ಮೈಸೂರು: ‘ಅರಮನೆ ಆಸ್ತಿ ವಿಚಾರವು ಸದ್ಯ ನ್ಯಾಯಾಲಯದಲ್ಲಿ ಇದ್ದು, ಎಲ್ಲವೂ ಕಾನೂನು ಪ್ರಕಾರ ತೀರ್ಮಾನವಾಗಲಿದೆ. ಈ ಬಗ್ಗೆ ಸದ್ಯಕ್ಕೆ ಚರ್ಚೆ ಅಪ್ರಸ್ತುತ’ ಎಂದು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

‘ರಾಜಕೀಯ ನಾಯಕರು ಪರಸ್ಪರ ಆಸ್ತಿ ಹಾಗೂ ವೈಯಕ್ತಿಕ ವಿಚಾರ ಮುಂದಿಟ್ಟುಕೊಂಡು ಆರೋಪ-ಪ್ರತ್ಯಾರೋಪ ಮಾಡುವುದು ಸರಿಯಲ್ಲ. ಮೈಸೂರು ಅರಮನೆ ಕಾಯ್ದೆ ಹಾಗೂ ಬೆಂಗಳೂರು ಅರಮನೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ. ಈ ವಿಚಾರದಲ್ಲಿ ಸಾರ್ವಜನಿಕ ಚರ್ಚೆಗಿಂತ ನ್ಯಾಯಾಲಯದ ತೀರ್ಪಿಗೆ ಕಾಯುವುದು ಸೂಕ್ತ’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ದಸರಾ ಯಶಸ್ಸಿಗೆ ಸಲಹೆ: ‘ನಾಡಹಬ್ಬ ದಸರಾ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಇದು ಮೈಸೂರಿನ ಹೆಮ್ಮೆಯ ಉತ್ಸವ. ಈ ಬಾರಿಯ ದಸರಾದ ಕೆಲ ಕಾರ್ಯಕ್ರಮಗಳಲ್ಲಿ ಲೋಪಗಳು ಕಂಡುಬಂದಿವೆ. ಮುಂದಿನ ವರ್ಷ ಇಂತಹ ಸಮಸ್ಯೆಗಳು ಮರುಕಳಿಸದಂತೆ ಮುಂಚಿತವಾಗಿಯೇ ಚರ್ಚಿಸಿ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.