ಆಂಧ್ರ ಪ್ರದೇಶದ ಡಿಸಿಎಂ, ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ ದಾಂಪತ್ಯದಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡೆಲಾ ಅವರು 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದು, ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಜನಸೇನೆಯ ಅಧಿಕೃತ ವಾಟ್ಸ್ಆ್ಯಪ್ ಮಾಧ್ಯಮ ಗುಂಪಿನ ಮೂಲಕ ಪವನ್ ಕಲ್ಯಾಣ್ ಮತ್ತು ಅನ್ನಾ ಈ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
‘ನಮ್ಮ ಗೌಪ್ಯತೆಯನ್ನು ಗೌರವಿಸಿ’
ನಮ್ಮ ಜೀವನದ ಮಹತ್ವದ ಭಾಗವನ್ನು ಒಟ್ಟಿಗೆ ಕಳೆದ ನಂತರ, ಪರಸ್ಪರ ತಿಳಿವಳಿಕೆ ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ವೈವಾಹಿಕ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮುದ್ದಿನ ಮಕ್ಕಳ ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಪ್ರಮುಖ ಆದ್ಯತೆಯಾಗಿರಲಿದೆ. ನಮ್ಮ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಈ ಬದಲಾವಣೆಯ ಸಂದರ್ಭದಲ್ಲಿ, ನಮ್ಮ ಗೌಪ್ಯತೆಯನ್ನು ಗೌರವಿಸಿ, ಸಹಾನುಭೂತಿ ಮತ್ತು ತಿಳಿವಳಿಕೆ ತೋರಬೇಕೆಂದು ವಿನಂತಿಸುತ್ತೇವೆ. ಈವರೆಗೆ ನಮ್ಮೊಂದಿಗೆ ನಿಂತ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 17ನೇ ವಯಸ್ಸಿಗೆ ನಕ್ಸಲ್ ಆಗ ಹೊರಟಿದ್ದ ಪವನ್ ಕಲ್ಯಾಣ್; ತಡೆದಿದ್ದು ಅಣ್ಣ ಚಿರಂಜೀವಿ
ರಷ್ಯಾ ಮೂಲದ ಅನ್ನಾ ಅವರನ್ನು ಪವನ್ ಕಲ್ಯಾಣ್ 2013ರ ಸೆಪ್ಟೆಂಬರ್ನಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ. ಪವನ್ ಕಲ್ಯಾಣ್ ಅಭಿನಯದ ‘ತೀನ್ ಮಾರ್’ ಚಿತ್ರದಲ್ಲೂ ಅನ್ನಾ ನಟಿಸಿದ್ದಾರೆ. ಇದಕ್ಕೂ ಮೊದಲು ಪವನ್ ಕಲ್ಯಾಣ್ ಅವರು 1997ರ ಸೆಪ್ಟೆಂಬರ್ನಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದರು. 1999ರಲ್ಲಿ ಇಬ್ಬರೂ ಪ್ರತ್ಯೇಕಗೊಂಡಿದ್ದು, 2008ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ವಿವಾಹವಾಗಿದ್ದರು. ಇವರಿಗೂ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದು, 2012ರಲ್ಲಿ ಡಿವೋರ್ಸ್ ಆಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

