ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವ್ಯಾಪ್ತಿಯಲ್ಲಿ ಆಸ್ತಿ ದಾಖಲೆ ಇಲ್ಲದ ಭೂ ಮಾಲೀಕರಿಗೆ ‘ಭೂ ಗ್ಯಾರಂಟಿ’ ಸೇರಿದಂತೆ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬಿಡಿಎ ಯೋಜನೆಗಳ ಕುರಿತಂತೆ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಬಿಡಿಎ ಭೂಸ್ವಾಧೀನಕ್ಕೆ ಸೇರಿದ ಜಮೀನಿನಲ್ಲಿ 2008ರ ಜುಲೈ 10ರ ಪೂರ್ವದಲ್ಲಿ ನಿರ್ಮಿಸಲಾದ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಈ ಹಿಂದೆ ಸಕ್ರಮ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ’ ಎಂದರು.
‘ಈ ಸೌಲಭ್ಯ ಕಲಂ 38(ಡಿ) ತಿದ್ದುಪಡಿ ಮೂಲಕ ಈಗಾಗಲೇ ಜಾರಿಗೆ ಬಂದಿದೆ. ಇದೇ ಡಿಸೆಂಬರ್ 15ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಎರಡು ವರ್ಷಗಳ ಒಳಗೆ ಈ ಸೌಲಭ್ಯ ಬಳಸಿಕೊಳ್ಳದಿದ್ದರೆ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುವುದು’ ಎಂದರು.
‘2008ಕ್ಕಿಂತ ಪೂರ್ವದಲ್ಲಿ ಮನೆ ಕಟ್ಟಿರುವ ಸುಮಾರು 1 ಲಕ್ಷ ಜನರಿಗೆ ಆಸ್ತಿ ಮಾಲೀಕತ್ವ ನೀಡಬೇಕೆಂಬ ಉದ್ದೇಶದಿಂದ 2021ರಲ್ಲಿಯೇ ಅಂದಿನ ಸರ್ಕಾರ ದರ ನಿಗದಿ ಮಾಡಿತ್ತು. ಆದರೆ, ಶುಲ್ಕ ಹೆಚ್ಚಾಯಿತೆಂದು 600 ಜನ ಮಾತ್ರ ಅರ್ಜಿ ಹಾಕಿದ್ದರು. ನಾವು ಶುಲ್ಕ ಕಡಿಮೆ ಮಾಡಿ ಮತ್ತೊಂದು ಅವಕಾಶ ನೀಡಿದ್ದೇವೆ. ಸ್ವಚ್ಛ ಬಿಡಿಎ, ಪರಿಶುದ್ಧವಾದ ಆಡಳಿತವನ್ನು ಬೆಂಗಳೂರಿಗರಿಗೆ ನೀಡುವ ಉದ್ದೇಶದಿಂದ ಈ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ’ ಎಂದರು.
ಮಾರ್ಗಸೂಚಿ ದರದ ಮೌಲ್ಯ: ‘ಮೂಲೆ ನಿವೇಶನ ಹೊರತುಪಡಿಸಿ ಕಟ್ಟಡದೊಂದಿಗಿನ ಭೂಮಿಯ ವ್ಯಾಪ್ತಿ 20x30 ರವರೆಗೆ ಪ್ರಸ್ತುತ ಮಾರ್ಗಸೂಚಿ ಮೌಲ್ಯದ ಶೇ 5ರಷ್ಟು, 20x30ಕ್ಕಿಂತ ಹೆಚ್ಚು ಮತ್ತು 30x40ರವರೆಗೆ ಶೇ 12.5 ರಷ್ಟು, 30x40ಕ್ಕಿಂತ ಹೆಚ್ಚು ಮತ್ತು 40x60ರವರೆಗೆ ಶೇ 20ರಷ್ಟು ಮತ್ತು 40x60ಕ್ಕಿಂತ ಹೆಚ್ಚು ಮತ್ತು 50x80ರವರೆಗೆ ಶೇ 25ರಷ್ಟು ದರ ನಿಗದಿಪಡಿಸಲಾಗಿದೆ. ಇದು ಈ ಹಿಂದಿನ ಸರ್ಕಾರ ನಿಗದಿಪಡಿಸಿದ್ದ ದರಕ್ಕಿಂತ ಶೇ 50ರಷ್ಟು ಕಡಿಮೆ’ ಎಂದರು.
ಸುಸಜ್ಜಿತ ಕಟ್ಟಡ: ‘ಬಿಡಿಎ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 1 ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಬಹುಪಯೋಗಿ ಪ್ರಾಧಿಕಾರದ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದೂ ಅವರು ಹೇಳಿದರು.
ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಆಯುಕ್ತ ಪಿ. ಮಣಿವಣ್ಣನ್ ಸಭೆಯಲ್ಲಿ ಉಪಸ್ಥಿತರಿದ್ದರು.
ಶುದ್ಧ ಕ್ರಯಪತ್ರ: 20 ಸಾವಿರ ಮಂದಿಗೆ ಲಾಭ
ಬಿಡಿಎ ನಿವೇಶನ ಹಂಚಿಕೆ ಮಾಡಿಸಿಕೊಂಡ ಸುಮಾರು 20 ಸಾವಿರ ಮಂದಿ ನಾನಾ ಕಾರಣಗಳಿಂದ ಶುದ್ಧ ಕ್ರಯಪತ್ರ ಮಾಡಿಸಿಕೊಂಡಿಲ್ಲ. ದಾಖಲಾತಿಗಳೊಂದಿಗೆ ಇದೇ ಡಿ. 17ರ ಒಳಗೆ ಅರ್ಜಿ ಸಲ್ಲಿಸಿದರೆ 60 ದಿನಗಳ ಒಳಗೆ ಶುದ್ಧ ಕ್ರಯಪತ್ರ ನೋಂದಾಯಿಸಿಕೊಡಲಾಗುವುದು’ ಎಂದು ಶಿವಕುಮಾರ್ ಹೇಳಿದರು. ‘ಬಿಡಿಎದಿಂದ ನಿವೇಶನಗಳ ಹಂಚಿಕೆಯಾಗಿ ಗುತ್ತಿಗೆ ಅವಧಿ ಮುಗಿದಿರುವ ಪ್ರಕರಣಗಳಲ್ಲಿ ಶುದ್ಧ ಕ್ರಯಪತ್ರ ನೋಂದಣಿಗೆ ‘ಶುದ್ಧ ಕ್ರಯಪತ್ರ ಮೇಳ’ ಆಯೋಜಿಸಲಾಗಿದೆ. ಬಿಡಿಎ ಹಂಚಿಕೆ ಮಾಡುವ ನಿವೇಶನಗಳಿಗೆ 10 ವರ್ಷದ ಗುತ್ತಿಗೆ ಅವಧಿ ಇರುತ್ತದೆ. ಈ ಅವಧಿಯು ಪೂರ್ಣಗೊಂಡ ಬಳಿಕ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಶುದ್ಧ ಕ್ರಯಪತ್ರ ಮಾಡಿಸಿಕೊಳ್ಳಬೇಕು ಎಂದರು.
‘ಕೆಂಪೇಗೌಡ ಬಡಾವಣೆ ಸೇರಿದಂತೆ ಇತರೆಡೆಗಳಲ್ಲಿ ವ್ಯಾಜ್ಯ ಇಲ್ಲದೆ ಸ್ವಇಚ್ಛೆಯಿಂದ ಆಸ್ತಿ ಬಿಟ್ಟು ಕೊಟ್ಟವರಿಗೆ ಒಂದು ಎಕರೆಗೆ 30x40 ನಿವೇಶನ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ವಿಶೇಷ ಪ್ರೋತ್ಸಾಹವಾಗಿ ನಿವೇಶನ ನೀಡುವ ಕಾರ್ಯ 2014ರಿಂದ ಬಾಕಿ ಇದ್ದು 1989ರ ಕಾನೂನಿನ ಪ್ರಕಾರ ಅರ್ಜಿ ಸಲ್ಲಿಸಬೇಕು. ಇದಕ್ಕೆ ಬೆಲೆ ನಿಗದಿ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.ಪ್ರೋತ್ಸಾಹದಾಯಕ ನಿವೇಶನ ಸೌಲಭ್ಯ‘ಬಿಡಿಎದಿಂದ ಹಂಚಿಕೆ ಮಾಡಿರುವ ನಿವೇಶನಗಳ ಹಿಂಬದಿಯಲ್ಲಿ ಮತ್ತು ಅಕ್ಕ-ಪಕ್ಕದಲ್ಲಿ ಪ್ರಾಧಿಕಾರಕ್ಕೆ ಸೇರಿರುವ ಅಂಚಿನ ಜಾಗಗಳು ಲಭ್ಯವಿದ್ದು ಆ ಜಾಗದ ಬಗ್ಗೆ ಹಂಚಿಕೆದಾರರಿಗೆ ಆಸಕ್ತಿ ಇದ್ದರೆ ಇದೇ ಡಿ. 17ರ ಒಳಗೆ ಅರ್ಜಿ ಸಲ್ಲಿಸಬಹುದು. 600 ಚದರ ಅಡಿವರೆಗೂ ಈ ರೀತಿಯ ನಿವೇಶನ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ’ ಎಂದು ಶಿವಕುಮಾರ್ ಹೇಳಿದರು.ಅಂಚಿನ ಜಾಗ ಹಂಚಿಕೆ
