ಹುಬ್ಬಳ್ಳಿ: ದೀಪಾವಳಿ ಒಂದೇ ಧರ್ಮಕ್ಕೆ ಸೀಮಿತವಾಗಿಲ್ಲ, ಅದು ಸೌಹಾರ್ದ ಸಾರುವ ಹಬ್ಬವೂ ಹೌದು ಎಂಬುದಕ್ಕೆ ಧಾರವಾಡದ ಮಾಳಮಡ್ಡಿಯ ಖಾನ್ ಕುಟುಂಬವು ಸಾಕ್ಷಿಯಾಗಿದೆ. ಸಿತಾರ್ ವಾದಕರ ಖಾನ್ ಕುಟುಂಬವು 124 ವರ್ಷಗಳಿಂದ ದೀಪಾವಳಿ ಪಾಡ್ಯ ಪೂಜೆಯನ್ನು ಸಂಪ್ರದಾಯಬದ್ಧವಾಗಿ ಸಂಭ್ರಮದಿಂದ ಆಚರಿಸುತ್ತಿದೆ.
ಮಧ್ಯಪ್ರದೇಶದ ಇಂದೋರ್ ನಗರದ ಸಿತಾರ್ರತ್ನ ಉಸ್ತಾದ್ ರಹಮತ್ ಖಾನ್ ಅವರು ಮೈಸೂರು ದಸರಾ ಸಂದರ್ಭದಲ್ಲಿ ಮಹಾರಾಜರ ಆಸ್ಥಾನದಲ್ಲಿ ಸಿತಾರ್ ವಾದನ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆಗಿನ ಸಂದರ್ಭದಲ್ಲಿ ಧಾರವಾಡ ಹಾಗೂ ಪುಣೆಯಲ್ಲಿ ಮಾತ್ರ ರೈಲು ಬದಲಿಸಲು ಅವಕಾಶವಿತ್ತು.
ಧಾರವಾಡಕ್ಕೆ ಆಗಾಗ ಬರುತ್ತಿದ್ದ ಅವರು ಇಲ್ಲಿನ ಪರಿಸರಕ್ಕೆ ಮನಸೋತು, 1902ರಲ್ಲಿ ಮಾಳಮಡ್ಡಿಯಲ್ಲಿ ನೆಲೆ ಕಂಡುಕೊಂಡರು. ಇಲ್ಲಿ ತಾವು ವಾಸವಿದ್ದ ಮನೆಯಲ್ಲಿ ದೀಪಾವಳಿ ಪಾಡ್ಯದಂದು ಸಂಗೀತ ವಾದ್ಯಗಳನ್ನು ಇಟ್ಟು ಲಕ್ಷ್ಮಿಪೂಜೆ ಮಾಡತೊಡಗಿದರು. ಇದನ್ನು ಕುಟುಂಬದ ಈಗಿನ ನಾಲ್ಕನೇ ತಲೆಮಾರಿನ ಸಿತಾರ್ ವಾದಕರು ಮುಂದುವರೆಸಿದ್ದಾರೆ.
‘ಮುತ್ತಜ್ಜ ಉಸ್ತಾದ್ ರಹಮತ್ ಖಾನ್ ಅವರು ಪಾಲಿಸುತ್ತಿದ್ದ ಸಂಪ್ರದಾಯವನ್ನು ನಮ್ಮ ತಂದೆ ಹಮೀದ್ಖಾನ್ ಮುಂದುವರಿ ಸಿದ್ದರು. ಬಾಲ್ಯದಿಂದ ಇದನ್ನೆಲ್ಲ ನೋಡಿ ಬೆಳೆದ ನಮಗೆ ಪೂಜೆ ಮಾಡುವುದು ರೂಢಿಯಾಯಿತು. ಆದ್ದರಿಂದ ಪ್ರತಿ ವರ್ಷ ತಪ್ಪದೇ ದಸರಾ ಸಂದರ್ಭದಲ್ಲಿ ಆಯುಧ ಪೂಜೆ ಹಾಗೂ ದೀಪಾವಳಿ ಪಾಡ್ಯದಂದು ಹಿಂದೂ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ಮಾಡುತ್ತೇವೆ’ ಎಂದು ಮೊಹಸಿನ್ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶೃಂಗೇರಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಾಗ, ಅಜ್ಜ ಅಬ್ದುಲ್ ರಹೀಂ ಕರೀಂ ಖಾನ್ ಅವರಿಗೆ ಶಾರದಾ ದೇವಿ ಚಿತ್ರ ನೀಡಲಾಗಿತ್ತು. ಇಂದಿಗೂ ಪೂಜೆಗೆ ಅದೇ ಚಿತ್ರ ಬಳಸುತ್ತೇವೆ. 10 ವರ್ಷಕ್ಕೊಮ್ಮೆ ಅದರ ಫ್ರೇಮ್ ಬದಲಿಸುತ್ತೇವೆ’ ಎಂದರು.
ಮೊಹಸಿನ್ ಕೂಡ ಸಿತಾರ್ ವಾದಕರು. ಧಾರವಾಡದಲ್ಲಿ ಮಕ್ಕಳಿಗೆ ಸಿತಾರ್ ವಾದನ ತರಬೇತಿ ನೀಡುತ್ತಾರೆ. ಕಳೆದ ವರ್ಷ ಅವರು ಮೈಸೂರು ದಸರಾ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
‘ಒಂದೂವರೆ ವರ್ಷದಿಂದ ಮೈಸೂರಿನ ಕುವೆಂಪು ನಗರದಲ್ಲಿ ವಾರಾಂತ್ಯದಲ್ಲಿ ಸಿತಾರ್ ವಾದನ ಹೇಳಿಕೊಡುತ್ತೇನೆ. ಹಬ್ಬದ ಸಂದರ್ಭದಲ್ಲಿ ಇಲ್ಲಿಯೂ ಅದ್ದೂರಿಯಾಗಿ ಪೂಜೆ ಮಾಡಿದ್ದೆ’ ಎಂದರು.

ಆಚಾರ್ಯರ ನೇತೃತ್ವದಲ್ಲಿ ಪೂಜೆ...
ದೀಪಾವಳಿ ಸಮೀಪಿಸುತ್ತಿದ್ದಂತೆ ಖಾನ್ ಕುಟುಂಬದವರು ತರಬೇತಿ ನೀಡುವ ಸಿತಾರ್ ವಾದನ ಕೊಠಡಿ ಮತ್ತು ಸಂಗೀತ ವಾದ್ಯಗಳನ್ನು ಶುಚಿಗೊಳಿಸುತ್ತಾರೆ. ಅಗತ್ಯ ಇದ್ದಲ್ಲಿ ಬಣ್ಣ ಬಳೆಯುತ್ತಾರೆ. ತರಹೇವಾರಿ ಹೂವು ಮಾವಿನ ತೋರಣದಿಂದ ಕೊಠಡಿ ಅಲಂಕರಿಸುತ್ತಾರೆ. ‘ಪಾಡ್ಯದಂದು ಹೊಸಬಟ್ಟೆ ಧರಿಸಿ ಕುಟುಂಬದವರು ವಿದ್ಯಾರ್ಥಿಗಳು ಸೇರಿ ಪೂಜೆಗೆ ಸಿದ್ಧತೆ ಮಾಡುತ್ತೇವೆ. ಧಾರವಾಡ ಉತ್ತರಾದಿಮಠದ ಮುರುಳಿಧರ್ ಆಚಾರ್ಯ ಅವರ ನೇತೃತ್ವದಲ್ಲಿ ಸಂಭ್ರಮದಿಂದ ಪೂಜಾ ವಿಧಿ–ವಿಧಾನ ನೆರವೇರಿಸಿ ಮಕ್ಕಳಿಗೆ ಸಿಹಿ ವಿತರಿಸಿ ಹಬ್ಬ ಆಚರಿಸುತ್ತೇವೆ’ ಎಂದು ಮೊಹಸಿನ್ ಖಾನ್ ತಿಳಿಸಿದರು.

