ಬೆಂಗಳೂರು: ‘ಅಧಿಕ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್‌ ಮಾರಾಟಕ್ಕೆ ಸಂಬಂಧಿಸಿದಂತೆ ತೈಲ ಮಾರಾಟ ಕಂಪನಿಗಳ ವರದಿಯನ್ನು ಒಪ್ಪುವುದಿಲ್ಲ. ನಮ್ಮ ವರದಿ ನೂರಕ್ಕೆ ನೂರು ಸತ್ಯ. ಬೇಕಿದ್ದರೆ ತೈಲ ಕಂಪನಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲೇ ಸ್ವತಂತ್ರ ಸಂಸ್ಥೆಯಿಂದ ಜಂಟಿ ಪರೀಕ್ಷೆ ನಡೆಸಲಿ’ ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಸವಾಲು ಹಾಕಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು, ‘ನಮ್ಮ ಸರ್ಕಾರ ನಡೆಸಿದ ಪೆಟ್ರೋಲ್ ಮಾದರಿಗಳ ಪರೀಕ್ಷಾ ವರದಿಯು ಮಿತಿಮೀರಿದ ಎಥೆನಾಲ್ ಇರುವುದನ್ನು ದೃಢಪಡಿಸಿದೆ. ನಮ್ಮ ವರದಿಗಳ ಮೇಲೆ ನಿಮಗೆ ವಿಶ್ವಾಸ ಇಲ್ಲ ಎಂದಾದರೆ ಜನರಿಗೆ ಸತ್ಯ ತಿಳಿಸಲು ಮೂರನೇ ಸಂಸ್ಥೆಯಿಂದ ಮತ್ತೊಮ್ಮೆ ಮಾದರಿ ಸಂಗ್ರಹಿಸಿ ಪರೀಕ್ಷೆಯನ್ನೂ ನಡೆಸಿ’ ಎಂದು ಸವಾಲು ಒಡ್ಡಿದರು.

‘ಇ 20 ಇಂಧನ ಪರೀಕ್ಷಾ ಫಲಿತಾಂಶಗಳ ಕುರಿತಂತೆ ನಮ್ಮ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣವನ್ನು ಕಂಡು ಹಿಡಿಯುವುದು ರಾಕೆಟ್‌ ಸೈನ್ಸ್‌ ಏನಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿದ್ದೇ ಸತ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆಯವರು ಸತ್ಯ ಹೇಳಿದರೆ, ಅವರ ವಿರುದ್ಧ ಒತ್ತಡ ಹೇರುತ್ತಾರೆ’ ಎಂದು ರಿಜ್ವಾನ್‌ ಕುಟುಕಿದರು.

‘ಐಒಸಿಎಲ್‌, ಬಿಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ ಕಂಪನಿಗಳು ತಾಂತ್ರಿಕ ಅಂಶಗಳ ಬಗ್ಗೆ ಸುದೀರ್ಘ ವಿವರಣೆಗಳನ್ನು ನೀಡಿವೆಯೇ ಹೊರತು, ನಮ್ಮ ಮುಖ್ಯ ಪ್ರಶ್ನೆಗೆ ಉತ್ತರ ನೀಡಿಲ್ಲ’ ಎಂದು ಹೇಳಿದ ಅವರು, ‘ರಾಜ್ಯದಲ್ಲಿ ಇ20 ಪೆಟ್ರೋಲ್‌ ಹೆಸರಿನಲ್ಲಿ ಇ 30 ಮತ್ತು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಎಥೆನಾಲ್‌ ಮಿಶ್ರಿತ ಪೆಟ್ರೋಲ್ ಅನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ’ ಎಂದು ಅವರು ಪುನರುಚ್ಚರಿಸಿದರು.

ಸುಳ್ಳು ಹೇಳುವ ತೈಲ ಕಂಪನಿಗಳು: ‘ಪೆಟ್ರೋಲ್‌ ಮಾದರಿ ಸಂಗ್ರಹಣೆ ಕಾನೂನುಬದ್ಧವಾಗಿ ನಡೆದಿಲ್ಲ ಎಂಬ ತೈಲ ಮಾರುಕಟ್ಟೆ ಕಂಪನಿಗಳ ವಾದ ಸಂಪೂರ್ಣ ಸುಳ್ಳು. ಪ್ರತಿಯೊಂದು ಮಾದರಿಯನ್ನೂ ಮೋಟಾರ್ ಸ್ಪಿರಿಟ್‌ ಅಂಡ್‌ ಹೈ ಸ್ಪೀಡ್‌ ಆರ್ಡರ್‌ 2005ರ ಕಲಂ 7ರ ಅಡಿಯಲ್ಲಿ ಸರ್ಕಾರದ ಅಧಿಕಾರಿಗಳೇ ಸಂಗ್ರಹಿಸಿದ್ದಾರೆ. ಪ್ರತಿಯೊಂದು ಮಾದರಿಯ ಲೇಬಲ್‌ಗೆ ಅಧಿಕೃತ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಡೀಲರ್‌ ಅಥವಾ ಅವರ ಪ್ರತಿನಿಧಿಗಳು ಜಂಟಿಯಾಗಿ ಸಹಿ ಮಾಡಿದ್ದಾರೆ’ ಎಂದು ಹೇಳಿದರು.

‘ಮಾದರಿ ಸಂಗ್ರಹಿಸುವ ಸಮಯದಲ್ಲಿಯೇ ಇಂಧನದ ಸಾಂದ್ರತೆಯನ್ನು ದಾಖಲಿಸುವುದರೊಂದಿಗೆ ನಿಗದಿತ ನಮೂನೆಯನ್ನು ಸ್ಥಳದಲ್ಲಿಯೇ ಭರ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

ಪ್ರಮಾಣ ನಮೂದಿಸಿದಿರುವುದಕ್ಕೆ ಸಂಶಯ: ‘ಆರಂಭದಲ್ಲಿ ಸಂಗ್ರಹಿಸಲಾದ 63 ಮಾದರಿಗಳನ್ನು ಮೊದಲು ಐಒಸಿಎಲ್‌, ಬಿಪಿಎಸಿಎಲ್‌, ಎಚ್‌ಪಿಸಿಎಲ್‌ ಕಂಪನಿಗಳ ಸ್ವಂತ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ನೀಡಲಾಗಿತ್ತು. ಆದರೆ ಅವುಗಳ ಯಾವುದೇ ಪರೀಕ್ಷಾ ವರದಿಯಲ್ಲಿ ಎಥೆನಾಲ್‌ನ ಪ್ರಮಾಣವನ್ನು ನಮೂದಿಸಿರಲಿಲ್ಲ’ ಎಂದು ರಿಜ್ವಾನ್‌ ದೂರಿದರು.

‘ತೈಲ ಮಾರುಕಟ್ಟೆ ಕಂಪನಿಗಳೇ ಉಲ್ಲೇಖಿಸಿರುವ ಐಎಸ್‌ 17021:2018 ಮಾನದಂಡದಲ್ಲಿ ಎಥೆನಾಲ್‌ ಅಂಶವನ್ನು ಪರೀಕ್ಷಿಸುವ ವಿಧಾನವನ್ನು ಸ್ಪಷ್ಟವಾಗಿ ನಿಗದಿ ಪಡಿಸಲಾಗಿದೆ. ಆದರೂ ಒಂದೇ ಒಂದು ತೈಲ ಮಾರಾಟ ಕಂಪನಿಯ ಪರೀಕ್ಷಾ ವರದಿಯಲ್ಲೂ ಎಥೆನಾಲ್‌ ಪ್ರಮಾಣ ಎಷ್ಟಿದೆ ಎಂದು ನಮೂದಿಸಿಲ್ಲ’ ಎಂದರು.

‘ಅಗತ್ಯವಿರುವ ಪರೀಕ್ಷಾ ಫಲಿತಾಂಶವನ್ನು ಒದಗಿಸುವಲ್ಲಿ ತೈಲ ಮಾರುಕಟ್ಟೆ ಕಂಪನಿಗಳ ಪ್ರಯೋಗಾಲಯಗಳು ವಿಫಲವಾಗಿರುವುದೇ ಅನುಮಾನಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನಡೆಸಿದೆ. ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಯಾವುದೇ ಆಧಾರದ ಮೇಲೆ ಪ್ರಶ್ನಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್‌ ಪತ್ತೆಯಾಗಿರುವುದು ಇಂಧನ ಮಿಶ್ರಣದ ಮೂಲ ಹಂತದಲ್ಲಿನ ವೈಫಲ್ಯವನ್ನು ಸೂಚಿಸುತ್ತದೆ. ಇದರ ಜವಾಬ್ದಾರಿಯು ತೈಲ ಮಾರುಕಟ್ಟೆ ಕಂಪನಿಗಳ ಮೇಲೆಯೇ ಇರುತ್ತದೆ. ನಮ್ಮ ಪರೀಕ್ಷಾ ಕಾರ್ಯಾಚರಣೆ ಮೂಲಕ ಮತ್ತು ತೈಲ ಮಾರುಕಟ್ಟೆ ಕಂಪನಿಗಳ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಬಹಿರಂಗಪಡಿಸುವ ಮೂಲಕ ದೇಶಾದ್ಯಂತ ಎಚ್ಚರಿಕೆಯ ವಾತಾವರಣ ಸೃಷ್ಟಿಸಿದ್ದೇವೆ’ ಎಂದು ರಿಜ್ವಾನ್‌ ಹೇಳಿದರು.

*ವಿಷಯದ ಕುರಿತು ಚರ್ಚಿಸಲು ಶೀಘ್ರವೇ ತೈಲ ಕಂಪನಿಗಳ ಸಭೆ 

* ಇಂಧನದಲ್ಲಿ ನಿಗದಿತ ಗುಣಮಟ್ಟ ಖಾತರಿಪಡಿಸಲು ಕ್ರಮ

*ಗ್ರಾಹಕರ ಹಿತಾಸಕ್ತಿ ರಕ್ಷಣೆ, ನ್ಯಾಯಯುತ ಸೇವೆ ಸರ್ಕಾರದ ಆದ್ಯತೆ

ರಿಜ್ವಾನ್ ಅರ್ಷದ್‌, ಆಹಾರ ಸಚಿವನಮ್ಮ ಮಾದರಿಗಳ ಪರೀಕ್ಷಾ ಫಲಿತಾಂಶಗಳನ್ನು ಪ್ರಶ್ನಿಸುವುದು ಎಂದರೆ, ಭಾರತ ಸರ್ಕಾರದ ಸ್ವಂತ ಮಾನ್ಯತಾ ವ್ಯವಸ್ಥೆಯಡಿ ಅನುಮೋದನೆ ಪಡೆದ ಪ್ರಯೋಗಾಲಯಗಳ ವಿಶ್ವಾಸಾರ್ಹತೆ ಪ್ರಶ್ನಿಸಿದಂತಾಗಿದೆ

₹500ರ ಹೈಡ್ರೊಮೀಟರ್‌ನಿಂದ ಪರೀಕ್ಷೆ

‘ತೈಲ ಕಂಪನಿಗಳವರು ಅಮೆಜಾನ್‌ನಲ್ಲಿ ₹500ಕ್ಕೆ ಸಿಗುವ ಹೈಡ್ರೊಮೀಟರ್‌ ತಂದು ಪರೀಕ್ಷೆ ಮಾಡುತ್ತಿದ್ದಾರೆ. ನಾವು ಪ್ರಮಾಣೀಕೃತ ಪ್ರಯೋಗಾಲಯದಲ್ಲಿ ಮಾಡಿದರೆ ಸರಿ ಇಲ್ಲ ಎನ್ನುತ್ತಾರೆ. ₹500ರ ಹೈಡ್ರೊ ಮೀಟರ್‌ನಲ್ಲಿ ಮಾಡಿದರೆ ಸರಿನಾ? ಇಲ್ಲಿ ಆರೋಪಿಯೂ ನೀವೇ, ನ್ಯಾಯಾಧೀಶರೂ ನೀವೇ ಅನ್ನೋವಂತಾಗಿದೆ’ ಎಂದು ಸಚಿವ ರಿಜ್ವಾನ್ ಅರ್ಷದ್ ವ್ಯಂಗ್ಯವಾಡಿದರು.

‘ನಮ್ಮ ಮಾನದಂಡ ಸರಿ ಇಲ್ಲ ಎನ್ನುತ್ತೀರಿ, ನೀವು ಮಾಡುವ ಪರೀಕ್ಷೆ ಸರಿ ಇದೆಯೇ? ನಮ್ಮ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕಿತ್ತು. ಜನರ ಹಿತದಲ್ಲಿ ನಾವು ಸವಾಲು ಹಾಕಿದ್ದೇವೆ. ಇಷ್ಟು ಗಂಭೀರ ವಿಷಯವನ್ನು ರಾಜ್ಯ ಕೈಗೆತ್ತಿಕೊಂಡಿರುವ ಬಗ್ಗೆ ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರವೂ ಅಷ್ಟೇ ಗಂಭೀರತೆಯಿಂದ ಉತ್ತರ ನೀಡಬೇಕಿತ್ತು’ ಎಂದು ಹೇಳಿದರು.

‘ಇ 20 ಇಂಧನದ ಕುರಿತು ಕಳವಳ ವ್ಯಕ್ತಪಡಿಸಿದ ಪ್ರತಿಯೊಂದು ಧ್ವನಿಯನ್ನೂ ಅಡಗಿಸಲಾಗುತ್ತಿದೆ. ಜುಲೈನಲ್ಲಿ ಸೊಸೈಟಿ ಆಫ್ ಇಂಡಿಯನ್‌ ಆಟೊಮೊಬೈಲ್‌ ಮ್ಯಾನ್ಯುಫ್ಯಾಕ್ಚರರ್ಸ್‌ ಸಂಸ್ಥೆಯು ಇ20 ಇಂಧನದಲ್ಲಿರುವ ಕ್ಲೋರೈಡ್‌ ಮತ್ತು ಸಲ್ಫರ್‌ ಅಂಶಗಳು ಹಾಗೂ ಅವು ವಾಹನಗಳ ಬಿಡಿಭಾಗಗಳಿಗೆ ಉಂಟು ಮಾಡುತ್ತಿರುವ ಹಾನಿಯ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಆದರೆ, ಕೇಂದ್ರದ ಒತ್ತಡದಿಂದ ಒಂದು ವಾರದೊಳಗೆ ಪತ್ರವನ್ನು ಹಿಂಪಡೆಯಿತು’ ಎಂದರು.

‘ಎನ್‌ಎಬಿಎಲ್‌ಗೆ ಅನುದಾನ ನಿಲ್ಲಿಸಲಿ’

ತೈಲ ಕಂಪನಿಗಳಿಂದ ಸಮಾಧಾನಕರ ಫಲಿತಾಂಶ ಬಾರದೇ ಇದ್ದಾಗ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಡಿಯಲ್ಲಿಯೇ ಇರುವ ಎನ್‌ಎಬಿಎಲ್‌ ಮಾನ್ಯತೆ ಪಡೆದ ಐಎಸ್‌ಒ ಪ್ರಮಾಣೀಕೃತ ಪ್ರಯೋಗಾಲಯಗಳಿಗೆ ಸಂಗ್ರಹಿಸಿದ ಮಾದರಿಗಳನ್ನು ಕಳುಹಿಸಿ ವರದಿ ಪಡೆದಿದ್ದೇವೆ. ಅದೇ ಸರಿ ಇಲ್ಲ ಎನ್ನುವುದಾದರೆ, ಎನ್‌ಎಬಿಎಲ್‌ಗೆ ನೀಡುವ ಅನುದಾನ ನಿಲ್ಲಿಸಲಿ’ ಎಂದು ರಿಜ್ವಾನ್ ಆಗ್ರಹಿಸಿದರು.

‘ಕರ್ನಾಟಕ ಸರ್ಕಾರವು ಎಲ್ಲ ನಿಗದಿತ ಪ್ರಕ್ರಿಯೆಗಳನ್ನು ಅನುಸರಿಸಿ ಇಂತಹ ಪರೀಕ್ಷೆ ನಡೆಸಿದ ಬಳಿಕ, ತೈಲ ಮಾರಾಟ ಕಂಪನಿಗಳ ಗುಣಮಟ್ಟದ ಮೇಲ್ವಿಚಾರಣೆಯು ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿರುವುದು ಬಹಿರಂಗವಾಗಿದೆ. ನಾವು ತಾಂತ್ರಿಕ ವಿವರಣೆಗಳ ಗೊಂದಲದಲ್ಲಿ ಸಿಲುಕಿಕೊಳ್ಳುವುದಿಲ್ಲ. ಇದಕ್ಕೆ ತೈಲ ಮಾರಾಟ ಕಂಪನಿಗಳೇ ಹೊಣೆಯಾಗುತ್ತವೆ’ ಎಂದು ತಿಳಿಸಿದರು.

ಕೇರಳಂನಲ್ಲಿ ಮಾದರಿ ಸಂಗ್ರಹ

ರಾಜ್ಯದ ನಾಲ್ಕು ಜಿಲ್ಲೆಗಳ ವಿವಿಧೆಡೆಯ ಬಂಕ್‌ಗಳಲ್ಲಿ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪ‍ರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಕೇರಳಂ ಸಚಿವ ಅನೂಪ್ ಜೇಕಬ್ ಸೋಮವಾರ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಜತೆಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪದ ಬಳಿಕ ಕೇರಳಂ ಸರ್ಕಾರವೂ ಪರಿಶೀಲನೆಗೆ ಮುಂದಾಗಿದೆ.

‘ರಾಜ್ಯದಲ್ಲಿಯೂ ವಾಹನಗಳಿಗೆ ಹಾನಿ ಆಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ ಹಾಗೂ ಪೆಟ್ರೋಲ್ ಜೊತೆಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುತ್ತಿರುವ ಆತಂಕದ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆತಂಕವನ್ನು ನಿವಾರಿಸುವುದು ಸರ್ಕಾರದ ಜವಾಬ್ದಾರಿ’ ಎಂದು ಸಚಿವರು ತಿಳಿಸಿದ್ದಾರೆ.

‘ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರದ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ. ಫಲಿತಾಂಶ ಹತ್ತು ದಿನಗಳ ಒಳಗಾಗಿ ತಿಳಿಯಲಿದೆ’ ಎಂದು ಅವರು ಮಾಹಿತಿ ನೀಡಿದರು.