ಹುಬ್ಬಳ್ಳಿ: ‘ಹಾಲು, ಬಸ್ ಪ್ರಯಾಣ ದರ ಹೆಚ್ಚಿಸಿದ್ದನ್ನು ಮರೆಮಾಚಲು ಪೆಟ್ರೋಲ್ನಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ನವರು ಅಪಪ್ರಚಾರ ನಡೆಸಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
‘ಕರ್ನಾಟಕದ 56 ಸೇರಿ ದೇಶದಲ್ಲಿ 893 ಪೆಟ್ರೋಲ್ ಮಾದರಿಗಳನ್ನು ಅಕ್ಟೋಬರ್ನಲ್ಲಿ ಪರೀಕ್ಷಿಸಲಾಗಿದ್ದು, ಅವುಗಳಲ್ಲಿ ಶೇ 19 ರಿಂದ ಶೇ 21ರಷ್ಟು ಮಾತ್ರ ಎಥೆನಾಲ್ ಮಿಶ್ರಣವಿದೆ ಎಂದು ತೈಲ ಕಂಪನಿಗಳು ವರದಿ ನೀಡಿವೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು
‘ಪೆಟ್ರೋಲ್ನಲ್ಲಿ ಶೇ 26ರಿಂದ ಶೇ 31ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ನವರ ಆರೋಪದಲ್ಲಿ ಹುರುಳಿಲ್ಲ. ತೆರಿಗೆ ಹೊರತುಪಡಿಸಿ ಶುದ್ಧ ಪೆಟ್ರೋಲ್ ದರ ₹53 ಇದ್ದರೆ, ಎಥೆನಾಲ್ ದರ ₹55 ಇದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸಿದರೆ, ತೈಲ ಕಂಪನಿಗಳಿಗೆ ಹೆಚ್ಚು ನಷ್ಟವಾಗುತ್ತದೆ’ ಎಂದರು.
‘ಆತ್ಮನಿರ್ಭರ ಭಾರತ ಮತ್ತು ರೈತರ ಅನುಕೂಲಕ್ಕೆ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಇದನ್ನು ಆಕ್ಷೇಪಿಸುವವರು ರೈತ ವಿರೋಧಿಗಳು. ನಿಯಮ ಮೀರಿ ರಾಜ್ಯದಲ್ಲಿ ಎಥೆನಾಲ್ ಮಿಶ್ರಣ ಮಾಡಿದ್ದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ’ ಎಂದರು.
‘ಸರ್ಕಾರದ ಅಧಿಕೃತ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಮಾತ್ರ ಪೆಟ್ರೋಲ್ ಪರೀಕ್ಷಿಸಬೇಕು. ಆದರೆ, ರಾಜ್ಯದಲ್ಲಿ ಶ್ರೀರಾಮ ರಿಸರ್ಚ್ ಇನ್ಸ್ಟಿಟ್ಯುೂಟ್ ಪರೀಕ್ಷೆ ನಡೆಸಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ರಾಷ್ಟ್ರೀಯ ಪರೀಕ್ಷಾ ಮತ್ತು ಮಾಪನ ಪ್ರಯೋಗಾಲಯಗಳ ಮಾನ್ಯತಾ ಮಂಡಳಿಯ (ಎನ್ಎಬಿಎಲ್) ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ಇಂಧನ ಪರೀಕ್ಷೆ ಮಾಡುವ ಸಾಮರ್ಥ್ಯ ಇರುವುದಿಲ್ಲ’ ಎಂದು ಹೇಳಿದರು.

