ತಮಿಳುನಾಡು, ನವೆಂಬರ್ 10: ವರನಟ ಡಾ. ರಾಜಕುಮಾರ್ ಅವರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿರುವ ಘಟನೆ ತಮಿಳುನಾಡಿನ ಗಾಜನೂರಿನಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳೆಲ್ಲ ಪುಡಿಪುಡಿಯಾಗಿದ್ದು, ಅಣ್ಣಾವ್ರ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.

ಗಾಜನೂರಿನಲ್ಲಿರುವ ಡಾ. ರಾಜಕುಮಾರ್ ಅವರ ಸಂಬಂಧಿಕರ ಮನೆ ಮೇಲೆ ಕಚ್ಚಾ ಬಾಂಬ್ ದಾಳಿ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಏಕಾಏಕಿ ಸಂಭವಿಸಿದ ಸ್ಫೋಟದಿಂದ ಮನೆಯ ಗಾಜುಗಳು ಸಂಪೂರ್ಣವಾಗಿ ಒಡೆದುಹೋಗಿವೆ. ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಈ ಘಟನೆ ಕುರಿತು ಡಾ. ರಾಜಕುಮಾರ್ ಅವರ ಸಂಬಂಧಿ ಮನೋಗ್ನ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಮಿಳುನಾಡಿನ ತಾಳವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನು, ಇದು ಉದ್ದೇಶಪೂರ್ವಕ ದಾಳಿಯೇ ಎಂಬ ಬಗ್ಗೆ ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ