ಬೆಂಗಳೂರು: ಉರ್ದು ಕೇವಲ ಒಂದು ಭಾಷೆಯಲ್ಲ; ಅದು ಹೃದಯದ ಭಾಷೆ. ಅದರ ಶಾಯರಿಗಳನ್ನು ನೋಡಿದರೆ ಇದು ವಿಶ್ವಭಾಷೆ ಎಂಬುದು ಗೊತ್ತಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕರ್ನಾಟಕ ಉರ್ದು ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕಪ್ರಶಸ್ತಿ ಪ‍್ರದಾನ ಹಾಗೂ ‘ಜಶ್ನ್ ಎ ಉರ್ದು’ (ಉರ್ದು ಉತ್ಸವ) ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉರ್ದು ಒಂದು ರಾಜ್ಯ, ಒಂದು ಪ್ರಾಂತ್ಯಕ್ಕೆ ಸೀಮಿತವಾದ ಭಾಷೆಯಲ್ಲ. ಗಡಿಗಳೇ ಇಲ್ಲದ ಸಂಸ್ಕೃತಿ ಅದು. ನಾವು ಎಲ್ಲ ಭಾಷೆ, ಧರ್ಮಗಳ ಜನರನ್ನು ಗೌರವಿಸುವವರು. ಕಬ್ಬಿಣದಿಂದ ಸೂಜಿಯನ್ನೂ ತಯಾರಿಸುತ್ತಾರೆ. ಕತ್ತರಿಯನ್ನೂ ಮಾಡುತ್ತಾರೆ. ಸಂಬಂಧಗಳನ್ನು ಕತ್ತರಿಸುವವರು ಬೇರೆ ಇದ್ದಾರೆ. ನಾವು ಸಂಬಂಧಗಳನ್ನು ಸೂಜಿಯಿಂದ ಹೊಲಿಯುವವರು. ನಿಮ್ಮ ಜೊತೆಗೆ ನಮ್ಮ ಸರ್ಕಾರ ಇದೆ’ ಎಂದು ತಿಳಿಸಿದರು.

‘ನಮ್ಮ ಪ್ರಣಾಳಿಕೆಯಲ್ಲಿ ಅಲ್ಪ ಸಂಖ್ಯಾತರಿಗೆ ಅನೇಕ ಭರವಸೆಗಳನ್ನುನೀಡಿದ್ದೇವೆ. ಅವುಗಳನ್ನು ಒಂದೊಂದಾಗಿ ಈಡೇರಿಸಲಾಗುವುದು.ಉರ್ದು ಅಕಾಡೆಮಿಗೆ ಇನ್ನಷ್ಟು ಅನುದಾನ ಒದಗಿಸಲಾಗುವುದು’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ಅಸ್ಫಾಖ್‌ ಉಲ್ಲಾ ಖಾನ್‌ ಒಬ್ಬನೇ ಅಲ್ಲ, ಸಾವಿರಾರು ಮುಸ್ಲಿಮರು ಭಾಗವಹಿಸಿ ದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧೀಜಿ, ನೆಹರೂ ಸೇರಿದಂತೆ ಎಲ್ಲರೂ ಇಂಗ್ಲಿಷರನ್ನು ವಿರೋಧಿಸಿದರೂ ಇಂಗ್ಲಿಷ್‌ ಅನ್ನು ವಿರೋಧಿಸಲಿಲ್ಲ. ಆದರೆ,ಮುಸ್ಲಿಮರು ಇಂಗ್ಲಿಷರನ್ನೂ, ಇಂಗ್ಲಿಷನ್ನೂ ವಿರೋಧಿಸಿದರು. ಹಾಗಾಗಿ ಮುಸ್ಲಿಮರಲ್ಲಿ ಇಂಗ್ಲಿಷ್‌ ಕಲಿತವರ ಸಂಖ್ಯೆ ಕಡಿಮೆ ಆಯಿತು’ ಎಂದು ವಿವರಿಸಿದರು.

‘1930ರಿಂದ 47ರ ನಡುವಿನ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹಿಂದಿಯನ್ನು ಪತ್ರಿಕೋದ್ಯಮದ ಭಾಷೆಯಾಗಿ ಮುನ್ನೆಲೆಗೆ ತರಲಾಯಿತು. ಅದು ಉರ್ದುವನ್ನು ಮಾತ್ರವಲ್ಲ, ಉತ್ತರ ಭಾರತದ ಅನೇಕ ಭಾಷೆಗಳನ್ನು ತಿಂದು ಹಾಕಿತು. ಸಮನ್ವಯದ ಭಾಷೆ ಉರ್ದುವನ್ನು ಮುಸ್ಲಿಮರ ಭಾಷೆ ಎಂದು ಸೀಮಿತಗೊಳಿಸಲಾಯಿತು’ ಎಂದರು.

ವಿವಿಧ ಕ್ಷೇತ್ರಗಳ 20 ಸಾಧಕರಿಗೆ ಇದೇ ಸಂದರ್ಭದಲ್ಲಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಹಾರ ಸಚಿವ ರಿಜ್ವಾನ್ ಅರ್ಷದ್‌, ರಾಜ್ಯಸಭಾ ಸದಸ್ಯ ಮನ್ಸೂರ್‌ ಅಲಿಖಾನ್‌, ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌, ಶಾಸಕರಾದ ಖನೀಜ್‌ ಫಾತಿಮಾ, ಯಾಸಿರ್‌ ಅಹಮದ್‌ ಖಾನ್‌ ಪಠಾಣ್‌, ಸಾಹಿತಿ ಬಿ.ಟಿ. ಲಲಿತಾ ನಾಯಕ್‌, ಉರ್ದು ಅಕಾಡೆಮಿ ಅಧ್ಯಕ್ಷ ಮೊಹಮ್ಮದ್ ಅಲಿ ಖಾಜಿ ಇದ್ದರು.

‘ಭಾಷಾ ಪ್ರಯೋಗಾಲಯ ಆರಂಭಕ್ಕೆ ಚಿಂತನೆ’

ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೂಲಕ ಭಾಷೆಗಳ ಪ್ರಯೋಗಾಲಯ ಆರಂಭಿಸಲಾಗುವುದು. ಈ ಮೂಲಕ ಯಾರೂ ಬೇಕಾದರೂ ತಮಗೆ ಇಷ್ಟದ ಭಾಷೆಯನ್ನು ಕಲಿಯಲು ಅವಕಾಶ ಕಲ್ಪಿಸಲಾಗುವುದು ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಯು.ಟಿ. ಖಾದರ್‌ ತಿಳಿಸಿದರು.‌

‘ಭಾಷೆ ಎಂದರೆ ಬರೀ ಮಾತನಾಡುವುದಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಪರಂಪರೆ ಸಂಕೇತ. ಯಾವುದೇ ಭಾಷೆ ಉಳಿವಿಗಾಗಿ ಆಯಾ ಭಾಷೆ ಸಾಹಿತ್ಯ, ಸಂಸ್ಕೃತಿ ಮತ್ತು ಬರಹ ಗಾರರನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ’ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಇಲಾಖೆ ಸವಲತ್ತು ಸಮುದಾಯದ ಅರ್ಹ ಫಲಾನುಭವಿಗಳಿಗೆ ಸಿಗಲು ನೆರವಾಗುವಂತೆ ಸಹಾಯವಾಣಿ ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.

261110-4-1044944671