ಮುಂಬಯಿ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಮುಂಬೈನಲ್ಲಿರುವ ತಮ್ಮ ನಿವಾಸದ ಹೊರಗೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲು ಬುಲೆಟ್ಪ್ರೂಫ್ (ಗುಂಡು ತೂರದ) ಗಾಜಿನ ಹಿಂದೆ ಕಾಣಿಸಿಕೊಂಡಿದ್ದಕ್ಕೆ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಚಲನಚಿತ್ರ ಉದ್ಯಮಕ್ಕೆ ಭದ್ರತೆಯನ್ನು ಒದಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಭಾನುವಾರ ಈ ಬುಲೆಟ್ ಪ್ರೂಫ್ ಗಾಜನ್ನು ತೆಗೆದುಹಾಕಲಾಗಿದೆ ಎಂದು ಹೇಳಿರುವ ಸಾವಂತ್, ಸಾರ್ವಜನಿಕ ಟೀಕೆಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಅಥವಾ ಆಡಳಿತಾರೂಢ ಬಿಜೆಪಿ ಒತ್ತಡದಿಂದಾಗಿ ಹೀಗೆ ಮಾಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದರ ಹಿಂದಿನ ಕಾರಣ ಸ್ವತಃ ಅಮಿತಾಭ್ ಬಚ್ಚನ್ ಅವರಿಗೇ ತಿಳಿದಿರಬಹುದು ಎಂದು ಅವರು ಹೇಳಿದರು.
"ಬುಲೆಟ್ಪ್ರೂಫ್ ಗಾಜನ್ನು ತೆಗೆದುಹಾಕಿರಬಹುದು, ಆದರೆ ಬಾಲಿವುಡ್ ನಟರು, ಕಲಾವಿದರು, ನಿರ್ಮಾಪಕರು ಮತ್ತು ನಿರ್ದೇಶಕರ ಮನಸ್ಸಿನಲ್ಲಿರುವ ಭಯ ಯಾವಾಗ ದೂರವಾಗುತ್ತದೆ?" ಎಂದು ಅವರು ಕೇಳಿದರು.
ಚಲನಚಿತ್ರ ಉದ್ಯಮಕ್ಕೆ ಯಾವಾಗ ಸುರಕ್ಷಿತ ವಾತಾವರಣವನ್ನು ಕಲ್ಪಿಸಲಾಗುತ್ತದೆ ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರಿಸಬೇಕು ಎಂದು ಸಾವಂತ್ ಆಗ್ರಹಿಸಿದರು.
ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಿವಾಸ, ದಿಲ್ಜಿತ್ ದೋಸಾಂಜ್ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಸ್ಫೋಟದ ಬೆದರಿಕೆ! ಇಮೇಲ್ ಸಂದೇಶಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ಭಯದ ವಾತಾವರಣ ಸೃಷ್ಟಿಸಲು ಕಾರಣನಾದ ವ್ಯಕ್ತಿಯು ಗುಜರಾತ್ನ ಸಬರಮತಿ ಜೈಲಿನಲ್ಲಿ "ಸುಖವಾಗಿ" ಇದ್ದಾನೆ, ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಮತ್ತು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ—ಈ "ಡಬಲ್ ಇಂಜಿನ್" ಸರ್ಕಾರಗಳು ವಿಫಲವಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಅಮಿತಾಭ್ ಬಚ್ಚನ್ ಅವರು ಮುಂಬೈನ ಜುಹು ಪ್ರದೇಶದಲ್ಲಿರುವ ತಮ್ಮ 'ಜಲ್ಸಾ' ಬಂಗಲೆಯ ಹೊರಗೆ ಜಮಾಯಿಸುವ ಅಭಿಮಾನಿಗಳನ್ನು ಹಲವು ವರ್ಷಗಳಿಂದ ಹೀಗೆಯೇ ಭೇಟಿಯಾಗುತ್ತಾ ಬಂದಿದ್ದಾರೆ. ಆದರೆ, ಕಳೆದ ವಾರ ಅವರು ಮೊದಲ ಬಾರಿಗೆ ಬುಲೆಟ್ಪ್ರೂಫ್ ಗಾಜಿನ ಹಿಂದೆ ಕಾಣಿಸಿಕೊಂಡಿದ್ದು ವಿರೋಧ ಪಕ್ಷದ ನಾಯಕರ ಟೀಕೆಗೆ ಕಾರಣವಾಯಿತು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದು ಅವರು ವಾದಿಸಿದರು.
ನಟನ ನಿವಾಸದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮುಂಬೈ ಮೇಯರ್ ರಿತು ತಾವ್ಡೆ ಅವರಿಗೆ ಇಮೇಲ್ ಮೂಲಕ ಬೆದರಿಕೆ ಬಂದ ನಂತರ, ಈ ಹೆಚ್ಚುವರಿ ಭದ್ರತಾ ಕ್ರಮವನ್ನು ಕೈಗೊಳ್ಳಲಾಗಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಬಾಲಿವುಡ್ನ ಹಲವು ಗಣ್ಯರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಬೆದರಿಕೆಗಳು ಬಂದಿವೆ ಎಂದು ವರದಿಯಾಗಿದೆ.

