ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಜೋ ರೂಟ್ ಮುನ್ನಡೆಸಲಿದ್ದಾರೆ. ಈ ಸರಣಿಯ ಮೂಲಕ ಹೊಸ ಅಧ್ಯಾಯ ಬರೆಯುವ ಇರಾದೆಯಲ್ಲಿ ಇಂಗ್ಲೆಂಡ್. ಈ ಹಿಂದೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿದ್ದ ಬೆನ್ ಸ್ಟೋಕ್ಸ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ಬಳಿಕ, ಜೋ ರೂಟ್ ಅವರನ್ನು ಹಂಗಾಮಿ ನಾಯಕನನ್ನಾಗಿ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಇದೀಗ, ಸೌತ್ ಆಫ್ರಿಕಾ ಸರಣಿಗೂ ಮುನ್ನವೇ ಜೋ ರೂಟ್ ಅವರನ್ನು ಇಂಗ್ಲೆಂಡ್ ಟೆಸ್ಟ್ ತಂಡದ ಖಾಯಂ ನಾಯಕನನ್ನಾಗಿ ಅಧಿಕೃತವಾಗಿ ನೇಮಕ ಮಾಡಲಾಗಿದೆ.
ಅದರಂತೆ, ಜೋ ರೂಟ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ತಮ್ಮ ‘ಸೆಕೆಂಡ್ ಇನ್ನಿಂಗ್ಸ್’ ಆರಂಭಿಸಲು ಸಂಪೂರ್ಣ ಸಜ್ಜಾಗಿದ್ದಾರೆ. ಅದರಲ್ಲೂ ನೂತನ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಮಾರ್ಗದರ್ಶನದಲ್ಲಿ ಈ ಹೊಸ ಅಧ್ಯಾಯ ಆರಂಭವಾಗುತ್ತಿರುವುದು ವಿಶೇಷ. ಈ ಹಿಂದೆ ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯಶಸ್ವಿ ಮುಖ್ಯ ಕೋಚ್ ಆಗಿದ್ದ ಫ್ಲೆಮಿಂಗ್, ಇದೀಗ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೀಗಾಗಿ, ರೂಟ್-ಫ್ಲೆಮಿಂಗ್ ಜೋಡಿಯ ಮುಂದಾಳತ್ವದಲ್ಲಿ ಇಂಗ್ಲೆಂಡ್ ತಂಡವು ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಆಡಲು ಮೈದಾನಕ್ಕಿಳಿಯುತ್ತಿದೆ.
ಇಂಗ್ಲೆಂಡ್ ಟೆಸ್ಟ್ ತಂಡ:
- ನಾಯಕ: ಜೋ ರೂಟ್
- ಬ್ಯಾಟರ್ಗಳು/ಆಲ್ರೌಂಡರ್ಗಳು: ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಎಮಿಲಿಯೊ ಗೇ, ಡಾನ್ ಲ್ಯಾರೆನ್ಸ್.
- ವಿಕೆಟ್ ಕೀಪರ್ಗಳು: ಜೋರ್ಡಾನ್ ಕಾಕ್ಸ್, ಜೇಮಿ ಸ್ಮಿತ್.
- ಸ್ಪಿನ್ನರ್: ಲಿಯಾಮ್ ಪ್ಯಾಟರ್ಸನ್-ವೈಟ್.
- ವೇಗದ ಬೌಲರ್ಗಳು: ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸನ್ನಿ ಬೇಕರ್, ಸ್ಯಾಮ್ ಕುಕ್, ಓಲಿ ರಾಬಿನ್ಸನ್, ಜೋಶ್ ಟಂಗ್.
ಇದನ್ನೂ ಓದಿ: 149 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶ್ವ ದಾಖಲೆ ಬರೆದ ಝಿಂಬಾಬ್ವೆ
ಯಾರು ಹೊರಕ್ಕೆ?
ಇತ್ತೀಚಿನವರೆಗೂ ನಿಯಮಿತವಾಗಿ ಆಡುತ್ತಿದ್ದ ಒಲೀ ಪೋಪ್ ಮತ್ತು ಯುವ ಸ್ಪಿನ್ನರ್ ಶೋಯೆಬ್ ಬಶೀರ್ ಅವರನ್ನು ಮುಖ್ಯ ತಂಡದಿಂದ ಕೈಬಿಡಲಾಗಿದ್ದು, ಬದಲಿಗೆ ಯುವ ಸ್ಪಿನ್ನರ್ ಲಿಯಾಮ್ ಪ್ಯಾಟರ್ಸನ್-ವೈಟ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಹಾಗೆಯೇ ಪೋಪ್ ಸ್ಥಾನದಲ್ಲಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದ ಯುವ ಆಟಗಾರ ಜೇಕಬ್ ಬೆಥೆಲ್ ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಿದ್ದಾರೆ.

