ಹಾಸನ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಲಂಚದ ಆರೋಪ ಕೇಳಿಬಂದಿದ್ದ ವಾಟ್ಸ್‌ಆ್ಯಪ್ ಚಾಟ್ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಆಪ್ತ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಶಶಿಕಿರಣ್, ‘ತಮ್ಮ ಹೆಸರಿನಲ್ಲಿ ನಕಲಿ ವಾಟ್ಸ್‌ಆ್ಯಪ್ ಸಂದೇಶಗಳನ್ನು ಸೃಷ್ಟಿಸಿ ಹರಡಲಾಗುತ್ತಿದೆ’ ಎಂದು ಆರೋಪಿಸಿ ಹಾಸನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ನನ್ನ ಮೊಬೈಲ್ ಸಂಖ್ಯೆ ದುರ್ಬಳಕೆ ಮಾಡಿಕೊಂಡು ನಕಲಿ ಸಂದೇಶಗಳನ್ನು ಸೃಷ್ಟಿಸಿ, ನನ್ನ ಮೊಬೈಲ್‌ನಿಂದಲೇ ಕಳುಹಿಸಿದಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಇದರಿಂದ ನನ್ನ ವೈಯಕ್ತಿಕ ವರ್ಚಸ್ಸು ಹಾಗೂ ಆಡಳಿತಾತ್ಮಕ ಗೌರವಕ್ಕೆ ಧಕ್ಕೆಯಾಗಿದೆ’ ಎಂದು ದೂರಿನಲ್ಲಿ ಶಶಿಕಿರಣ್ ತಿಳಿಸಿದ್ದಾರೆ.
ನಕಲಿ ಸಂದೇಶಗಳನ್ನು ಸೃಷ್ಟಿಸಿ, ಅವು ಸುಳ್ಳು ಎಂಬ ಅರಿವಿದ್ದರೂ ದುರುದ್ದೇಶದಿಂದ ಪ್ರಸಾರ ಮಾಡಲಾಗಿದೆ. ಈ ಸಂದೇಶಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಅರಸೀಕೆರೆ ತಹಶೀಲ್ದಾರ್ ಸೇರಿ ಉಪವಿಭಾಗಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಗಳ ಸಿಬ್ಬಂದಿ ಹೆಸರು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಶಿಕಿರಣ್ ನೀಡಿದ ದೂರಿನ ಮೇರೆಗೆ ಹಾಸನ ನಗರ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 336(4) ಮತ್ತು 335ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು, ಶಶಿಕಿರಣ್ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.
ಎಚ್.ಡಿ. ರೇವಣ್ಣ, ಶಾಸಕಶಶಕಿರಣ್‌ಗೆ ಬೆದರಿಕೆ ಹಾಕಿ ಪ್ರಕರಣ ದಾಖಲಿಸಲಾಗಿದೆ. ವಿಪಕ್ಷಗಳು ಇರುವುದೇ ಆರೋಪ ಮಾಡುವುದಕ್ಕೆ. ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕಿತ್ತು‘ಎಲ್ಲ ಮಾತೂ ಪ್ರತಿಕ್ರಿಯೆಗೆ ಅರ್ಹವಲ್ಲ’: ಡಿಸಿ ಪೋಸ್ಟ್
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭ್ರಷ್ಟಾಚಾರದ ಆರೋಪ ಮಾಡಿರುವ ಬೆನ್ನಲ್ಲೇ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ಲತಾಕುಮಾರಿ ಅವರು ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಗೂ ಎಕ್ಸ್ ಖಾತೆಯಲ್ಲಿ ಇಂಗ್ಲಿಷ್ ಬರಹವಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸಿಂಹವೊಂದು ಮಲಗಿರುವ ಅಥವಾ ಸುಮ್ಮನಿರುವ ದೃಶ್ಯವಿದ್ದು ಅದರ ಸುತ್ತ ನಾಯಿಗಳು ಬೊಗಳುತ್ತಿರುವಂತೆ ಚಿತ್ರಿಸಲಾಗಿದೆ. ಚಿತ್ರದ ಮೇಲೆ ‘NOT EVERY VOICE DESERVES A RESPONSE’ (ಎಲ್ಲ ಮಾತೂ ಪ್ರತಿಕ್ರಿಯೆಗೆ ಅರ್ಹವಲ್ಲ) ಎಂಬ ವಾಕ್ಯವನ್ನು ಬರೆಯಲಾಗಿದೆ.
‘ಸಿಂಹ ಸುಮ್ಮನಿರುವಾಗ ಅಥವಾ ವಿಶ್ರಾಂತಿಯಲ್ಲಿರುವಾಗ ನಾಯಿಗಳು ಬೊಗಳುತ್ತವೆ; ನಾಯಿಗಳು ಬೊಗಳಿದರೆ ಸಿಂಹ ಅಂಜುವುದಿಲ್ಲ’ ಎನ್ನುವ ಸಾಂಕೇತಿಕ ಸಂದೇಶದ ಮೂಲಕ ಕೇಂದ್ರ ಸಚಿವರ ಆರೋಪಕ್ಕೆ ಜಿಲ್ಲಾಧಿಕಾರಿ ತಿರುಗೇಟು ನೀಡಿದ್ದಾರೆ ಎಂದು ಪೋಸ್ಟ್ ಅನ್ನು ವಿಶ್ಲೇಷಿಸಲಾಗುತ್ತಿದೆ.
ವರ್ಗಾವಣೆಯಲ್ಲಿ ಒಂದು ಪೈಸೆ ಪಡೆದಿಲ್ಲ: ಶಿವಲಿಂಗೇಗೌಡ
‘ಹಾಸನಾಂಬೆ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ಡಿ.ಸಿ ವರ್ಗಾವಣೆ ವಿಚಾರದಲ್ಲಿ ನಾನು ಒಂದೇ ಒಂದು ಪೈಸೆ ಪಡೆದಿದ್ದರೂ ಆ ತಾಯಿ ನನ್ನನ್ನು ನೋಡಿಕೊಳ್ಳಲಿ. ಇಲ್ಲವಾದರೆ ಸುಳ್ಳು ಆರೋಪ ಮಾಡಿದವರನ್ನು ತಾಯಿ ನೋಡಿಕೊಳ್ಳಲಿ. ತಾಯಿಗೆ ದ್ರೋಹ ಮಾಡುವ ಕೆಲಸ ನಾನು ಮಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ತಮ್ಮ ವಿರುದ್ಧ ಗಂಭೀರ ಆರೋಪಗಳಿದ್ದು ಯಾರಾದರೂ ದೂರುದಾರರು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಮುಂದೆ ಬಂದರೆ ತನಿಖೆ ನಡೆಸಲಿ. ತಾವು ತಪ್ಪು ಮಾಡಿರುವುದು ಸಾಬೀತಾದರೆ ಸಚಿವ ಸ್ಥಾನದಿಂದ ತೆಗೆದುಹಾಕಲಿ. ಅದಕ್ಕೆ ತಮ್ಮ ವಿರೋಧವಿಲ್ಲ ಎಂದು ಸವಾಲು ಹಾಕಿದರು.
‘ಈ ಹಿಂದೆ ಹಣದ ಕಂತೆಗೆ ಸಂಬಂಧಿಸಿದ ವಿಡಿಯೊಗಳು ಬಹಿರಂಗವಾಗಿದ್ದರೂ ಅಂತಹ ವಿಚಾರಗಳ ಬಗ್ಗೆ ಸಮರ್ಪಕವಾಗಿ ಮಾತನಾಡದೇ ಅಂಥವರನ್ನು ಪಕ್ಕದಲ್ಲಿ ಕೂರಿಸಿಕೊಂಡು ತಮ್ಮ ವಿರುದ್ಧ ಆರೋಪ ಮಾಡುತ್ತಿರುವುದು ಯಾವ ನ್ಯಾಯ’ ಎಂದು ಹಾಸನ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಹೆಸರನ್ನು ಉಲ್ಲೇಖಿಸದೆ ಟೀಕಿಸಿದರು.

