ಬೆಂಗಳೂರು: ‘ಕಾಂಗ್ರೆಸ್‌ನವರಿಂದ ದಿನನಿತ್ಯ ನನ್ನ ವಿಳಾಸಕ್ಕೆ ಚಾಕು, ಚೂರಿಗಳನ್ನು ಕಳುಹಿಸಿ ಬೆದರಿಕೆ ಹಾಕುವ ಹೇಯ ಕೃತ್ಯ ನಡೆಯುತ್ತಿದೆ. ಇಂತಹ ಬೆದರಿಕೆಗಳ ಮೂಲಕ ನನ್ನ ಧೈರ್ಯ ಕುಗ್ಗಿಸಬಹುದು, ಹೋರಾಟದ ಹಾದಿಯಿಂದ ಹಿಂದೆ ಸರಿಸಬಹುದು ಎಂಬುದು ಅವರ ಹಗಲುಗನಸು’ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಇಂತಹ ಪುಂಡರ ಬೆದರಿಕೆಗಳಿಗೆ ಹೆದರುವುದಿಲ್ಲ. ಬಾಬಾ ಸಾಹೇಬರ ವಿಚಾರಧಾರೆ, ಸ್ವಾಭಿಮಾನ ಮತ್ತು ಹೋರಾಟದ ಸಂಕಲ್ಪವೇ ನನ್ನ ಶಕ್ತಿ’ ಎಂದು ತಿಳಿಸಿದ್ದಾರೆ.

‘ಈ ಕೃತ್ಯದ ವಿರುದ್ಧ ಈಗಾಗಲೇ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದು, ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾನೂನಿನ ಮೂಲಕವೇ ಇಂತಹ ಕಿಡಿಗೇಡಿಗಳಿಗೆ ತಕ್ಕ ಉತ್ತರ ನೀಡುತ್ತೇನೆ’ ಎಂದಿದ್ದಾರೆ.

‌‘ಕಾಂಗ್ರೆಸ್‌ ಅನ್ನು ತುಂಡು ತುಂಡು ಮಾಡಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂದು ಛಲವಾದಿ ಹೇಳಿದ್ದರು. ಅದನ್ನು ಮಾಡಿ ತೋರಿಸಿ ಎಂದು ಸವಾಲು ಒಡ್ಡಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು ಅವರ ವಿಳಾಸಕ್ಕೆ ಚಾಕು–ಚೂರಿ ಕಳುಹಿಸುತ್ತಿದ್ದಾರೆ.

261110-4-1426005447