವಲ 65.45 ಕೋಟಿ ಮಾತ್ರ ಬಾಕಿ ಉಳಿಸಿಕೊಂಡಿದೆ. ಸದ್ಯ ಚಿತ್ರಮಂದಿರಗಳಲ್ಲಿ ಕಂಡುಬರುತ್ತಿರುವ ಪ್ರೇಕ್ಷಕರ ಕ್ರೇಜ್ ಮತ್ತು ಟಿಕೆಟ್ ಬುಕಿಂಗ್ ವೇಗವನ್ನು ಗಮನಿಸಿದರೆ, ಬಿಡುಗಡೆಯಾದ ಕೇವಲ 8ನೇ ದಿನಕ್ಕೆ ಸಿನಿಮಾ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವುದು ಫಿಕ್ಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.