ಅಬುಧಾಬಿ, ನವೆಂಬರ್ 10: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷಕ್ಕೆ ಶಾಂತಿಯುತ ತೆರೆ ಎಳೆಯುವ ನಿಟ್ಟಿನಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಮಹತ್ವದ ಶಾಂತಿ ಮಾತುಕತೆ ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿಯಲ್ಲಿ ಆರಂಭವಾಗಲಿದೆ. ಜಾಗತಿಕ ಮಟ್ಟದಲ್ಲಿ ತೀವ್ರ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿರುವ ಈ ಯುದ್ಧವನ್ನು ತಡೆದು, ಉಭಯ ದೇಶಗಳ ನಡುವೆ ಶಾಂತಿ ಹಾಗೂ ಕದನ ವಿರಾಮ ಏರ್ಪಡಿಸುವುದು ಈ ಪ್ರಮುಖ ರಾಜತಾಂತ್ರಿಕ ಸಭೆಯ ಮುಖ್ಯ ಉದ್ದೇಶವಾಗಿದೆ. ಈ ಶಾಂತಿ ಮಾತುಕತೆಗೆ ಅಮೆರಿಕ ಮಧ್ಯಸ್ಥಿಕೆ ವಹಿಸಲಿದೆ. ಎರಡೂ ದೇಶಗಳ ಬಗ್ಗೆ ತಟಸ್ಥ ರಾಜತಾಂತ್ರಿಕ ನಿಲುವು ಹೊಂದಿರುವ ಯುಎಇ ಈ ಐತಿಹಾಸಿಕ ಮಾತುಕತೆಗೆ ಆತಿಥ್ಯ ವಹಿಸುತ್ತಿದ್ದು, ಜಗತ್ತಿನ ಗಮನ ಸೆಳೆದಿದೆ.
ಅಮೆರಿಕದ ಅಧಿಕಾರಿಗಳ ಪ್ರಕಾರ, ಈ ಮಾತುಕತೆಯು ಕೇವಲ ತಕ್ಷಣದ ಕದನ ವಿರಾಮಕ್ಕೆ ಸೀಮಿತವಾಗಿಲ್ಲ. ಯುದ್ಧ ಕೊನೆಗೊಂಡ ನಂತರ ಉಕ್ರೇನ್ಗೆ ಭವಿಷ್ಯದಲ್ಲಿ ಮತ್ತೆ ಆಕ್ರಮಣ ಎದುರಾಗದಂತೆ ನೀಡಬೇಕಾದ ‘ಯುದ್ಧೋತ್ತರ ಭದ್ರತಾ ಗ್ಯಾರಂಟಿ’ ರೂಪಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ. ರಷ್ಯಾ ಈ ಮಾತುಕತೆಯನ್ನು ಕೇವಲ ತ್ರಿಪಕ್ಷೀಯವಾಗಿ (ಅಮೆರಿಕ, ರಷ್ಯಾ, ಉಕ್ರೇನ್) ಇರಿಸಲು ಬಯಸಿದ್ದರೂ, ಯುರೋಪಿಯನ್ ಯೂನಿಯನ್, ನೇಟೋ (NATO) ಮತ್ತು E4 ರಾಷ್ಟ್ರಗಳ (ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ) ರಾಷ್ಟ್ರೀಯ ಭದ್ರತಾ ಸಲಹೆಗಾರರು ಅಬುಧಾಬಿಯಲ್ಲೇ ಪ್ರತ್ಯೇಕ ಸಮಾನಾಂತರ ಸಮನ್ವಯ ಸಭೆಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ರಷ್ಯಾ ಮತ್ತು ಉಕ್ರೇನ್ ನಡುವಿನ ಮಾತುಕತೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ಮಧ್ಯಪ್ರಾಚ್ಯದ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಅಮೆರಿಕ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ. ಅಮೆರಿಕದಿಂದ ಜೇರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕಾಫ್, ಉಕ್ರೇನ್ನಿಂದ ವಿದೇಶಿ ಗುಪ್ತಚರ ವಿಭಾಗದ ಮುಖ್ಯಸ್ಥ ಹಾಗೂ ಮುಖ್ಯ ಸಂಧಾನಕಾರ ರುಸ್ಟೆಮ್ ಉಮೆರೋವ್, ರಷ್ಯಾದಿಂದ ಉಪ ವಿದೇಶಾಂಗ ಸಚಿವರಾದ ಸೆರ್ಗೆಯ್ ರ್ಯಾಬ್ಕೋವ್ ಮತ್ತು ಮಿಖಾಯಿಲ್ ಗಲುಜಿನ್, ಕ್ರೆಮ್ಲಿನ್ ಸಲಹೆಗಾರ ವ್ಲಾಡಿಮಿರ್ ಮೆಡಿನ್ಸ್ಕಿ ಹಾಗೂ ಸೇನಾ ಗುಪ್ತಚರ ಮುಖ್ಯಸ್ಥ ಇಗೊರ್ ಕೊಸ್ಟ್ಯುಕೋವ್ ಇಂದಿನ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಪ್ರಧಾನಿ ಮೋದಿ ಮಾತುಕತೆ; ಯುದ್ಧದ ಶಾಂತಿಯುತ ಅಂತ್ಯಕ್ಕೆ ಬೆಂಬಲದ ಪುನರುಚ್ಚಾರ
ಇದು ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ 4ನೇ ಸುತ್ತಿನ ತ್ರಿಪಕ್ಷೀಯ ಮಾತುಕತೆಯಾಗಿದೆ. ಈ ಹಿಂದಿನ ಮೂರೂ ಸುತ್ತಿನ ಸಭೆಗಳು ಯಾವುದೇ ಪ್ರಮುಖ ರಾಜತಾಂತ್ರಿಕ ಫಲಿತಾಂಶವಿಲ್ಲದೆ ಕೊನೆಗೊಂಡಿದ್ದವು.
ಇಂದಿನ ಪ್ರಮುಖ ಚರ್ಚಾ ವಿಷಯಗಳು:
- ಯುದ್ಧಭೂಮಿಯಲ್ಲಿ ತಕ್ಷಣದ ಕದನ ವಿರಾಮ ಜಾರಿಗೊಳಿಸುವುದು.
- ಸಂಘರ್ಷ ಪೀಡಿತ ಪ್ರದೇಶಗಳಿಂದ ನಾಗರಿಕರ ಸುರಕ್ಷಿತ ಸ್ಥಳಾಂತರ ಮತ್ತು ಮಾನವೀಯ ನೆರವು ನೀಡುವುದು.
- ಗಡಿ ಭದ್ರತೆ, ಸಾರ್ವಭೌಮತ್ವ ಹಾಗೂ ಯುದ್ಧ ಕೈದಿಗಳ ಅದಲು-ಬದಲು ಕುರಿತು ಮಹತ್ವದ ಚರ್ಚೆ ನಡೆಸುವುದು.
ಈ ಶಾಂತಿ ಮಾತುಕತೆಯು ಪಾಸಿಟಿವ್ ಫಲಿತಾಂಶ ನೀಡಲಿದೆಯೇ ಹಾಗೂ ಯುದ್ಧದ ತೀವ್ರತೆ ತಗ್ಗಲಿದೆಯೇ ಎಂಬ ಕುರಿತು ಇಡೀ ಜಗತ್ತು ಅತ್ಯಂತ ಕುತೂಹಲದಿಂದ ಗಮನಿಸುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳು ಈಗಾಗಲೇ ಯುದ್ಧದ ಶಾಂತಿಯುತ ಅಂತ್ಯಕ್ಕೆ ಮಾತುಕತೆಯೇ ಏಕೈಕ ಮಾರ್ಗ ಎಂದು ಬೆಂಬಲಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

