ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಚಟುವಟಿಕೆಯ ಟಾಸ್ಕ್ ನಡುವೆ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದ್ದು, ಮಂಜು ಮತ್ತು ತಾಂಡವ್ ನಡುವೆ ಘನಘೋರ ಜಗಳ ನಡೆದಿದೆ. ಸದನದ ಮಾದರಿಯಲ್ಲಿ ನಡೆದ ಚರ್ಚೆಯ ವೇಳೆ ಇಬ್ಬರೂ ಏಕವಚನದಲ್ಲಿ ಕೂಗಾಡಿಕೊಂಡಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವಾಗ್ವಾದದ ನಡುವೆ ತೀವ್ರ ಆಕ್ರೋಶಗೊಂಡ ಮಂಜು, ತಾಂಡವ್ ವಿರುದ್ಧ ಬಗೆದುಬಿಡ್ತೀನಿ ಎಂದು ಎಚ್ಚರಿಕೆ ನೀಡುವ ಮೂಲಕ ಮನೆಯ ವಾತಾವರಣವನ್ನು ಮತ್ತಷ್ಟು ಬಿಸಿ ಮಾಡಿದ್ದಾರೆ.
ಅಧಿವೇಶನದ ಮಾದರಿಯಲ್ಲಿ ನಡೆದ ಈ ಚರ್ಚೆಯಲ್ಲಿ ಎರಡೂ ತಂಡಗಳ ಸದಸ್ಯರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು. ತಾಂಡವ್ ತಮ್ಮ ಆಸನದಿಂದ ಎದ್ದು ನಿಂತು ವಿರೋಧಿ ತಂಡದತ್ತ ಕೈ ತೋರಿಸುತ್ತಾ ಜೋರಾಗಿ ಕೂಗಾಡಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಪೋಡಿಯಂ ಬಳಿ ನಿಂತಿದ್ದ ಮಂಜು ಕೂಡ ಅಷ್ಟೇ ಅಬ್ಬರದಿಂದ ತಿರುಗೇಟು ನೀಡಿದರು. ಇಬ್ಬರೂ ಪರಸ್ಪರ ಹೋಗಲೇ ಬಾರಲೇ ಎಂದು ಏಕವಚನ ಪ್ರಯೋಗಿಸುತ್ತಾ, ನಾಟಕ ಆಡಬೇಡ ಎಂದು ಕಿರುಚಾಡಿದ್ದಾರೆ.
ಟಾಸ್ಕ್ ವೇಳೆ ಗಾರ್ಡನ್ ಏರಿಯಾದಲ್ಲಿ ನಡೆದಿದ್ದ ದೈಹಿಕ ತಿಕ್ಕಾಟದ ವಿಚಾರವೇ ಈ ದೊಡ್ಡ ಜಗಳಕ್ಕೆ ಮೂಲ ಕಾರಣವಾಗಿದೆ. ಆಟದ ಸಂದರ್ಭದಲ್ಲಿ ಚಾಕು ತಂದು ಹಲ್ಲು ಕಿತ್ತು ಹಾಕಬೇಕು ಎಂಬ ರೀತಿಯಲ್ಲಿ ಮಾತನಾಡಿದ್ದ ವಿಚಾರವನ್ನು ಮುಂದಿಟ್ಟುಕೊಂಡು ಸದನದಲ್ಲಿ ಭಾರಿ ಗದ್ದಲ ಎಬ್ಬಿಸಲಾಯಿತು. ಇದರಿಂದ ಕೆರಳಿದ ಗಾನವಿಎದ್ದು ಹೋಗಿ ಅಡುಗೆ ಮನೆಯಲ್ಲಿದ್ದ ಎರಡು ಚಾಕುಗಳನ್ನು ತಂದು ಟೇಬಲ್ ಮೇಲೆ ಇಟ್ಟು, ಧಮ್ ಇದ್ದರೆ ಬಂದು ಹಲ್ಲು ಕಿತ್ತು ಹಾಕಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಚಾಕುಗಳನ್ನು ಟೇಬಲ್ ಮೇಲೆ ಇಡುತ್ತಿದ್ದಂತೆಯೇ ಮನೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಚಾಕುಗಳನ್ನು ತೆಗೆದುಕೊಂಡು ಹೋಗುವಂತೆ ಇತರ ಸ್ಪರ್ಧಿಗಳು ಕೂಗಾಡಿದರೆ, ತಾಂಡವ್ ಸಭಾಧ್ಯಕ್ಷರ ಮಧ್ಯಪ್ರವೇಶಕ್ಕೆ ಒತ್ತಾಯಿಸಿದರು. ಒಟ್ಟಾರೆಯಾಗಿ, ಟಾಸ್ಕ್ ನೆಪದಲ್ಲಿ ಸ್ಪರ್ಧಿಗಳ ನಡುವಿನ ವೈಯಕ್ತಿಕ ದ್ವೇಷ ಮತ್ತು ಕೋಪ ಸ್ಫೋಟಗೊಂಡಿದ್ದು, ಇಂದಿನ ಸಂಚಿಕೆಯಲ್ಲಿ ಈ ಜಗಳ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

