ಮೀನಿನ ತುಂಡುಗಳಿಗೆ ಬೇಕಾದಷ್ಟು ಖಾರದ ಪುಡಿ, ಅರಿಶಿನ, ಧನಿಯಾ ಪುಡಿ, ಕಾಳುಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪನ್ನು ಸೇರಿಸಿ. ಇದರ ಜೊತೆಗೆ 1 ರಿಂದ 2 ಟೇಬಲ್ ಚಮಚ ಇಡ್ಲಿ ಹಿಟ್ಟನ್ನು ಹಾಕಿ. ಅಗತ್ಯವಿದ್ದಷ್ಟು ಮಾತ್ರ ನೀರು ಅಥವಾ ನಿಂಬೆ ರಸ ಸೇರಿಸಿ ಗಟ್ಟಿಯಾದ ಮಸಾಲೆ ಪೇಸ್ಟ್ ತರಹ ಕಲಸಿಕೊಳ್ಳಿ. ಈ ಮಸಾಲೆಯನ್ನು ಮೀನಿನ ತುಂಡುಗಳಿಗೆ ಸಂಪೂರ್ಣವಾಗಿ ಸವರಿಕೊಳ್ಳಿ. ಗಮನಿಸಬೇಕಾದ ಅಂಶ: ಇಡ್ಲಿ ಹಿಟ್ಟನ್ನು ಅತಿಯಾಗಿ ಸೇರಿಸಿದರೆ ಮೀನಿನ ನೈಸರ್ಗಿಕ ರುಚಿ ಕಳೆದುಹೋಗಬಹುದು. ಹಾಗಾಗಿ ಸ್ವಲ್ಪ ಮಾತ್ರ ಸೇರಿಸಬೇಕು.
ಮನೆಯಲ್ಲಿ ಇಡ್ಲಿ ಹಿಟ್ಟು ಇಲ್ಲದಿದ್ದರೆ, ಅದರ ಬದಲು ಅಕ್ಕಿ ಹಿಟ್ಟು ಅಥವಾ ಕಾರ್ನ್ ಫ್ಲೋರ್ ಬಳಸಬಹುದು. ಅಕ್ಕಿ ಹಿಟ್ಟು: ಮೀನಿನ ಹೊರಭಾಗ ಗರಿಗರಿಯಾಗಲು ಸಹಾಯ ಮಾಡುತ್ತದೆ. ಕಾರ್ನ್ ಫ್ಲೋರ್: ಮೀನಿನ ಮೇಲೆ ಮಸಾಲೆ ಚೆನ್ನಾಗಿ ಕೂರಲು ಮತ್ತು ತೆಳುವಾದ ಗರಿಗರಿ ಲೇಯರ್ ಬರಲು ಸಹಾಯ ಮಾಡುತ್ತದೆ.
ಮೀನು ಫ್ರೈನ ರುಚಿಯನ್ನು ಹೆಚ್ಚಿಸಲು ನಿಂಬೆ ರಸ ಸಹಾಯ ಮಾಡುತ್ತದೆ. ಮಸಾಲೆ ಕಲಸುವಾಗ ಸ್ವಲ್ಪ ನಿಂಬೆ ರಸ ಸೇರಿಸಿದರೆ ರುಚಿಯಲ್ಲಿ ಒಳ್ಳೆ ಬದಲಾವಣೆ ಕಾಣುತ್ತದೆ. ಅದೇ ರೀತಿ, ಸ್ವಲ್ಪ ಮೊಸರು ಸೇರಿಸಿಯೂ ಮಸಾಲೆ ಕಲಸಬಹುದು. ಇದು ಮೀನಿಗೆ ಮೃದುವಾದ ಟೆಕ್ಸ್ಚರ್ ಕೊಡಲು ಸಹಾಯ ಮಾಡುತ್ತದೆ. ಆದರೆ, ನಿಂಬೆ ರಸ ಅಥವಾ ಮೊಸರನ್ನು ಹೆಚ್ಚಾಗಿ ಸೇರಿಸಬೇಡಿ. ತೇವಾಂಶ ಹೆಚ್ಚಾದರೆ ಮಸಾಲೆ ಸರಿಯಾಗಿ ಅಂಟಿಕೊಳ್ಳದಿರಬಹುದು. ಮುಖ್ಯವಾಗಿ ಗರಿಗರಿಯಾದ ಮೀನು ಫ್ರೈಗೆ ಮಸಾಲೆ ಗಟ್ಟಿಯಾಗಿರುವುದು ಅಗತ್ಯ.ಮೀನಿಗೆ ಮಸಾಲೆ ಸವರಿದ ತಕ್ಷಣ ಎಣ್ಣೆಗೆ ಹಾಕಿ ಕರಿಯಬಾರದು. ಕನಿಷ್ಠ 20 ರಿಂದ 30 ನಿಮಿಷ ನೆನೆಯಲು ಬಿಡಬೇಕು. ಇದರಿಂದ ಮಸಾಲೆ ಮೀನಿಗೆ ಚೆನ್ನಾಗಿ ಹಿಡಿಯುತ್ತದೆ. ಕರಿಯುವಾಗ ಮಸಾಲೆ ಬಿಟ್ಟುಕೊಳ್ಳುವುದು ಕಡಿಮೆಯಾಗುತ್ತದೆ. ಮುಖ್ಯವಾಗಿ, ಮೀನನ್ನು ಮುಚ್ಚಿ ಫ್ರಿಡ್ಜ್ ನಲ್ಲಿಟ್ಟು ನೆನೆಯಲು ಬಿಡಿ. ರೂಮ್ ಟೆಂಪರೇಚರ್ ನಲ್ಲಿ ಹೆಚ್ಚು ಹೊತ್ತು ಇಡಬೇಡಿ.ಮೀನು ಫ್ರೈ ಗರಿಗರಿಯಾಗಿ ಬರಲು ಎಣ್ಣೆಯ ಬಿಸಿ ಕೂಡ ತುಂಬಾ ಮುಖ್ಯ. ಮೊದಲು ಬಾಣಲೆಯಲ್ಲಿ ಬೇಕಾದಷ್ಟು ಎಣ್ಣೆ ಹಾಕಿ ಮೀಡಿಯಂ ಫ್ಲೇಮ್ ನಲ್ಲಿ ಕಾಯಿಸಿ. ಎಣ್ಣೆ ಬಿಸಿಯಾದ ನಂತರ ಮೀನಿನ ತುಂಡುಗಳನ್ನು ಒಂದೊಂದಾಗಿ ಹಾಕಿ. ಒಂದೇ ಬಾರಿಗೆ ಹೆಚ್ಚು ಮೀನಿನ ತುಂಡುಗಳನ್ನು ಹಾಕಬೇಡಿ. ಒಂದು ಬದಿ ಚೆನ್ನಾಗಿ ಬೆಂದ ನಂತರ ಮತ್ತೊಂದು ಬದಿಗೆ ತಿರುಗಿಸಿ ಹಾಕಿ. ಮೀನನ್ನು ಪದೇ ಪದೇ ತಿರುಗಿಸಿದರೆ ಮುರಿದುಹೋಗುವ ಸಾಧ್ಯತೆ ಇರುತ್ತದೆ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿ ಗರಿಗರಿಯಾದಾಗ ತೆಗೆಯಬಹುದು. ಅತಿ ಹೆಚ್ಚು ಉರಿಯಲ್ಲಿ ಕರಿದರೆ ಹೊರಗಿನ ಮಸಾಲೆ ಬೇಗ ಸೀದುಹೋಗುತ್ತದೆ ಮತ್ತು ಒಳಗೆ ಮೀನು ಸರಿಯಾಗಿ ಬೇಯದಿರಬಹುದು. ಹಾಗಾಗಿ ಸಾಧಾರಣ ಉರಿಯಲ್ಲಿ, ಮೀನಿನ ದಪ್ಪಕ್ಕೆ ತಕ್ಕಂತೆ ಸಂಪೂರ್ಣವಾಗಿ ಬೇಯಿಸಿ ತೆಗೆಯಬೇಕು.
