ಬೆಂಗಳೂರು: ‘ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಪರ್ಯಾಯ ಮಾರ್ಗಗಳನ್ನು ಕಲ್ಪಿಸಲೇಬೇಕು. ರಸ್ತೆಯನ್ನು ಮೇಲ್ಭಾಗದಲ್ಲಿ ನಿರ್ಮಿಸಬೇಕು ಅಥವಾ ಸುರಂಗ ಮಾರ್ಗ ಮಾಡಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಮೇಖ್ರಿ ವೃತ್ತದಿಂದ ಹೆಬ್ಬಾಳವರೆಗಿನ ಎಲಿವೇಟೆಡ್‌ ರಸ್ತೆ ನಿರ್ಮಾಣದ ಸ್ಥಳವನ್ನು ಸೋಮವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಟ್ಟಡಗಳನ್ನು ತೆರವುಗೊಳಿ‌ಸಿ ರಸ್ತೆ ವಿಸ್ತರಿಸಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು. 

‘ನಾವು ಸುರಂಗ ರಸ್ತೆ ನಿರ್ಮಿಸಿದರೂ ಪ್ರತಿಪಕ್ಷಗಳಿಗೆ ಆಕ್ಷೇಪ, ಎಲಿವೇಟೆಡ್ ಕಾರಿಡಾರ್ ನಿರ್ಮಿಸಿದರೂ ಆಕ್ಷೇಪ. ಅವರು ಯಾವಾಗಲೂ ನಕಾರಾತ್ಮಕವಾಗಿಯೇ ಯೋಚಿಸುತ್ತಾರೆ’ ಎಂದು ದೂರಿದರು.

‘ಕೆಲವು ಪ್ರದೇಶಗಳಲ್ಲಿ ರಸ್ತೆ ವಿಸ್ತರಿಸಲು ರಕ್ಷಣಾ ಇಲಾಖೆಯ ಜಾಗ ಕೇಳಲಾಗಿದೆ. ಮೇಖ್ರಿ ವೃತ್ತದ ಬಳಿಯ ಮೂಲೆಯಲ್ಲಿರುವ ಜಾಗವನ್ನು ನೀಡುವಂತೆ ರಕ್ಷಣಾ ಸಚಿವರ ಬಳಿ ಮನವಿ ಮಾಡಿದ್ದೇನೆ. ಆ ಜಾಗ ದೊರೆತರೆ ಅಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಬಹುದು. ಒಂದು ವೃತ್ತದ ಸುತ್ತ ಮತ್ತೊಂದು ವೃತ್ತದ ಮಾದರಿಯಲ್ಲಿ ರೋಟರಿ ಸರ್ಕಲ್ ಹಾಗೂ ರಿಂಗ್ ವ್ಯವಸ್ಥೆ ರೂಪಿಸಲಾಗುವುದು. ಎಡಕ್ಕೆ ಹೋಗುವವರು ಎಡಕ್ಕೆ, ಬಲಕ್ಕೆ ಹೋಗುವವರು ಬಲಕ್ಕೆ ಸಾಗುವಂತೆ ವ್ಯವಸ್ಥೆ ಮಾಡಲಾಗುವುದು. ಮೇಲ್ಭಾಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ ಅಗತ್ಯವಿರುವ ಕಡೆ ಸುರಂಗ ಮಾರ್ಗ‌ ಬಳಸಿಕೊಳ್ಳಲಾಗುವುದು’ ಎಂದು ವಿವರಿಸಿದರು.

‘ಕಾಮಗಾರಿ ವೇಳೆ ಯಾವುದೇ ರೀತಿಯ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಿಲ್ಲ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಲವು ದೊಡ್ಡ ವಾಹನಗಳು ಹಾಗೂ ಸರಕು ಸಾಗಣೆ ವಾಹನಗಳನ್ನು ಮಾತ್ರ ನಿರ್ದಿಷ್ಟ ಸಮಯದಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಸುಮಾರು ₹ 9 ಕೋಟಿ ವೆಚ್ಚವಾಗಲಿದೆ. ಸುತ್ತಮುತ್ತಲಿನ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ಬಿಡಿಎ ಕೈಗೆತ್ತಿಕೊಳ್ಳಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂದರು.

‘ಇತ್ತೀಚೆಗೆ ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ಸುರಂಗ ಮಾರ್ಗದ ಯೋಜನೆಗೆ ಸಂಬಂಧಿಸಿದ ಸ್ಥಳ ಪರಿಶೀಲಿಸಿದ್ದೇನೆ. ಲಾಲ್‌ಬಾಗ್ ಬಳಿ ಸುರಂಗ ಮಾರ್ಗ ಹಾದುಹೋಗುವ ಪ್ರದೇಶದಲ್ಲಿ ದೊಡ್ಡ ಹಳ್ಳವಿದ್ದು, ಬಂಡೆ ಇರುವ ಸ್ಥಳಕ್ಕೂ ಸುರಂಗ ಹೊರಬರುವ ಸ್ಥಳಕ್ಕೂ ವ್ಯತ್ಯಾಸವಿದೆ. ಹೀಗಾಗಿ, ಯಾವುದೇ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಈಗಾಗಲೇ ನಿರ್ಮಾಣವಾಗಿರುವ ಎಲಿವೇಟೆಡ್ ಕಾರಿಡಾರ್‌ಗೆ ಹೊಸ ಯೋಜನೆಯನ್ನು ಜೋಡಿಸಲಾಗುತ್ತದೆಯೇ ಅಥವಾ ಪ್ರತ್ಯೇಕವಾಗಿ ನಿರ್ಮಿಸಲಾಗುತ್ತದೆಯೇ’ ಎಂಬ ಪ್ರಶ್ನೆಗೆ, ‘ಇದು ಪ್ರತ್ಯೇಕ ಯೋಜನೆ. ಎರಡೂ ಯೋಜನೆಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ. ಸುರಂಗ ಮಾರ್ಗದಿಂದ ಹೊರಬಂದು ಎಲಿವೇಟೆಡ್ ರಸ್ತೆಯ ಮೂಲಕ ಮುಂದುವರಿಯುವ ವ್ಯವಸ್ಥೆ ಇರಲಿದೆ’  ಎಂದರು.

‘ಹೆಬ್ಬಾಳದ ಭಾಗದಲ್ಲಿ ಉಂಟಾಗುವ ಸಂಚಾರ ದಟ್ಟಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಸಣ್ಣ ಸುರಂಗ ಮಾರ್ಗದ ಯೋಜನೆ ರೂಪಿಸಲಾಗುತ್ತಿದೆ. ಒಂದು ಪ್ರದೇಶದಲ್ಲಿ ಸಂಚಾರ ಸುಗಮಗೊಳಿಸಿದ ಬಳಿಕ ಮುಂದಿನ ಭಾಗದಲ್ಲಿ ಮತ್ತೆ ವಾಹನ ದಟ್ಟಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದರು.

ಸಚಿವ ಯು.ಟಿ. ಖಾದರ್‌, ಬಿಡಿಎ ಅಧ್ಯಕ್ಷ ಎನ್.‌ಎ. ಹ್ಯಾರಿಸ್‌, ಆಯುಕ್ತ ಪಿ. ಮಣಿವಣ್ಣನ್‌ ಮತ್ತಿತರರು ಇದ್ದರು.