ದೇಶದಲ್ಲೇ ಮೊದಲ ಅಪರೂಪದ ಉದಾಹರಣೆಯಾಗಿ ಕರ್ನಾಟಕದಲ್ಲಿ ಸೂಪರ್ಸ್ಟಾರ್ಗಳು ಸರ್ಕಾರಿ/ಸಹಕಾರಿ ರಂಗದ ಹಾಲು ಉತ್ಪಾದಕ ರೈತರ ಉತ್ಪನ್ನಗಳಿಗೆ ಉಚಿತ ಪ್ರಚಾರ ಮಾಡಿ ಬೆಂಬಲಿಸಿರುವುದು ಇತರರಿಗೆ ಮಾದರಿಯಾದಂತಹ ವಿಷಯವೂ ಹೌದು. ಅದರಲ್ಲಿ ಡಾ.ರಾಜಕುಮಾರ್, ಪುನೀತ್ ರಾಜಕುಮಾರ್, ಈಗ ಶಿವರಾಜಕುಮಾರ್, ಉಪೇಂದ್ರ ಅವರ ಬೆಂಬಲ ದೊಡ್ಡದು.
ಹಾಲು..
ಪ್ರತಿ ಮನುಷ್ಯನ ನಿತ್ಯದ ಸಂಗಾತಿ. ನೇರವಾಗಿ ಹಾಲು ಬಳಸುವುದು ಮಾತ್ರವಲ್ಲದೇ ಹಾಲಿನಿಂದ ತಯಾರಿಸಿದ ಬಗೆಬಗೆಯ ಉತ್ಪನ್ನಗಳೂ ಈಗ ಪ್ರಿಯ. ಇಂತಹ ವಸ್ತುವಿನ ಹಿಂದೆ ಜನರ ಅವಿನಾಭಾವ ಸಂಬಂಧ ಬೆಳೆಸಿದ್ದು ನಂದಿನಿ. ಕರ್ನಾಟಕ ರಾಜ್ಯ ಸಹಕಾರ ಹಾಲು ಮಹಾಮಂಡಳ( KMF)ಎನ್ನುವುದು ಬರೀ ಸಂಸ್ಥೆ ಅಲ್ಲವೇ ಅಲ್ಲ. ಅದು ಕೋಟ್ಯಂತರ ಜನರ ಜೀವ ನಾಡಿ. ಹಾಲಿನ ಕ್ರಾಂತಿಯಿಂದ ಅದೆಷ್ಟೋ ಕುಟುಂಬಗಳಿಗೆ ಆಸರೆಯೂ ಆಗಿದೆ. ಜನರ ಒಡನಾಡಿಯೂ ಆಗಿ ಹೆಮ್ಮೆರವಾಗಿ ಬೆಳೆದಿದೆ.
ಭಾರತದಲ್ಲಿ ಸ್ವಾತಂತ್ರ್ಯ ಬಂದ ಸಮಯ. ವಿವಿಧ ಕ್ಷೇತ್ರಗಳ ಪ್ರಗತಿಯ ನೀಲ ನಕ್ಷೆ ತಯಾರಿಸಲಾಗಿತ್ತು. ಭಾರತದಲ್ಲಿ ಸಹಕಾರ ವಲಯವೂ ಬೆಳೆಯುತ್ತಿತ್ತು. ಇಂತಹ ವೇಳೆಯೇ ಸಹಕಾರ ವಲಯದ ಮೂಲಕ ಹಾಲಿನ ಚಟುವಟಿಕೆಗೆ ಒತ್ತು ದೊರೆಯಿತು. ಗ್ರಾಮ ಮಟ್ಟದಲ್ಲೂ ಹಾಲಿನ ಸಹಕಾರ ಸಂಘಗಳನ್ನು ಸ್ಥಾಪಿಸಿ ಜನರಿಗೆ ಉದ್ಯೋಗ ನೀಡುವ ಜತೆಗೆ ಇದೊಂದು ಉದ್ಯೋಗ ಸರಪಳಿಯಾಗಿ ರೂಪಿಸುವ ಪ್ರಯತ್ನ ಗಟ್ಟಿಯಾಗಿಯೇ ನಡೆಯಿತು.
ಎಂ.ವಿ.ಕೃಷ್ಣಪ್ಪರ ಶ್ರಮ
ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಕರ್ನಾಟಕದಲ್ಲಿ ಪ್ರಮುಖ ಮತ್ತು ಲಾಭದಾಯಕ ಡೈರಿ ರೈತರ ಸಂಘಟನೆಯಾಗಿ ವಿಕಸನಗೊಂಡಿತು. ಇದಕ್ಕೆ ಬಲ ತುಂಬಿದವರು ಆಗ ಕೇಂದ್ರದಲ್ಲಿ ಸಚಿವರಾಗಿದ್ದ ಎಂ.ವಿ.ಕೃಷ್ಣಪ್ಪ ಅವರು. 1965ರಲ್ಲಿ ತಳಿ ಅಭಿವೃದ್ದಿಗೆ ಒತ್ತು ನೀಡಿ ಬೆಂಗಳೂರು ಡೈರಿಯನ್ನು ಅವರು ಆರಂಭಿಸಿದರು. 1975 ರಲ್ಲಿ, ವಿಶ್ವ ಬ್ಯಾಂಕ್ ನೆರವಿನ ಡೈರಿ ಅಭಿವೃದ್ಧಿ ಯೋಜನೆ ಕಾರ್ಯಗತಗೊಳಿಸಲು ಕರ್ನಾಟಕ ಡೈರಿ ಅಭಿವೃದ್ಧಿ ನಿಗಮ (ಕೆಡಿಡಿಸಿ) ಅನ್ನು ಒಂದು ಸಂಸ್ಥೆಯಾಗಿ ರಚಿಸಲಾಯಿತು.
ಕೆಡಿಡಿಸಿ ವೇಗವಾಗಿ ವಿಸ್ತರಣೆಯಾಗತೊಡಗಿತು. ಗ್ರಾಮೀಣ ಆರ್ಥಿಕ ಚಟುವಟಿಕೆಯನ್ನು - ಹೈನುಗಾರಿಕೆ - ರಾಜ್ಯಾದ್ಯಂತ ಹರಡಿ 1984 ರಲ್ಲಿ ಸರ್ವೋಚ್ಚ ಸಹಕಾರಿ ಸಂಸ್ಥೆ ಕೆಎಂಎಫ್ ರಚನೆಗೂ ದಾರಿ ಮಾಡಿಕೊಟ್ಟಿತು. ನಾಲ್ಕು ದಶಕದ ಹಾದಿಯಲ್ಲಿ ಕೆಎಂಎಫ್ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಮೂಲಕ ಗ್ರಾಮಮಟ್ಟಕ್ಕೂ ವಿಸ್ತರಣೆಗೊಂಡು ಹಲವರ ಬದುಕಿಗೆ ಭದ್ರ ಬುನಾದಿಯನ್ನು ಹಾಕಿದೆ.
ಕಾಲಘಟ್ಟ ಬದಲಾದಂತೆ ಕೆಎಂಎಫ್ ಹಾಲು ಉತ್ಪಾದನೆ ಹೆಚ್ಚಳಕ್ಕೆ ಒತ್ತು ಕೊಡುತ್ತಲೇ ಬಗೆಬಗೆಯ ಉತ್ಪನ್ನಗಳ ಮೂಲಕ ಮಾರಾಟದ ಜಾಲವನ್ನು ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ವಿಸ್ತರಿಸಿದೆ. ಈಗ ಹೊರ ದೇಶಕ್ಕೂ ಸೀಮೋಲ್ಲಂಘನ ಮಾಡಿರುವುದು ಹೆಮ್ಮೆಯ ಸಾಧನೆಯೇ ಸರಿ.
ಮುಂಚೆ ಹಾಲು, ಮೊಸರು, ತುಪ್ಪದಂತಯ ಉತ್ಪನ್ನಗಳಿಗೆ ಸೀಮಿತವಾಗಿದ್ದ ಕೆಎಂಎಫ್ ನಂದಿನಿ ಎನ್ನುವ ಬ್ರಾಂಡ್ ಮೂಲಕ ಉತ್ಪನ್ನಗಳನ್ನು ಜನರಿಗೆ ತಲುಪಿಸಿ, ಇನ್ನಷ್ಟು ಹತ್ತಿರವಾಗಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ.
ಹೊಸತನದ ಹಾದಿ
ನಂದಿನಿ ಉತ್ಪನ್ನಗಳನ್ನು ಮೊದಲು ಬಲ್ಕ್ ವೆಂಡಿಂಗ್ ಬೂತ್ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆ ನಂತರ ಅವುಗಳಿಗೆ ಪಾರ್ಲರ್ಗಳ ರೂಪ ನೀಡಲಾಯಿತು. ಬಳಿಕ ಪ್ರಾಂಚೈಸಿ ನೀಡಿ ಮಾರಾಟವನ್ನು ವಿಸ್ತರಣೆ ಮಾಡಲಾಯಿತು. ನಂದಿನಿ ಮಳಿಗೆಗಳೂ ಈಗ ಹೊಸ ಕಾಲಘಟ್ಟಕ್ಕೆ ಅನುಗುಣವಾಗಿ ಶಾಪಿಗಳ ರೂಪವನ್ನೂ ಪಡೆದುಕೊಂಡಿವೆ. ಪ್ರೊಟೀನ್ ಪ್ರಮಾಣ ಹೆಚ್ಚಿರುವ ಎನ್ ಪ್ರೊ ಹಾಲು ಪ್ರೊ ಬಯಾಟಿಕ್ ಮೊಸರು, ಪ್ರೊಬಯಾಟಿಕ್ ಮಾವು ಹಾಗೂ ಸ್ಟ್ರಾಬೆರಿ ಲಸ್ಸಿ, ಮೀಡಿಯಂ ಫ್ಯಾಟ್ ಪನೀರ್ ಕೂಡ ನಂದಿನಿಯ ವಿಶೇಷ ಉತ್ಪನ್ನಗಳು. ಹಾಲಿನಲ್ಲಿಯೇ ಹತ್ತಾರು ಬಗೆ, ಹಾಲಿನ ಪುಡಿ, ಮೈಸೂರು ಪಾಕ್, ಕೇಕ್ಗಳು, ಐಸ್ಕ್ರೀಂಗಳ ಸಹಿತ ವಿವಿಧ ಸ್ವಾದದ ಉತ್ಪನ್ನಗಳಿಂದ ‘ನಂದಿನಿ’ಜನರಿಗೆ ತಲುಪಿ ಸಹಕಾರ ವಲಯದ ಪ್ರಮುಖ ಬ್ರಾಂಡ್ ಆಗಿ ಹೊರ ಹೊಮ್ಮಿದೆ.
ಐಪಿಎಲ್–2026 ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು( ಆರ್ಸಿಬಿ) ತಂಡಕ್ಕೆ ಪ್ರಾಯೋಜಕತ್ವ ನೀಡಿದೆ. ಎರಡು ವರ್ಷದ ಹಿಂದೆ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡಿತ್ತು. ಈ ಬಾರಿ ಆರ್ಸಿಬಿ ತಂಡದ ಅಧಿಕೃತ ಡೈರಿ ಪಾಲುದಾರ ಆಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವೇ.
ಈ ಬ್ರಾಂಡ್ ಸುಮ್ಮನೇ ಬೆಳೆದಿರುವುದಲ್ಲ. ಭಾರತದಲ್ಲಿ ಅಮುಲ್ ಎನ್ನುವ ಸಂಸ್ಥೆಯನ್ನು ವರ್ಗೀಸ್ ಕುರಿಯನ್ ಅವರು ಬೆಳೆಸಿದ ರೀತಿ ಜಾಗತಿಕ ಮಾನ್ಯತೆ ಪಡೆದಿದೆ. ಅದೇ ಮಾದರಿಯಲ್ಲಿ ನಂದಿನಿ ಕೂಡ ದೊಡ್ಡದಾಗಿ ಬೆಳೆದಿದೆ. ಹಳ್ಳಿಗಳಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಸುವಿನಿಂದ ಪಡೆದ ಹಾಲಿನಿಂದ ಆರಂಭಿಸಿ ಅದು ಡೈರಿಗಳನ್ನು ತಲುಪಿ ಸಂಸ್ಕರಣೆಗೊಂಡು ವಿವಿಧ ರೂಪಗಳನ್ನು ಪಡೆದು ಜನರ ಬಾಯಿ ರುಚಿ ತಣಿಸುವವರೆಗೂ ತಲುಪಿದೆ. ಇದರೊಟ್ಟಿಗೆ ಹಲವಾರು ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು, ಹಾಲು ಹಾಗೂ ಉತ್ಪನ್ನಗಳ ಮಾರಾಟಗಾರೆಗೂ ಈ ಶ್ರಮದ ಸರಪಳಿ ಸಾಗುತ್ತದೆ.
ಅಣ್ಣಾವ್ರ ಬೆಂಬಲ
ಇಂತಹ ಬ್ರಾಂಡ್ ಜನಮಾನಸದಲ್ಲಿ ನಿಲ್ಲಲು ಹಲವಾರು ನಟರ ಹೃದಯವೈಶಾಲ್ಯವನ್ನು ನೆನಪಿಸಿಕೊಳ್ಳಬೇಕು. ಅದರಲ್ಲೂ ಕನ್ನಡದ ವರನಟ ಡಾ.ರಾಜಕುಮಾರ್ ಅವರು ಸಹಕಾರಿ ಸಂಸ್ಥೆಯೊಂದರ ಉತ್ಪನ್ನಗಳಿಗೆ ರಾಯಭಾರಿಯಾಗಿ ಭಾಗಿಯಾಗಿದರು. ಅದೂ ಯಾವುದೇ ಸಂಭಾವನೆ ಪಡೆಯದೇ ರೈತರ ಉಳಿವಿಗೆ ನಾನೂ ಕೈ ಜೋಡಿಸುವೆ ಎಂದು ಮನಸಾರೆ ಒಪ್ಪಿ ಅದರಂತೆ ನಡೆದುಕೊಂಡಿದ್ದ ಡಾ.ರಾಜಕುಮಾರ್ ಅವರ ಹಿರಿಮೆ.
ಕೆಎಂಎಫ್ ಘಟಕದಲ್ಲಿ ಪ್ರಧಾನ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ನನಗೆ 1975 ರಿಂದಲೂ ಪರಿಚಯವಾಗಿ ಆಪ್ತತೆ ಹೊಂದಿದ್ದ ರಾಜಕುಮಾರ್ ಅವರಿಗೆ ಇಂತಹದೊಂದು ಪ್ರಸ್ತಾವನೆಯನ್ನು 1994 ರಲ್ಲಿ ಇಟ್ಟಾಗ ಖುಷಿಯಿಂದಲೇ ಒಪ್ಪಿಕೊಂಡರು. ಬರೀ ಮೌಖಿಕವಾಗಿ ಅವರು ನೀಡಿದ ಒಪ್ಪಿಗೆ ಅವರ ದೊಡ್ಡತನ ತೋರುತ್ತದೆ. ಮುಂದೆ ನಂದಿನಿ ಹಾಲಿನ ಹೊಸ ಉತ್ಪನ್ನ ಬಿಡುಗಡೆ ಮಾಡಿಸಲು ಯೋಜಿಸಿದೆ. ಎಂದಿನಂತೆ ಪ್ರೀತಿಯಿಂದ ನನ್ನ ಮನವಿ ಒಪ್ಪಿ ಕಂಠೀರವ ಕ್ರೀಡಾಂಗಣದಲ್ಲಿ ನಂದಿನಿ ಉತ್ಪನ್ನ ಬಿಡುಗಡೆ ಮಾಡಿದರು .
ಅವರ ನಂತರ ನಾನು ವ್ಯವಸ್ಥಾಪಕ ನಿರ್ದೇಶಕನಾಗಿದ್ದಾಗ ಪುನೀತ್ ರಾಜಕುಮಾರ್ ಕೂಡ ಅಪ್ಪನಂತೆಯೇ ಸರಳತೆ ಮೆರೆದು, ಯಾವುದೇ ಒಪ್ಪಂದವಿಲ್ಲದೇ ನಂದಿನಿ ರಾಯಭಾರಿಯಾದರು. ಈ ಮಧ್ಯೆ 2003 ರಿಂದ 2009 ವರೆಗೂ ನಟ ಉಪೇಂದ್ರ ಕೂಡ ನನ್ನ ಮನವಿಗೆ ತಕ್ಷಣ ಒಪ್ಪಿಗೆ ನೀಡಿ ಉಚಿತವಾಗಿಯೇ ಪ್ರಚಾರ ನಡೆಸಿದರು. ಈಗ ಶಿವರಾಜ್ ಕುಮಾರ್ ಕೂಡ ಪ್ರಚಾರ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ. ನಟಿ ಸುಧಾರಾಣಿ ಬಮುಲ್ನ ರಾಯಭಾರಿಯೂ ಆಗಿರುವುದು ಸಂತಸದಾಯಕ.
’ನಂದಿನಿ’ ಎಂಬ ಕನ್ನಡದ ಅಸ್ಮಿತೆ; ಬ್ರಾಂಡ್ ಬೆಳೆಯಲು ಅಣ್ಣಾವ್ರು ತೋರಿದ ಸಹೃದಯತೆ
ಒಂದು ಸಾಲಿನಲ್ಲಿನಂದಿನಿ ಬ್ರಾಂಡ್ ಕೇವಲ ಹಾಲಿನ ಉತ್ಪನ್ನವಲ್ಲ, ಅದು ಕರ್ನಾಟಕದ ಅಸ್ಮಿತೆ ಹಾಗೂ ಸಹಕಾರ ತತ್ವದ ಮೂಲಕ ರೈತರ ಬದುಕಿಗೆ ಆಸರೆಯಾಗಿರುವ ಹೆಮ್ಮೆಯ ಸಂಸ್ಥೆಯಾಗಿದೆ.ಏನು? ಏಕೆ? ಹೇಗೆ?ನಂದಿನಿ ಸಂಸ್ಥೆಯ ಹಿನ್ನೆಲೆ ಏನು?
1975ರಲ್ಲಿ ಕೆಡಿಡಿಸಿ ಸ್ಥಾಪನೆಯಾಗಿ, ನಂತರ 1984ರಲ್ಲಿ ಕೆಎಂಎಫ್ (KMF) ಉನ್ನತ ಸಹಕಾರಿ ಸಂಸ್ಥೆಯಾಗಿ ರೂಪುಗೊಂಡು ಗ್ರಾಮೀಣ ಹೈನುಗಾರಿಕೆಗೆ ಭದ್ರ ಬುನಾದಿ ಹಾಕಿತು.
ನಂದಿನಿ ಬ್ರಾಂಡ್ ಬೆಳವಣಿಗೆಗೆ ಯಾರ ಕೊಡುಗೆ ಮುಖ್ಯ?
ಎಂ.ವಿ. ಕೃಷ್ಣಪ್ಪನವರ ದೂರದೃಷ್ಟಿ ಮತ್ತು ಸಹಕಾರ ವಲಯದ ಉತ್ತೇಜನದಿಂದ ನಂದಿನಿ ಸಂಸ್ಥೆಯು ರಾಜ್ಯಾದ್ಯಂತ ವಿಸ್ತರಣೆಯಾಗಿ ಲಾಭದಾಯಕ ಡೈರಿ ಒಕ್ಕೂಟವಾಗಿ ಬೆಳೆಯಿತು.
ಡಾ. ರಾಜಕುಮಾರ್ ಅವರ ಕೊಡುಗೆ ಏನು?
ನಂದಿನಿ ಬ್ರಾಂಡ್ ಜನಪ್ರಿಯವಾಗಲು ಯಾವುದೇ ಸಂಭಾವನೆ ಪಡೆಯದೆ, ಸ್ವಯಂಪ್ರೇರಿತರಾಗಿ ರಾಯಭಾರಿಯಾಗಿ ಕೆಲಸ ಮಾಡುವ ಮೂಲಕ ರೈತರ ಪರವಾದ ತಮ್ಮ ಸಹೃದಯತೆಯನ್ನು ರಾಜಕುಮಾರ್ ತೋರಿದರು.
ನಂದಿನಿಯ ಪ್ರಮುಖ ಉತ್ಪನ್ನಗಳು ಯಾವುವು?
ಹಾಲು, ಮೊಸರು, ತುಪ್ಪದ ಜೊತೆಗೆ ಎನ್-ಪ್ರೊ ಹಾಲು, ಪ್ರೊಬಯಾಟಿಕ್ ಮೊಸರು, ಮೈಸೂರು ಪಾಕ್, ಐಸ್ಕ್ರೀಂ ಸೇರಿದಂತೆ ಹತ್ತಾರು ಹೊಸ ಮಾದರಿಯ ಉತ್ಪನ್ನಗಳನ್ನು ನಂದಿನಿ ಮಾರುಕಟ್ಟೆಗೆ ತಂದಿದೆ.
ಪ್ರಸ್ತುತ ನಂದಿನಿ ಬ್ರಾಂಡ್ ಯಾವ ಮಟ್ಟದಲ್ಲಿದೆ?
ಇಂದು ನಂದಿನಿ ಉತ್ಪನ್ನಗಳು ದೇಶವಿದೇಶಗಳಿಗೆ ರಫ್ತಾಗುತ್ತಿದ್ದು, ಐಪಿಎಲ್ನಂತಹ ದೊಡ್ಡ ವೇದಿಕೆಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲುದಾರನಾಗುವ ಮಟ್ಟಕ್ಕೆ ಬೆಳೆದಿದೆ.
&ಪ್ರಮುಖ ಅಂಕಿಅಂಶಗಳು1984ಕೆಎಂಎಫ್ ರಚನೆಯಾದ ವರ್ಷ1965ಬೆಂಗಳೂರು ಡೈರಿ ಆರಂಭದ ವರ್ಷ1975ಕೆಡಿಡಿಸಿ ರಚನೆಯಾದ ವರ್ಷ53ನಂದಿನಿ ಜನರಿಗೆ ಸೇವೆ ಸಲ್ಲಿಸುತ್ತಿರುವ ವರ್ಷಗಳುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆಜನರ ನಂಟು
‘ಗೋವಿನಿಂದ ಗ್ರಾಹಕರವರೆಗೆ’ಎನ್ನುವ ಘೋಷವಾಕ್ಯ, ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಬಗೆಬಗೆಯ ಉತ್ಪನ್ನಗಳು ಜನರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವ ಜತೆಗೆ ಜನರಿಗೆ ಉದ್ಯೋಗ ನೀಡುವುದಕ್ಕೂ ಒತ್ತು ನೀಡುತ್ತಿದೆ. ನಂದಿನಿ ಉತ್ಪನ್ನಗಳನ್ನು 53 ವರ್ಷದಿಂದ ತಲುಪಿಸುವ ಮೂಲಕ ಕೆಎಂಎಫ್ ಜನರಿಗೆ ಹತ್ತಿರವಾಗಿದೆ.
ಮೊದಲೆಲ್ಲ ಹಾಲು, ಮೊಸರು, ತುಪ್ಪದಂತಹ ಉತ್ಪನ್ನಗಳು ಮಾತ್ರ ಸಿಗುತ್ತಿದ್ದವು. ಒಂದು ದಶಕದ ಈಚೆಗೆ ಉತ್ಪನ್ನಗಳನ್ನು. ಹೊರ ರಾಜ್ಯ, ದೇಶಗಳಿಗೂ ಸೇವೆ ವಿಸ್ತರಿಸುತ್ತಿದ್ದು ಜನರ ಆರ್ಥಿಕ ಬೆನ್ನೆಲೆಬಾಗಿ ಕನ್ನಡದ ಅಸ್ಮಿತೆಯಂತೆ ರೂಪುಗೊಂಡಿದೆ. ಈ ಪಯಣದಲ್ಲಿ ನಾನೂ ಇದ್ದು, ಇಂತ ಸಂಸ್ಥೆ ಬೆಳೆಯಲು ಎಲ್ಲರೊಂದಿಗೆ ಜತೆಗೂಡಿದ ಆ ಕ್ಷಣಗಳೂ ಸದಾ ಸ್ಮರಣೀಯ.
( ಲೇಖಕರು: ಕೆಎಂಎಫ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು)
ಪ್ರಜಾವಾಣಿ ಕರುನಾಡೋತ್ಸವ| ಗಡಿನಾಡ ಪರಂಪರೆಯ ‘ನಾಡೋಜ ಕಯ್ಯಾರ ಕಿಞ್ಞಣ್ಣ ರೈ’ಕರುನಾಡೋತ್ಸವ: ಸಹ್ಯಾದ್ರಿ ಕಣಿವೆ ಅರ್ಥೈಸಿಕೊಳ್ಳಲು ನಾವು ಸೋಲುತ್ತಿರುವುದೆಲ್ಲಿ?ಕರುನಾಡೋತ್ಸವ: ಕರಾವಳಿ ಅಡುಗೆಮನೆಗಳ ಕಥೆ ಹೇಳುವ ಪುರಾತನ ಇಡ್ಲಿ ಪಾತ್ರೆಗಳುಕರ್ನಾಟಕ ರಾಜ್ಯೋತ್ಸವ: ಅನುಮತಿ ಇಲ್ಲದೆಯೂ ಬೆಳಗಾವಿಯಲ್ಲಿ ಕರಾಳ ದಿನ ಆಚರಿಸಿದ MESಕರುನಾಡೋತ್ಸವ: ಬ್ರಾಹ್ಮಿಯಿಂದ ಅರಳಿದ 'ಕನ್ನಡ' ಲಿಪಿಕರುನಾಡೋತ್ಸವ: ರಾಜ್ಯವೊಂದು ಹಲವು ಭಾಷೆ
